ಭಾರ್ಗವಿ ಮೇಡಂ ಆಗಿದ್ದವರು ನಂತರ ನನ್ನ ನಿಜವಾದ ಅಮ್ಮನೇ ಆಗಿಬಿಟ್ಟಿದ್ದರು: ವಿದ್ಯಾ ಮೂರ್ತಿ ಮನದಾಳದ ಮಾತು
ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಅವರು ನಿಧನ ಹೊಂದಿದ್ದಾರೆ. ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ. ರಂಗಭೂಮಿ ಕಲಾವಿದೆ, ಹಿರಿಯ ನಟಿ ವಿದ್ಯಾ ಮೂರ್ತಿ ಅವರು ಭಾರ್ಗವಿ ಜತೆಗಿನ ಒಡನಾಟವನ್ನುಟಿವಿ9 ಕನ್ನಡದ ಜತೆ ಹಂಚಿಕೊಂಡಿದ್ದಾರೆ.
ಈ , ಭಾರ್ಗವಿ ಮೇಡಂ, ನನ್ನ ಪಾಲಿಗೆ ಭಾಗಿ ಅಮ್ಮನಾಗಲು ಹೆಚ್ಚು ಸಮಯ ಹಿಡಿಯಲೇ ಇಲ್ಲ. ಅವರನ್ನು ಎಷ್ಟೋ ವರ್ಷಗಳ ಹಿಂದೆ,ನನ್ನ ತವರು ಮನೆಗೆ ಬರುತ್ತಿದ್ದಾಗಿನಿಂದ ನೋಡುತ್ತಾ ಬಂದಿದ್ದೇನೆ ಗೊತ್ತಾ?. ಆಶ್ಚರ್ಯವೇ ! ಹೇಳ್ತೀನಿ ಕೇಳಿ. ನನ್ನ ಬಾಲ್ಯ, ಶಾಲೆ, ಕಾಲೇಜು ಎಲ್ಲಾ ನೆರವೇರಿದ್ದು ವೆಸ್ಟ್ ಗೇಟ್ ಲಾಲ್ಬಾಗ್ ಬಳಿಯಿದ್ದ ಮನೆಯಲ್ಲಿ. ಆ ಮನೆಯ ಓನರ್, ನಮ್ಮ ಭಾಗಿ ಅಮ್ಮನಿಗೆ ಬಳಗ. ಓನರ್ ಮಗಳು, ನಾನು ಕೊರಳಗೆಳತಿಯರು. ಮೂರು ಹೊತ್ತು ನಾನು ಅವರ ಮನೆಯಲ್ಲೇ. ಹಾಗಾಗಿ,ನನ್ನ ಗೆಳತಿಯ ಅಜ್ಜಿಯನ್ನು ನೋಡಲು ಆಗಾಗ ಅವರ ಮನೆಗೆ ಬರುತ್ತಿದ್ದ ಭಾರ್ಗವಿ ಮೇಡಂ ನನಗೂ ಪರಿಚಯ. ಜೊತೆಗೆ, ಒಳ್ಳೆಯ ನೃತ್ಯ ಪಟು, ನಟ, ಎಲ್ಲಾ ಆಗಿದ್ದ ನನ್ನ ಅಣ್ಣ ಜಿ.ಕೆ. ಜಗದೀಶ, ಮೇಕಪ್ ನಾಣಿ ಮಾಮನ ಅಚ್ಚುಮೆಚ್ಚಿನ ಶಿಷ್ಯ. ಆಗೆಲ್ಲ ಅವನು, ದಿ.ಕೆ ವಿ ಅಯ್ಯರ್ ಅವರ ರವಿ ಆರ್ಟಿಸ್ಟ್ಸ್, ಹಿಸ್ಟ್ರಿಯಾನಿಕ್ ಕ್ಲಬ್, ನಟರಂಗ, ತಂಡಗಳ ನಾಟಕಗಳಲ್ಲಿ ನಟಿಸಿ, ಒಳ್ಳೆಯ ನಟನೆಂದು ಹೆಸರು ಗಳಿಸಿದ್ದ. ಅವನಿಗೆ ನಾಣಿಮಾಮನದೇ ಮೇಕಪ್. ಅವರು, ಜಿ.ಕೆ.ಜಗದೀಶನ ಚುರುಕುತನ ಕಂಡು, ಜಿಂಕೆ ಜಗದೀಶ ಎಂದೇ ಕರೆಯುತ್ತಿದ್ದರು.
