‘ಎಕ್ಕ’ ಸಿನಿಮಾ ಟ್ರೇಲರ್ ಬಿಡುಗಡೆ; ರಗಡ್ ಅವತಾರದಲ್ಲಿ ಯುವ ರಾಜ್‌ಕುಮಾರ್
‘ಬ್ಯಾಂಗಲ್ ಬಂಗಾರಿ’ ಹಾಡಿನ ಮೂಲಕ ‘ಎಕ್ಕ’ ಸಿನಿಮಾ ಸಖತ್ ಸೆನ್ಸೇಷನ್ ಸೃಷ್ಟಿಸಿದೆ. ಅದರ ಜೊತೆಗೆ ಈಗ ಟ್ರೇಲರ್ ಕೂಡ ಬಿಡುಗಡೆ ಆಗಿ ನಿರೀಕ್ಷೆ ಹೆಚ್ಚಿಸಿದೆ. ಯುವ ರಾಜ್‌ಕುಮಾರ್, ಸಂಜನಾ ಆನಂದ್, ಸಂಪದಾ, ಆದಿತ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜುಲೈ 18ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.

ಬಹುನಿರೀಕ್ಷಿತ ‘ಎಕ್ಕ’ ಸಿನಿಮಾ (Ekka Movie) ಟ್ರೇಲರ್ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಈ ಸಿನಿಮಾದ ಮೇಲೆ ಇರುವ ನಿರೀಕ್ಷೆ ಈಗ ಜಾಸ್ತಿ ಆಗಿದೆ. ಯುವ ರಾಜ್‌ಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಕಾದಿದ್ದಾರೆ. ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲು ಟ್ರೇಲರ್ (Ekka Movie Trailer) ಅನಾವರಣ ಮಾಡಲಾಗಿದೆ. ಇದು ಯುವ ರಾಜ್‌ಕುಮಾರ್ (Yuva Rajkumar) ಅಭಿನಯದ ಎರಡನೇ ಸಿನಿಮಾ. ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ಜುಲೈ 18ರಂದು ‘ಎಕ್ಕ’ ಸಿನಿಮಾ ತೆರೆಕಾಣಲಿದೆ. ಅದೇ ದಿನ ಬೇರೆ ಚಿತ್ರಗಳು ಕೂಡ ಪೈಪೋಟಿ ನೀಡಲಿವೆ. ಹಾಗಾಗಿ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಜೊತೆಗೂಡಿ ‘ಎಕ್ಕ’ ಸಿನಿಮಾವನ್ನು ನಿರ್ಮಾಣ ಮಾಡಿವೆ. ಆ ಕಾರಣದಿಂದಲೂ ಈ ಚಿತ್ರದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ.
‘ಎಕ್ಕ’ ಸಿನಿಮಾದಲ್ಲಿ ಪಕ್ಕಾ ಮಾಸ್ ಕಹಾನಿ ಇದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದ ಹುಡುಗನ ಬಾಳಿನಲ್ಲಿ ಅನೇಕ ಘಟನೆಗಳು ನಡೆಯುತ್ತವೆ. ಸಾಮಾನ್ಯ ಹುಡುಗನೊಬ್ಬ ಭೂತಕ ಲೋಕಕ್ಕೆ ಹೇಗೆ ಕಾಲಿಡುತ್ತಾನೆ ಎಂಬುದನ್ನು ತೋರಿಸಲು ಹೊರಟಿದ್ದಾರೆ ನಿರ್ದೇಶಕ ರೋಹಿತ್ ಪದಕಿ. ಈ ಸಿನಿಮಾಗೆ ಸಂಜನಾ ಆನಂದ್ ಮತ್ತು ಸಂಪದಾ ಅವರು ನಾಯಕಿಯಾಗಿದ್ದಾರೆ.
‘ಎಕ್ಕ’ ಸಿನಿಮಾ ಟ್ರೇಲರ್:
ಪೋಸ್ಟರ್ ರಿಲೀಸ್ ಆದಾಗಲೇ ‘ಎಕ್ಕ’ ಸಿನಿಮಾದ ಮೇಲಿನ ಹೈಪ್ ಹೆಚ್ಚಾಗಿತ್ತು. ಈಗ ಟ್ರೇಲರ್ ಕೂಡ ಬಿಡುಗಡೆ ಆಗಿದ್ದು, ಯೂಟ್ಯೂಬ್ನಲ್ಲಿ ಟ್ರೆಂಡ್ ಆಗುತ್ತಿದೆ. ಯುವ ರಾಜ್‌ಕುಮಾರ್ ಅವರನ್ನು ಸಂಪೂರ್ಣ ರಗಡ್ ಗೆಟಪ್ನಲ್ಲಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಅತುಲ್ ಕುಲಕರ್ಣಿ, ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ಕೂಡ ಅಭಿನಯಿಸಿದ್ದಾರೆ.
ಇದನ್ನೂ ಓದಿ: ‘ಎಕ್ಕ’ ನಿರ್ಮಾಪಕರ ಹೊಸ ಸಿನಿಮಾದಲ್ಲಿ ಯುವ, ರಿತನ್ಯಾ ಜೋಡಿ; ಸೂರಿ ನಿರ್ದೇಶನ
ಖಡಕ್ ಡೈಲಾಗ್ಗಳು ‘ಎಕ್ಕ’ ಟ್ರೇಲರ್ನಲ್ಲಿ ಹೈಲೈಟ್ ಆಗಿವೆ. ಈಗಾಗಲೇ ‘ಬ್ಯಾಂಗಲ್ ಬಂಗಾರಿ’ ಹಾಡಿನಿಂದ ಈ ಸಿನಿಮಾ ಸೆನ್ಸೇಷನ್ ಸೃಷ್ಟಿ ಮಾಡಿದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಅವರು ಒಟ್ಟಿಗೆ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








