ರಾಜ್ಕುಮಾರ್, ರಜನಿಕಾಂತ್ಗೆ ಮೇಕಪ್ ಮಾಡಿದ್ದ ಕೇಶವಣ್ಣ ನಿಧನ; ಚಿತ್ರರಂಗದಲ್ಲಿ 53 ವರ್ಷ ಸೇವೆ
ಕೇಶವಣ್ಣ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಕಳೆದ ಎರಡು ದಿನಗಳಿಂದ ಅವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೇಶವಣ್ಣ ಕೊನೆಯುಸಿರೆಳೆದಿದ್ದಾರೆ.
ಬರೋಬ್ಬರಿ 53 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಮೇಕಪ್ಮ್ಯಾನ್ ಎಂ.ಎಸ್. ಕೇಶವಣ್ಣ (Keshavana) ಅವರು ಇಂದು (ಜುಲೈ 15) ನಿಧನ ಹೊಂದಿದ್ದಾರೆ. ರಾಜ್ಕುಮಾರ್ (Rajkumar), ಅಂಬರೀಷ್, ರಜನಿಕಾಂತ್, ಪುನೀತ್ ರಾಜ್ಕುಮಾರ್, ಅನಂತ್ ನಾಗ್, ಶಿವರಾಜ್ಕುಮಾರ್ ಮೊದಲಾದ ಸ್ಟಾರ್ಗಳಿಗೆ ಅವರು ಮೇಕಪ್ ಮಾಡಿದ್ದರು. ಅವರ ನಿಧನಕ್ಕೆ ಸ್ಯಾಂಡಲ್ವುಡ್ನ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ಕೇಶವಣ್ಣ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಕಳೆದ ಎರಡು ದಿನಗಳಿಂದ ಅವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೇಶವಣ್ಣ ಅವರು ಮೈಸೂರಲ್ಲಿ ಇಂದು (ಜುಲೈ 15) ಮಧ್ಯಾಹ್ನ 1:40ಕ್ಕೆ ಕೊನೆಯುಸಿರೆಳೆದಿದ್ದಾರೆ. ಜುಲೈ 16ರಂದು ಮೈಸೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಕೇಶವಣ್ಣ ಅವರು 25-30 ವರ್ಷಗಳ ಕಾಲ ರಾಜ್ಕುಮಾರ್ ಅವರ ಕಂಪನಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದರು. ಇವರ ಮೊದಲು ಮೇಕಪ್ ಮಾಡಿದ್ದು ಹಾಸ್ಯ ಕಲಾವಿದ ನರಸಿಂಹ ರಾಜು ಅವರಿಗೆ ಅನ್ನೋದು ವಿಶೇಷ. ಪೃಥ್ವಿ ರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರಮುನಿ ಸೇರಿ ಇನ್ನೂ ಅನೇಕ ಕಲಾವಿದರಿಗೆ ಕೇಶವಣ್ಣ ಮೇಕಪ್ ಮಾಡಿದ್ದಾರೆ.
ಅನಂತ್ ನಾಗ್ ಅವರು ‘ನಾನಿನ್ನ ಬಿಡಲಾರೆ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಅನಂತ್ ನಾಗ್ ಅವರಿಗೆ ದೆವ್ವದ ಮೇಕಪ್ ಹಾಕಿದ್ದು ಇದೇ ಕೇಶವಣ್ಣ. ಅನಂತ್ ನಾಗ್ ಅವರ ಲುಕ್ ನೋಡಿ ಅನೇಕರು ಭಯಬಿದ್ದಿದ್ದೂ ಇದೆ. ಅಷ್ಟು ನೈಜವಾಗಿ ಅವರು ಮೇಕಪ್ ಮಾಡುತ್ತಿದ್ದರು.
ಇದನ್ನೂ ಓದಿ: ಹೊಸ ಪೋಸ್ಟರ್ ಮೂಲಕ ‘ಗಂಧದ ಗುಡಿ’ ರಿಲೀಸ್ ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
‘ಸಾಕ್ಷಾತ್ಕಾರ’, ‘ಹುಲಿಯ ಹಾಲಿನ ಮೇವು’,‘ಮಯೂರ’, ‘ಶಾಂತಿ ಕ್ರಾಂತಿ’, ‘ಸಂಗೊಳ್ಳಿ ರಾಯಣ್ಣ’ ಮೊದಲಾದ ಚಿತ್ರಗಳಲ್ಲಿ ಕೇಶವಣ್ಣ ಕೆಲಸ ಮಾಡಿದ್ದಾರೆ. ಇವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಕೊನೆಯ ಚಿತ್ರ ‘ಕುರುಕ್ಷೇತ್ರ’.