ಭಾರ್ಗವಿ ಮೇಡಂಗೂ, ಅವನೆಂದರೆ, ಅವನ ನೃತ್ಯ, ನಟನೆಯೆಂದರೆ ಸಾಕಷ್ಟು ಖುಷಿ. ಅವನ ತಂಗಿ ನಾನೆಂದು, ಅವರಿಗೆ ತಿಳಿದಾಗ ಭಾರ್ಗವಿ ಮೇಡಂಗೆ ಖುಷಿಯಾಗಿತ್ತು. ಅವರು ನನ್ನ ಗೆಳತಿಯ ಮನೆಗೆ, ಮುದ್ದು ಮುದ್ದಾಗಿದ್ದ ಪುಟ್ಟ ಸುಧಾಳನ್ನು ಜೊತೆಯಲ್ಲಿ ಕರೆದುಕೊಂಡು ಬಂದಾಗಲೆಲ್ಲ, ನಾನು ಅವರ ಪಕ್ಕ ಬಿಟ್ಟು ಕದಲುತ್ತಿರಲಿಲ್ಲ. ನಿರರ್ಗಳವಾಗಿ, ಕನ್ನಡ, ಇಂಗ್ಲಿಷ್, ತೆಲಗಿನಲ್ಲಿ ಮಾತನಾಡುವ, ಅಂದಿನ ಕಾಲಕ್ಕೆ ಸಾಕಷ್ಟು ಸ್ಟೈಲಿಷ್ ಆಗಿ, ಕಳೆಕಳೆಯಾಗಿದ್ದ ಅವರನ್ನು ನೋಡುತ್ತಾ ಕುಳಿತರೆ, ಬೇರೊಬ್ಬರ ಮನೆಗೆ, ಅವರ ಅತಿಥಿಗಳು ಬಂದಾಗ ಮೂರನೆಯವರು ಅಲ್ಲಿರಬಾರದೆಂಬ ಸಾಮಾನ್ಯ ಜ್ಞಾನವೂ ಮರೆಯಾಗಿ ಹೋಗುತ್ತಿತ್ತು.
ನನ್ನ ಗೆಳತಿಯ ಅಮ್ಮ, ‘ಸುಧಾ ನಿ ಪಿಲಚಕೊನಿ, ಔತಲ ಪೋಯಿ ಆಡಕೊಂಡ’ ( ಸುಧಾಳನ್ನು ಕರಕೊಂಡು ಹೊರಗೆ ಹೋಗಿ ಆಡಿಕೊಳ್ಳಿ) ಎನ್ನುವವರೆಗೂ ಅಲ್ಲೇ ತಟಸ್ಥ. ಹೀಗೆ ಆರಂಭವಾದ ನಮ್ಮ ಪರಿಚಯ,ನಾನು ಕಾಲೇಜು ಮೆಟ್ಟಿಲು ಹತ್ತಿ,ಮದುವೆಯಾಗವವರೆಗೂ ಮುಂದುವರೆದಿತ್ತು. ಅದೂ, ‘ನಟರಂಗ’ ತಂಡದವರಿಂದ ಪ್ರದರ್ಶಿತ ವಾಗುತ್ತಿದ್ದ, ಮಾಸ್ತಿಯವರ, ‘ಕಾಕನಕೋಟೆ’ ನಾಟಕದ ತಾಲೀಮಿನ ದಿನಗಳಲ್ಲಂತೂ ನನಗಾಗುತ್ತಿದ್ದ ಸಂಭ್ರಮ ವರ್ಣಿಸಲಸದಳ. ಕಾರಣ, ಈ ತಾಲೀಮು, ನಡೆಯುತ್ತಿದ್ದುದು ಬಹುತೇಕವಾಗಿ ಮೇಡಂ ಮನೆಯಲ್ಲಿಯೆ. ನಾನು ನಾಟಕದಲ್ಲಿ ಅಭಿನಯಿಸಬಾರದೆಂದು ಮನೆಯಲ್ಲಿ ಕಟ್ಟಪ್ಪಣೆ ಮಾಡಿದ್ದರೂ, ಆ ನಾಟಕದಲ್ಲಿ, ‘ಒಂದು ದಿನ ಕರಿಹೈದ….’ ಎಂಬ ಗೀತೆಗೆ ನನ್ನಣ್ಣ ನರ್ತಿಸುತ್ತಿದ್ದರಿಂದ, ಹಿಮ್ಮೇಳದಲ್ಲಿ ನನಗೂ ಹಾಡಲು ಅನುಮತಿಯಿತ್ತಾದ್ದರಿಂದ, ನಾನೂ ಅವನ ಜೊತೆ ತಾಲೀಮಿಗೆಂದು ಮೇಡಂ ಮನೆಗೆ ಹೋಗುತ್ತಿದ್ದೆ. ಶ್ರೀಯುತರುಗಳಾದ, ಸಿ.