ಜೊತೆಗೆ ನಟಿಸಿದ ಬಾಲಿವುಡ್ ನಟನ ಹೊಗಳಿದ ಶಿವಣ್ಣ, ‘ಮೆನ್ ಇನ್ ಬ್ಲ್ಯಾಕ್’ ಎಂದ ಅಭಿಮಾನಿಗಳು
ಘೋಸ್ಟ್ ಸಿನಿಮಾ ಮೂಲಕ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರೊಟ್ಟಿಗೆ ಸ್ಟೈಲಿಷ್ ಚಿತ್ರ ಮತ್ತು ವಿಡಿಯೋ ಹಂಚಿಕೊಂಡಿರುವ ನಟ ಶಿವಣ್ಣ, ಖೇರ್ ಅವರ ನಟನೆ ಹಾಗೂ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.
ನಟ ಶಿವರಾಜ್ ಕುಮಾರ್ (Shiva Rajkumar) ತಮ್ಮ 60 ರ ವಯಸ್ಸಿನಲ್ಲಿಯೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿಯೂ ಒಂದಕ್ಕಿಂತಲೂ ಒಂದು ಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ, ಹೊಸ ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಿಗೆ ಕಮಿಟ್ ಆಗಿರುವ ಶಿವಣ್ಣ, ನಟ, ನಿರ್ದೇಶಕ ಶ್ರೀನಿಯ (Shrinivas) ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನ ಜೊತೆಗೆ ಬಾಲಿವುಡ್ನ ಜನಪ್ರಿಯ ನಟ ಅನುಪಮ್ ಖೇರ್ (Anupam Kher) ಸಹ ನಟಿಸಿರುವುದು ವಿಶೇಷ.
ಗೋಸ್ಟ್ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಶಿವಣ್ಣ ಹಾಗೂ ಅನುಪಮ್ ಖೇರ್ ಒಟ್ಟಿಗೆ ನಟಿಸಿದ್ದಾರೆ. ಹಲವ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಅನುಪಮ್ ಖೇರ್ ಗೆ ಇದು ಮೊದಲ ಕನ್ನಡ ಸಿನಿಮಾ. ಇತ್ತೀಚೆಗಷ್ಟೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿಯೂ ಅನುಪಮ್ ಖೇರ್ ಭಾಗವಹಿಸಿ ಕರ್ನಾಟಕದೊಟ್ಟಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದರು, ಮಾತ್ರವಲ್ಲ ನಟ ರಿಷಬ್ ಶೆಟ್ಟಿಗೆ ಒಳ್ಳೆಯ ಪ್ರಾಂಕ್ ಸಹ ಮಾಡಿದ್ದರು.
ಇದೀಗ ನಟ ಶಿವಣ್ಣ, ತಮ್ಮ ಸಹನಟ ಅನುಪಮ್ ಖೇರ್ ಅವರೊಟ್ಟಿಗೆ ಚಿತ್ರ ಹಾಗೂ ಸ್ಟೈಲಿಶ್ ಆದ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನುಪಮ್ ಅವರೊಟ್ಟಿಗೆ ನಟಿಸಿದ್ದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.
ಅನುಪಮ್ ಹಾಗೂ ಶಿವಣ್ಣ ಇಬ್ಬರೂ ಕಪ್ಪು ಬಣ್ಣದ ಸೂಟ್ ಧರಿಸಿ ಬಹು ಸ್ಟೈಲಿಷ್ ಆಗಿ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಶಿವರಾಜ್ ಕುಮಾರ್, ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯ್ತು ಅನುಪಮ್ ಖೇರ್ ಸರ್, ನಿಮ್ಮ ಅಭಿನಯ ಹಾಗೂ ವ್ಯಕ್ತಿತ್ವ ಎರಡೂ ಅದ್ಭುತ. ನಿಮ್ಮನ್ನು ಘೋಸ್ಟ್ ಚಿತ್ರದ ಮೂಲಕ ನಮ್ಮ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತಿದ್ದೇನೆ” ಎಂದು ಶಿವಣ್ಣ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ಘೋಸ್ಟ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅನುಪಮ್ ಖೇರ್, ಶಿವಣ್ಣನನ್ನು ಹೊಗಳುತ್ತಾ, ಶಿವರಾಜ್ಕುಮಾರ್ ಅವರ ಜೊತೆ ನಟಿಸುತ್ತಿರೋದು ಖುಷಿ ನೀಡುತ್ತಿದೆ. ಅವರದ್ದು ಚಾರ್ಮಿಂಗ್ ಸ್ಮೈಲ್’ ಎಂದು ಹೇಳಿದ್ದರು.
ಅನುಪಮ್ ಖೇರ್ ಕೆಲವು ದಿನಗಳ ಹಿಂದಷ್ಟೆ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಘೋಸ್ಟ್ ಅವರಿಗೆ ಮೊದಲ ಕನ್ನಡ ಸಿನಿಮಾ. ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದು, ಸಿನಿಮಾದ ಪೋಸ್ಟರ್ ಈಗಾಗಲೇ ಬಹುವಾಗಿ ಗಮನ ಸೆಳೆದಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು ಕೆಲವೇ ದಿನಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಶುರುವಾಗಲಿವೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದ ಸುಳಿವು ನೀಡಿದ್ದಾರೆ ಶ್ರೀನಿ. ಸದ್ಯಕ್ಕೆ ಮೊದಲ ಭಾಗದ ಮೇಲಷ್ಟೇ ಗಮನ ಹರಿಸಿದ್ದಾರೆ. ಸಿನಿಮಾದಲ್ಲಿ ಶಿವಣ್ಣ ಅನುಪಮ್ ಖೇರ್ ಜೊತೆಗೆ ಮಲಯಾಳಂ ನಟ ಜಯರಾಮ್ ನಟಿಸಿದ್ದಾರೆ. ಇನ್ನುಳಿದಂತೆ ವಿಜಯ್ ಸೇತುಪತಿಯನ್ನೂ ಕರೆತರುವ ಯೋಚನೆ ಸಿನಿಮಾ ತಂಡದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮಹೇನ್ ಸಿಂಹ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ಚಿತ್ರ ನಿರ್ಮಿಸುತ್ತಿದ್ದಾರೆ.