‘ಕೆಡಿ’ ಸಿನಿಮಾದ ಶೂಟಿಂಗ್ ಮುಗಿಸಿದ ಶಿಲ್ಪಾ ಶೆಟ್ಟಿ; ಹೊಸ ವಿಡಿಯೋ ಹಂಚಿಕೊಂಡ ನಟಿ
ಬಹುನಿರೀಕ್ಷಿತ ‘ಕೆಡಿ’ ಸಿನಿಮಾದಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರು ಸತ್ಯವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಈಗ ಅವರು ಈ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅದೇ ಖುಷಿಯಲ್ಲಿ ಚಿತ್ರೀಕರಣದ ಸೆಟ್ನಿಂದಲೇ ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಗೆ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಕನ್ನಡದ ‘ಕೆಡಿ’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಮೈಸೂರಿನಲ್ಲಿ ‘ಕೆಡಿ’ ಸಿನಿಮಾ (KD Kannada Movie) ಶೂಟಿಂಗ್ ನಡೆಯುತ್ತಿತ್ತು. ಈಗ ಅವರು ಚಿತ್ರೀಕರಣ ಮುಗಿಸಿದ್ದಾರೆ. ಈ ಖುಷಿಯಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಕೊನೇ ದಿನ ಶೂಟಿಂಗ್ ಸೆಟ್ನಿಂದಲೇ ಶಿಲ್ಪಾ ಶೆಟ್ಟಿ ಅವರು ವಿಡಿಯೋ ಮಾಡಿದ್ದಾರೆ. ನಿರ್ದೇಶಕ ‘ಜೋಗಿ’ ಪ್ರೇಮ್ (Prem) ಸೇರಿದಂತೆ ಇಡೀ ಚಿತ್ರತಂಡದವರ ಜೊತೆ ಶಿಲ್ಪಾ ಶೆಟ್ಟಿ ಖುಷಿ ಖುಷಿಯಿಂದ ಪೋಸ್ ನೀಡಿದ್ದಾರೆ.
ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಬಾಲಿವುಡ್ ಕಲಾವಿದರಾದ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಪಾತ್ರದ ಹೆಸರು ಸತ್ಯವತಿ. ಇದು ತಮ್ಮ ಫೇವರಿಟ್ ಪಾತ್ರಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ.
‘ಕೆಡಿ’ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇರಲಿದೆ. ಅದಕ್ಕೆ ತಕ್ಕಂತೆಯೇ ಕಲಾವಿದರ ವೇಷಭೂಷಣ ಇದೆ. ಶಿಲ್ಪಾ ಶೆಟ್ಟಿ ಅವರು ಫಸ್ಟ್ ಲುಕ್ ಪೋಸ್ಟರ್ ಅನ್ನು ಕೆಲವು ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಸೀರೆ ಗೆಟಪ್ನಲ್ಲಿ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊನೇ ದಿನ ಶೂಟಿಂಗ್ನಲ್ಲೂ ಅವರು ಇದೇ ಗೆಟಪ್ ಧರಿಸಿದ್ದಾರೆ. ಶೂಟಿಂಗ್ ಮುಗಿದ ಖುಷಿಯಲ್ಲಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಕೆಡಿ’ ಸಿನಿಮಾ ಚಿತ್ರೀಕರಣದ ನಡುವೆ ನಂಜುಂಡೇಶ್ವರನಿಗೆ ನಮಿಸಿದ ಶಿಲ್ಪಾ ಶೆಟ್ಟಿ
ಕನ್ನಡ ಚಿತ್ರರಂಗಕ್ಕೂ ಶಿಲ್ಪಾ ಶೆಟ್ಟಿ ಅವರಿಗೂ ಹಳೆಯ ನಂಟು. ‘ಪ್ರೀತ್ಸೋದ್ ತಪ್ಪಾ’, ‘ಆಟೋ ಶಂಕರ್’, ‘ಒಂದಾಗೋಣ ಬಾ’ ಚಿತ್ರಗಳಲ್ಲಿ ಅವರು ನಟಿಸುವ ಮೂಲಕ ಕನ್ನಡದ ಸಿನಿಪ್ರಿಯರನ್ನು ರಂಜಿಸಿದ್ದರು. ಅನೇಕ ವರ್ಷಗಳ ಬಳಿಕ ಮತ್ತೆ ಅವರು ‘ಕೆಡಿ’ ಸಿನಿಮಾದ ಮೂಲಕ ಕನ್ನಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಶಿಲ್ಪಾ ಶೆಟ್ಟಿ ಹಂಚಿಕೊಂಡ ವಿಡಿಯೋ:
View this post on Instagram
ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ‘ಕೆಡಿ’ ಸಿನಿಮಾದ ಶೂಟಿಂಗ್ ಬಿಡುವಿನಲ್ಲಿ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರಿಗೆ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ಕುಳಿತು ಅವರು ಧ್ಯಾನ ಮಾಡಿದ್ದರು. ಆ ಸಂದರ್ಭದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು. ‘ಕೆಡಿ’ ಸಿನಿಮಾ ಈ ವರ್ಷ ಡಿಸೆಂಬರ್ನಲ್ಲಿ ತೆರೆಕಾಣಲಿದೆ. ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.