ಅಶ್ವತ್ಥ್, ಕಪ್ಪಣ್ಣ, ಚಿಂತಾಮಣಿ ಇವರೆಲ್ಲರ ಮಾತುಕತೆ, ಹಾಡು, ಕುಣಿತ ನಗೆ ಚಾಟಿಕೆ, ತಾಲೀಮು, ಮಧ್ಯೆ ಮಧ್ಯೆ, ತಿಂಡಿ ತೀರ್ಥ…. ಇವೆಲ್ಲದರ ನಡುವೆ ಸಮಯ ಹೋಗುತ್ತಿದ್ದುದೇ ತಿಳಿಯುತ್ತಿರಲಿಲ್ಲ, ರಾತ್ರಿ ಹನ್ನೆರಡೂ ಮೀರುತ್ತಿತ್ತು. ಆಗೆಲ್ಲ, ಮೇಡಂ ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನನಗಂತೂ ಅವರ ಮಾತು,ನಟನೆ, ಸೌಜನ್ಯ ಎಲ್ಲವೂ ಒಂದು ಅದ್ಭುತದಂತೆ ಭಾಸವಾಗುತ್ತಿತ್ತು. ಆದರೆ ಈ ರೀತಿಯ ಭಾಗ್ಯವೆಲ್ಲ, ನನ್ನ ಅಣ್ಣನಿಗೆ ದೂರದ ಲಕ್ನೋದಲ್ಲಿ ಕೆಲಸ ಸಿಕ್ಕು, ಅವನು ಬೆಂಗಳೂರು ಬಿಟ್ಟನಂತರ ತಪ್ಪಿಯೇ ಹೋಯಿತು. ನನಗಂತೂ, ಮದುವೆಗೆ ಮುಂಚೆ ಯಾಗಲೀ, ನಂತರವಾಗಲಿ ಅಭಿನಯ ಕ್ಷೇತ್ರಕ್ಕೆ ನಾನು ಕಾಲಿಡಬಹುದೆಂದು ಕನಸಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅಂಥದ್ದರಲ್ಲಿ, ನಾನು ಮೇಡಂ ಅವರನ್ನು ಭೇಟಿಯಾಗುವುದಂತೂ ಕನಸಿನ ಮಾತು.
ಆದರೆ, ನನ್ನ ಸೌಭಾಗ್ಯ, ನಾನೂ ಈ ಕ್ಷೇತ್ರಕ್ಕೆ ಹೆಜ್ಜೆಯಿಡುವಂತಾದಾಗ ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. ಅದಕ್ಕೆ ಮೊದಲು ನನಗೆ ಅವಕಾಶ ಮಾಡಿ ಕೊಟ್ಟ ವರು, ಜಯನಗರ್ ನ್ಯಾಷನಲ್ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ, ಡಾ.ಗೀತಾ ರಾಮಾನುಜಮ್ ಅವರು. ಅವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸುವಾಗ ನನಗೆ ಮತ್ತೆ ಭಾರ್ಗವಿ ಮೇಡಂ ಅವರ ಒಡನಾಟ ಲಭಿಸಿತು. ಜೊತೆಗೆ ಉಪಾಸನೆ ಸೀತಾರಾಂ, ಬಿ.ಆರ್.ಜಯರಾಂ, ವಾಸುದೇವರಾವ್, ಎಸ್.ಕೆ.ಮಾಧವರಾವ್ರಂತಹ ಮೇರು ಕಲಾವಿದರೊಡನೆ ಅಭಿನಯಿಸುವ ಅವಕಾಶವೂ ದೊರಕಿತ್ತು. ನನ್ನ ಅದೃಷ್ಟ ಚೆನ್ನಾಗಿತ್ತೇನೋ, ಈ ಕ್ಷೇತ್ರದಲ್ಲಿರುವ ಮೇರು ನಟರೊಡನೆ, ನಿರ್ದೇಶಕರೊಡನೆ ಅಭಿನಯಿಸುವ ಅವಕಾಶ ಒದಗಿತ್ತು. ಟಿ.