ಶಿವಣ್ಣ ಹುಟ್ಟಿದ ಬಳಿಕ ಸಂಜೆಯಿಂದ ಬೆಳಗ್ಗಿನವರೆಗೆ ಸ್ವೀಟ್ ಹಂಚಿದ್ದ ರಾಜ್ಕುಮಾರ್
Shivarajkumr Birthday: ಶಿವರಾಜ್ ಕುಮಾರ್ ಅವರು ಇಂದು ತಮ್ಮ 63ನೇ ಜನ್ಮದಿನ ಆಚರಿಸುತ್ತಿದ್ದಾರೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಂತರ ಈ ಹುಟ್ಟುಹಬ್ಬ ಅವರಿಗೆ ವಿಶೇಷವಾಗಿದೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ರಾಜ್ ಕುಮಾರ್ ಅವರ ಮಗನಾಗಿ ಹುಟ್ಟಿದ ಶಿವಣ್ಣ ಅವರ ಜೀವನದ ಕೆಲವು ಆಸಕ್ತಿಕರ ವಿವರಗಳು ಈ ಲೇಖನದಲ್ಲಿವೆ.

ಶಿವರಾಜ್‌ಕುಮಾರ್ ಅವರಿಗೆ ಇಂದು (ಜುಲೈ 11) ಜನ್ಮದಿನ. ಅವರಿಗೆ ಎಲ್ಲರೂ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಗೆ ಈಗ 63ನೇ ವರ್ಷ. ಶಿವಣ್ಣ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ಕೂಡ ನಡೆಯುತ್ತಿವೆ. ಒಂದು ವಿಶೇಷ ಎಂದರೆ ಶಿವರಾಜ್‌ಕುಮಾರ್ (Shivarajkumar) ಹುಟ್ಟಿದಾಗ ರಾಜ್ಕುಮಾರ್ ಅವರು ಸಂಭ್ರಮಿಸಿದ್ದರು. ಏಕೆಂದರೆ ಮದುವೆ ಆಗಿ 9 ವರ್ಷಗಳ ಬಳಿಕ ಶಿವಣ್ಣ ಹುಟ್ಟಿದ್ದರು. ವೀಕೆಂಡ್ ವಿತ್ ರಮೇಶ್ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು ಶಿವರಾಜ್‌ಕುಮಾರ್.
ರಾಜ್ಕುಮಾರ್ ಹಾಗೂ ಪಾರ್ವತಮ್ಮ ವಿವಾಹ ಆಗಿದ್ದು 1953ರ ಜೂನ್ 25ರಂದು. ಎಷ್ಟೇ ಪ್ರಯತ್ನಿಸದರೂ ದಂಪತಿಗೆ ಮಗು ಹುಟ್ಟಿರಲೇ ಇಲ್ಲ. ಶಿವರಾಜ್‌ಕುಮಾರ್ ಅವರು 1962ರ ಜುಲೈ12ರಂದು ಜನಿಸಿದರು. ಆ ವಿಚಾರ ರಾಜ್ಕುಮಾರ್ಗೆ ಸಾಕಷ್ಟು ಖುಷಿ ನೀಡಿತು. ಅವರ ಖುಷಿಗೆ ಅಂದು ಪಾರವೇ ಇರಲಿಲ್ಲ. ರಾಜ್ಕುಮಾರ್ ಕುಣಿದು ಕುಪ್ಪಳಿಸಿದ್ದರು.
ಶಿವರಾಜ್‌ಕುಮಾರ್ ಜನಿಸಿದ್ದು ಸಂಜೆ ವೇಳೆಗೆ. ಬೆಳಿಗ್ಗೆ 5 ಗಂಟೆವರೆಗೆ ರಾಜ್ಕುಮಾರ್ ಸಿಹಿ ಹಂಚಿದ್ದರಂತೆ. ‘ನಾನು ಹುಟ್ಟಿದಾಗ ಅಪ್ಪಾಜಿ ತುಂಬಾನೇ ಸಂತೋಷಪಟ್ಟರಂತೆ. ಬೆಳಿಗ್ಗೆವರೆಗೆ ಅಪ್ಪಾಜಿ ಸ್ವೀಟ್ ಹಂಚಿದ್ದರಂತೆ’ ಎಂದು ಶಿವರಾಜ್‌ಕುಮಾರ್ ಹೇಳಿದ್ದರು.
‘ನಮ್ಮ ಮನೆಯಲ್ಲಿ 20-25 ಜನರು ಇರುತ್ತಿದ್ದರು. ಎಲ್ಲರೂ ಕಸಿನ್ಸ್. ಬಟ್ಟೆ ತೆಗೆದುಕೊಳ್ಳಲು ಒಟ್ಟಿಗೆ ಹೋಗುತ್ತಿದ್ದೆವು. ನಂಗೆ ಹಲವು ತಾಯಂದಿರು. ಅದರಲ್ಲಿ ನಾಗಮ್ಮ ಕೂಡ ಒಬ್ಬರು. ಅವರು ನನ್ನನ್ನು ಚಿಕ್ಕವಯಸ್ಸಲ್ಲಿ ಸಾಕಿ ಬೆಳೆಸಿದ್ದಾರೆ’ ಎಂದು ಶಿವಣ್ಣ ಹೇಳಿದ್ದರು. ನಾಗಮ್ಮ ಈಗಲೂ ಬದುಕಿದ್ದಾರೆ. ಅವರು ರಾಜ್ಕುಮಾರ್ ಹುಟ್ಟೂರಾದ ಗಾಜನೂರಿನಲ್ಲಿ ಇರುತ್ತಾರೆ. ಪುನೀತ್ ಸತ್ತ ವಿಚಾರ ಅವರಿಗೆ ಇನ್ನೂ ತಿಳಿದಿಲ್ಲ. ಅವರಿಗೆ ಆಘಾತ ಆಗುತ್ತದೆ ಎಂಬ ಕಾರಣಕ್ಕೆ ಆ ವಿಚಾರವನ್ನು ಇನ್ನೂ ಹಾಗೆಯೇ ಮುಚ್ಚಿಡಲಾಗಿದೆ. ಅವರನ್ನು ಕಂಡರೆ ಶಿವಣ್ಣಗೆ ಸಾಕಷ್ಟು ಪ್ರೀತಿ.
ಇದನ್ನೂ ಓದಿ: 666 ಆಪರೇಷನ್ ಡ್ರೀಮ್ ಥಿಯೇಟರ್: ಶಿವರಾಜ್‌ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಶಿವಣ್ಣಗೆ ಈಗ 63 ವರ್ಷ ವಯಸ್ಸು. ಅವರು ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಹೀಗಾಗಿ, ಈ ವರ್ಷದ ಬರ್ತ್ಡೇ ಅವರಿಗೆ ವಿಶೇಷ ಎನಿಸಿಕೊಂಡಿದೆ. ಅವರ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಅವರನ್ನು ಹೊಗಳುವ ಕೆಲಸ ಆಗಿದೆ. ಇಂದು ಅಭಿಮಾನಿಗಳ ಜೊತೆ ಸೇರಿ ಅವರು ಹುಟ್ಟುಹಬ್ಬ ಆಚರಿಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:19 am, Sat, 12 July 25







