
2026ನೇ ಸಾಲಿನ ಕಾನ್ ಚಿತ್ರೋತ್ಸವಕ್ಕೆ (Cannes Film Festival) ಸಿದ್ಧತೆ ನಡೆಯುತ್ತಿದೆ. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಭಾಗವಹಿಸುವುದು ಎಂದರೆ ಹೆಮ್ಮೆಯೇ ಸರಿ. ಈ ಬಾರಿ ನಡೆಯಲಿರುವುದು 79ನೇ ಕಾನ್ ಚಿತ್ರೋತ್ಸವ. ಅದರ ಅಂಗವಾಗಿ ಆಯೋಜನೆಗೊಳ್ಳಲಿರುವ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಕನ್ನಡದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ (Karen Kshiti Suvarna) ಅವರು ಭಾಷಣ ಮಾಡಲಿದ್ದಾರೆ. 22ರ ಪ್ರಾಯದ ಈ ಯುವ ನಿರ್ದೇಶಕಿಗೆ ಪ್ರತಿಷ್ಠಿತ ಚಿತ್ರೋತ್ಸವದಿಂದ ಆಹ್ವಾನ ಬಂದಿದೆ. ‘ಸೆಪ್ಟೆಂಬರ್ 21’ (September 21) ಸಿನಿಮಾಗೆ ಅವರು ನಿರ್ದೇಶನ ಮಾಡಿದ್ದಾರೆ.
‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಕರೆನ್ ಕ್ಷಿತಿ ಸುವರ್ಣ ಅವರು ಭಾಗವಹಿಸಲಿದ್ದಾರೆ. ಅವರ ಜೊತೆ ಫೋರ್ಬ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮೋಯಿರಾ ಫೋರ್ಬ್ಸ್ ಹಾಗೂ ಇನ್ನಿತರ ಮಹಿಳೆಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ವೇದಿಕೆಯಲ್ಲಿ ಕರೆನ್ ಕ್ಷಿತಿ ಸುವರ್ಣ ಏನು ಮಾತನಾಡಲಿದ್ದಾರೆ ಎಂಬ ಕೌತುಕ ಮೂಡಿದೆ.
ಮೇ 12 ಮತ್ತು 13ರಂದು ಕಾನ್ ನಗರದ ಖಾಸಗಿ ಹೋಟೆಲ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಕರೆನ್ ಕ್ಷಿತಿ ಸುವರ್ಣ ಅವರು ಸಿನಿಮಾ, AI ಹಾಗೂ ಸಾಮಾಜಿಕ ಕ್ರಿಯಾಶೀಲತೆ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಮರು-ಪ್ರಸಾರದ ಮೂಲಕ 10 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ತಲುಪಲಿದೆ. ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ‘ಸೆಪ್ಟೆಂಬರ್ 21’ ಸಿನಿಮಾ ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗಲಿದೆ.
‘ಸೆಪ್ಟೆಂಬರ್ 21’ ಚಿತ್ರವು ಹಿಂದಿ ಮತ್ತು ಕನ್ನಡದಲ್ಲಿ ಸಿದ್ಧವಾಗಿದೆ. ಮೇ 16ರಂದ ಸಂಜೆ 5.45ಕ್ಕೆ ಕಾನ್ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಲಿದೆ. ಆಲ್ಜೈಮರ್ ಕಾಯಿಲೆ ಮತ್ತು ಆರೈಕೆದಾರರ ಹೋರಾಟದ ಕುರಿತಾದ ಕಥೆ ಈ ಸಿನಿಮಾದಲ್ಲಿದೆ. ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಝರೀನಾ ವಹಾಬ್, ಅಜಿತ್ ಶಿಧಾಯೆ, ಅಮಿತ್ ಬೆಹ್ಲ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ದಕ್ಷಿಣದ ನಟನ ಬಗ್ಗೆ ಆಲಿಯಾ ಭಟ್ ಮಾತು
ಈ ಮೊದಲು 56ನೇ ಗೋವಾ ಚಿತ್ರೋತ್ಸವದ ‘ವರ್ಕ್-ಇನ್-ಪ್ರೋಗ್ರೆಸ್’ ವಿಭಾಗದಲ್ಲಿ ‘ಸೆಪ್ಟೆಂಬರ್ 21’ ಸಿನಿಮಾ ಪ್ರದರ್ಶನ ಆಗಿತ್ತು. ಮೇ 22ರಂದು ಭಾರತದಲ್ಲಿ ಈ ಸಿನಿಮಾ ತೆರೆಕಾಣಲಿದೆ. ವಿಸಿಕಾ ಫಿಲ್ಮ್ಸ್, ಎಫ್ಎಂಡಿ ಪ್ರೊಡಕ್ಷನ್ಸ್, ಹಮಾರಾ ಮೂವೀ ಸಂಸ್ಥೆಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ವಿನಯ್ ಚಂದ್ರ ಅವರು ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.