ಎನ್.ಎಸ್.ಸರ್ ಅವರ ಖ್ಯಾತ ಧಾರಾವಾಹಿ ‘ಮುಕ್ತ’ದಲ್ಲಿ ನಟಿಸುವ ಸುವರ್ಣಾವಕಾಶ ದೊರಕಿತು. ಅದರಲ್ಲಿ ಭಾರ್ಗವಿ ಮೇಡಂ ಜೊತೆ ನಟಿಸಬೇಕೆಂದು ತಿಳಿದಾಗಲಂತೂ ನನ್ನ ಮನಸ್ಸಿಗೆ ಲಂಗುಲಗಾಮಿಲ್ಲದ ಸಂತೋಷ. ಶೂಟಿಂಗ್ ಸೆಟ್ನಲ್ಲಿ, ಕಿರಿಯರೊಂದಿಗೆ ಕಿರಿಯರೇ ಆಗಿಬಿಡುತ್ತಿದ್ದ ಅವರನ್ನು ಕಂಡರೆ ನನಗೆ ಅಚ್ಚರಿ, ವಯಸ್ಸಿನಲ್ಲಿ ಹಿರಿಯರಾದವರು, ಕಿರಿಯರಿಗೆ ಮುಜುಗರವಾಗದಂತೆ, ಇಷ್ಟು ಸಲೀಸಾಗಿ ಬೆರೆಯುವುದು ಸಾಧ್ಯವೇ ಎಂದು. ಅಂದಿನಿಂದ ಅವರೇ ನನ್ನ ರೋಲ್ ಮಾಡೆಲ್ ಆಗಿಬಿಟ್ಟರು. ಅವರ ನಡವಳಿಕೆ,ತಿಳುವಳಿಕೆ, ಪಾತ್ರದಲ್ಲಿ ಲೀನವಾಗುವಿಕೆ ಎಲ್ಲವೂ ಅನನ್ಯ, ಅನುಕರಣೀಯ.
ಇಷ್ಟು ಹೊತ್ತೂ ಅವರಿಗೆ ಅಮ್ಮ ಎಂದು ಹೇಳುವುದು ಬಿಟ್ಟು ಮೇಡಂ,ಮೇಡಂ ಎನ್ನುತ್ತಿದ್ದೆನಲ್ಲ, ಅದಕ್ಕೆ ಕಾರಣ, ‘ಅಮ್ಮ ರಿಟೈರಾಗ್ತಾಳೆ’ ಎಂಬ ನಾಟಕ. ಇದು ಶ್ರೀ.ಫು.ಲ.ದೇಶಪಾಂಡೆ ವಿರಚಿತ ಮೂಲ ಮರಾಠಿ ನಾಟಕ ‘ಆಯಿ ಚಿ ರಿಟೈರ್ಮೆಂಟ್’ನ ಕನ್ನಡ ರೂಪ. ಅದರಲ್ಲಿ ನಾನು ಈ ಅಮ್ಮನ ಮಗಳುಮ, ಬಸುರಿ. ಅಪ್ಪ,ಶ್ರಿ ಹೆಚ್. ಜಿ. ಸೋಮಶೇಖರ್, ಸೋಮಣ್ಣ. ನನ್ನ ಮುದ್ದಿನ ಅಮ್ಮನನ್ನು ಕಳೆದುಕೊಂಡಿದ್ದ ನನಗೆ, ಭಾರ್ಗವಿ ಅಮ್ಮ ನನ್ನ ನಿಜವಾದ ಅಮ್ಮನಂತೆ ಭಾಸವಾಗತೊಡಗಿದ್ದು. ಆ ನಾಟಕದಲ್ಲಿ ಅಮ್ಮನ ಅಭಿನಯ ನೋಡುತ್ತಿದ್ದರೆ ನನಗೆ, ನನ್ನ ಅಮ್ಮನನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಅದರಲ್ಲಿ ಅಮ್ಮನ ಒಂದು ಮಾತು ‘ಮಕ್ಕಳಾಟವಾಡುವಾಗ, ಗೊಂಬೆಯ ಅಮ್ಮನಾಗಿ ರೊಟ್ಟಿ ಬಡಿಯುತ್ತಿದ್ದ ಕೈಗಳು ದೊಡ್ಡದಾಗಿ, ಅವಕ್ಕೆ ಯಾವಾಗ ಒಲೆಯುರಿ ತಾಗಿ ಸುಟ್ಟಿತೋ ತಿಳಿಯಲೇ ಇಲ್ಲ.’ ಒಬ್ಬ ಮುಗ್ಧ ಬಾಲಕಿ, ದೊಡ್ಡವಳಾಗಿ,ಮದುವೆ, ಸಂಸಾರದ ಬಂಧನದಲ್ಲಿ ತನ್ನ ಜೀವ ತೇಯುವ ಪರಿಯನ್ನು ಈ ಸಂಭಾಷಣೆ ಎಷ್ಟು ಮಾರ್ಮಿಕ ವಾಗಿ,ಕರುಳು ಕಿವಿಚುವಂತಿದೆಯೋ,ಅದಕ್ಕಿಂತ ಪರಿಣಾಮ ಕಾರಿಯಾಗಿರುತ್ತಿತ್ತು ಅಮ್ಮನ ಅಭಿನಯ,. ಸೈಡ್ ವಿಂಗ್ ನಲ್ಲಿ ಕುಳಿತು ಇದನ್ನು ನೋಡುತ್ತಿದ್ದ ನನಗೆ, ಪ್ರೇಕ್ಷಕರಿಗೆ ಕಣ್ಣೀರು ಧಾರೆಧಾರೆ. ಎಷ್ಟು ಬಾರಿ ಈ ನಾಟಕ ಪ್ರದರ್ಶನ ವೋ ಅಷ್ಟೂ ಬಾರಿಯೂ ಒದ್ದೆಗಣ್ಣು.
ಒಮ್ಮೆ ಗುಲ್ಬರ್ಗದಲ್ಲಿ ಈ ನಾಟಕದ ಪ್ರದರ್ಶನ ವಿತ್ತು. ಬಹುಶಃ ಅದು ಈ ನಾಟಕದ 25ನೇ ಪ್ರದರ್ಶನವಿರಬೇಕು. ಅಷ್ಟರ ವೇಳೆಗೆ ನನ್ನ, ಭಾಗಿ ಅಮ್ಮನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿ, ನನಗಂತೂ ನಾನು ಕಳೆದುಕೊಂಡಿದ್ದ ನನ್ನಮ್ಮನೇ ನನಗೆ ಮತ್ತೆ ಸಿಕ್ಕಂತಾಗಿ, ಮೂರು ಹೊತ್ತೂ ಅಮ್ಮ, ಅಮ್ಮಾ ಎಂದುಕೊಂಡು ಅವರ ಬಾಲ. ಒಂದು ರಾತ್ರಿ ನಾವು ಗುಲ್ಬರ್ಗ ದಲ್ಲಿ, ಹೊಟೆಲ್ನಲ್ಲಿ ತಂಗಬೇಕಿತ್ತು. ಮದುವೆ ಯಾಗಿ,ಮಗುವಾದಮೇಲೂ,ಅಮ್ಮನ ಮನೆಗೆ ಹೋದಾಗ, ರಾತ್ರಿ ನನ್ನಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡು,ಅವರ ಮೇಲೆ ಧಬಾರ್ ಎಂದು ಕಾಲು ಹಾಕಿ ಹಿಂಸೆ ಕೊಟ್ಟು,ಖುಷಿ ಪಡುತ್ತಾ ಮಲಗುತ್ತಿದ್ದ ಕೊಂಟೆಕೋಣ ( ಎಮ್ಮೆ)ನಾದ ನನಗೆ, ಈ ಅಮ್ಮನನ್ನೂ ತಬ್ಬಿ ಮಲಗುವ ಆಸೆ. ಆದರೆ ಎರಡು ಗಂಡು, ಎರಡು ಹೆಣ್ಣು ಮಕ್ಕಳಿರುವ ಅವರಿಗೂ ಹಾಗನಿಸಬೇಕಲ್ಲವೇ?