Bairagee: ಯಾವೆಲ್ಲ ಊರಿಗೆ ಬರ್ತಾರೆ ಶಿವಣ್ಣ-ಡಾಲಿ? ಇಲ್ಲಿದೆ ‘ಬೈರಾಗಿ’ ಯಾತ್ರೆಯ ರೂಟ್ ಮ್ಯಾಪ್
Shivarajkumar | Bairagee: ಬೆಂಗಳೂರಿನಿಂದ ಚಾಮರಾಜನಗರಕ್ಕೆ ‘ಬೈರಾಗಿ’ ಚಿತ್ರತಂಡದ ಯಾತ್ರೆ ಹೊರಟಿದೆ. ಪ್ರೀ-ರಿಲೀಸ್ ಇವೆಂಟ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ನಟ ಶಿವರಾಜ್ಕುಮಾರ್ (Shivarajkumar) ಅವರು ಸದ್ಯ ‘ಬೈರಾಗಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರತಂಡ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಯಾತ್ರೆ ಹೊರಟಿದೆ. ಶಿವರಾಜ್ಕುಮಾರ್ ಅವರ ಜೊತೆಗೆ ಡಾಲಿ ಧನಂಜಯ (Daali Dhananjaya), ಪೃಥ್ವಿ ಅಂಬಾರ್ ಸೇರಿದಂತೆ ಚಿತ್ರತಂಡದ ಹಲವರು ಈ ಯಾತ್ರೆಯಲ್ಲಿ ಭಾಗಿ ಆಗುತ್ತಿದ್ದಾರೆ. ಶಿವಣ್ಣ ಯಾವಾಗಲೂ ನಿರ್ಮಾಪಕರ ಪರವಾಗಿ ನಿಲ್ಲುತ್ತಾರೆ. ತಮ್ಮ ಸಿನಿಮಾದ ಪ್ರಚಾರಕ್ಕೆ ಸಾಕಷ್ಟು ಸಮಯ ನೀಡುತ್ತಾರೆ. ಅದೇ ರೀತಿ ಅವರು ಈಗ ‘ಬೈರಾಗಿ’ (Bairagee) ಸಿನಿಮಾದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜುಲೈ 1ರಂದು ಈ ಚಿತ್ರ ಬಿಡುಗಡೆ ಆಗಲಿದ್ದು, ಈಗಾಗಲೇ ಸಖತ್ ನಿರೀಕ್ಷೆ ಸೃಷ್ಟಿ ಮಾಡಿದೆ.
ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ‘ಬೈರಾಗಿ’ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ಕುಮಾರ್ ಅವರು ರೂಟ್ ಮ್ಯಾಪ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಗಮಧ್ಯದಲ್ಲಿ ಯಾವೆಲ್ಲ ಊರುಗಳಿಗೆ ತೆರಳಲಿದ್ದೇವೆ ಎಂಬುದನ್ನು ಅವರು ತಿಳಿಸಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡಲು ಇಡೀ ತಂಡ ಎಗ್ಸೈಟ್ ಆಗಿದೆ. ಶಿವಣ್ಣನ ಜೊತೆ ಪ್ರಯಾಣ ಮಾಡುತ್ತಿರುವುದಕ್ಕೆ ಡಾಲಿ ಧನಂಜಯ, ಪೃಥ್ವಿ ಅಂಬಾರ್ ಸಖತ್ ಖುಷಿ ಆಗಿದ್ದಾರೆ.
‘ಬೆಂಗಳೂರಿನಿಂದ ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು ಮಂಡ್ಯ ಮೂಲಕ ಮೈಸೂರಿಗೆ ತೆರಳುತ್ತೇವೆ. ಮೈಸೂರಿನಲ್ಲಿ ಇಂದು (ಜೂನ್ 24) ಸಂಜೆ ಸುದ್ದಿಗೋಷ್ಠಿ ಇದೆ. ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇವೆ. ನಂತರ ನಂಜನಗೂಡು ಮುಗಿಸಿಕೊಂಡು ಗಾಜನೂರಿಗೆ ಹೋಗುತ್ತೇವೆ. ಅಲ್ಲಿಯೇ ಮಧ್ಯಾಹ್ನ ಊಟ ಇದೆ. ಅದಾದ ಬಳಿಕ ಸಂಜೆ ಚಾಮರಾಜನಗರದಲ್ಲಿ ಪ್ರೀ-ರಿಲೀಸ್ ಇವೆಂಟ್ ಇರಲಿದೆ’ ಎಂದು ಶಿವಣ್ಣ ಮಾಹಿತಿ ನೀಡಿದ್ದಾರೆ.
ಗಾಜನೂರಿಗೆ ಭೇಟಿ ನೀಡುತ್ತಿರುವುದು ಧನಂಜಯ ಅವರಿಗೆ ಹೆಚ್ಚು ಸಂತಸ ತಂದಿದೆ. ಇದೇ ಮೊದಲ ಬಾರಿಗೆ ಅವರು ಡಾ. ರಾಜ್ಕುಮಾರ್ ಹುಟ್ಟೂರಿಗೆ ತೆರಳುತ್ತಿದ್ದಾರೆ. ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’. ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದು, ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಯಶಾ ಶಿವಕುಮಾರ್, ಅಂಜಲಿ, ಶಶಿಕುಮಾರ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ಜುಲೈ 1ಕ್ಕೆ ‘ಬೈರಾಗಿ’ ರಿಲೀಸ್; ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಶಿವಣ್ಣ ಸಿನಿಮಾದ ಟಿವಿ ರೈಟ್ಸ್