ಅವರಿಗೇನಾದರೂ ಹಾಯಾಗಿ ಒಬ್ಬಳೇ ಮಲಗಬೇಕೆನಿಸಿದರೆ? ದೇವರೇ, ನಾನು ಅಮ್ಮನ ಜೊತೆ ಮಲಗುವಂತೆ ಮಾಡು ಎಂದು ಬೇಡುವುದಕ್ಕೂ,ಆ ಮೊರೆ ದೇವರಿಗೆ ಮುಟ್ಟಿತೆಂಬಂತೆ, ‘ವಿದ್ಯಾ ನೀನು ನನ್ನ ಜೊತೆಗೇ ಮಲಗು’ ಎಂದು ಹೇಳುವುದಕ್ಕೂ ಸರೀ ಹೋಯಿತು. ಖುಷಿಯಾಗಿ ಅವರ ಜೊತೆ ಮಲಗಲು ಹೋದೆ. ಜೊತೆಗೆ, ಅಮ್ಮಾ ನಿಮ್ಮನ್ನು ಕಟ್ಟಿಕೊಂಡು ಮಲಗ್ತೀನಿ, ಪರವಾಗಿಲ್ವಾ’ ಎಂದು ಒಂದು ಆಜ್ಞಾ ಪೂರ್ವಕ, ವಿನಂತಿಯ ದನಿಯಲ್ಲಿ ಕೇಳಿದೆ. ‘ಓ, ಪರವಾಗಿಲ್ಲ’ ಎಂದೇನೋ ಅವರು ಹೇಳಿದರು. ಆದರೆ ಆ ಮಾತಿನ ಹಿಂದೆ ಅವರಿಗೆ, ಅದರಿಂದ ಸಂತೋಷವಾಗಿತ್ತೋ, ಅದು ಬಲವಂತವಾಗಿತ್ತೋ ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ. ನನ್ನ ಆಸೆ ಫಲಿಸಿತ್ತು. ನನ್ನ ಅಮ್ಮನನ್ನು ತಬ್ಬಿ ಮಲಗುವಂತೆಯೇ, ಬಹಳ ವರ್ಷಗಳ ನಂತರ ಹಾಯಾಗಿ ಮಲಗಿದೆ. ಒಳ್ಳೆಯ ನಿದ್ದೆ ಹತ್ತಿತ್ತು, ಮಧ್ಯರಾತ್ರಿ…ಯಾಕೋ ಅಮ್ಮ, ‘ಅಯ್ಯಮ್ಮಾ’ಅಂತ ಸುಮಾರಾಗಿ ಜೋರಾಗಿಯೇ ಕಿರುಚಿಕೊಂಡರು. ನನಗೆ ಧಡಾರನೇ ಎಚ್ಚರಿಕೆಯಾಗಿ, ‘ಅಮ್ಮಾ ಏನಾಯ್ತು, ಏನಾಯ್ತು’ ಎಂದು ಗಾಬರಿಯಿಂದ ಕೇಳಿದೆ. ಅಮ್ಮಾ,ಕಾಲು..ಕಾಲು…ಎಂದರು. ‘ಅಮ್ಮಾ, ಏನಾಯ್ತು ಕಾಲಿಗೆ’ ಎಂದು ಮತ್ತೂ ಗಾಬರಿಯಿಂದ ಕೇಳಿದೆ. ಪಾಪ ಅಮ್ಮ, ಸೋತ ಸ್ವರದಲ್ಲಿ ‘ನಿನ್ನ ಕಾಲು ತೆಗೀಮ್ಮ ನನ್ನ ಮೇಲಿಂದ’ ಎಂದರು. ಥೂ ನನ್ನ ಮೇಲೆ ನನಗೆ ವಿಪರೀತ ನಾಚಿಕೆ ಆಗಿಹೋಯ್ತು. ತಕ್ಷಣ ಕಾಲು ತೆಗೆದೆ. ನನಗೆ ಅಮ್ಮನನ್ನು ತಬ್ಬಿಕೊಂಡು ಮಲಗುವ ಅಭ್ಯಾಸ ವಿರುವಂತೆ ಈ ಅಭ್ಯಾಸ ವೂ ಇದೆ ಎಂದು, ಅಮ್ಮನಿಗೆ ಮೊದಲೇ ಎಚ್ಚರಿಸಬೇಕಿತ್ತೆಂದು ಅಮ್ಮನ ಬಳಿ ಅಲವತ್ತುಕೊಂಡೆ. ಅಮ್ಮ ತಾವೂ ಸಾವರಿಸಿಕೊಂಡು,ನನ್ನನ್ನೂ ಸಂತೈಸಿ ಮಲಗಿಸಿದರು. ಹೀಗೆ ಭಾರ್ಗವಿ ಮೇಡಂ,ಆಗಿದ್ದವರು ನನ್ನ ನಿಜವಾದ ಅಮ್ಮನೇ ಆಗಿಬಿಟ್ಟಿದ್ದರು.
ಇದನ್ನೂ ಓದಿ: ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ; ಕಂಬನಿ ಮಿಡಿದ ಸ್ಯಾಂಡಲ್ವುಡ್