Hope Movie: ಪ್ರತಿಭಾವಂತ ಕಲಾವಿದರ ‘ಹೋಪ್’ ಸಿನಿಮಾ ಜುಲೈ 8ಕ್ಕೆ ತೆರೆಗೆ; ಈ ಚಿತ್ರದ ಕಥಾಹಂದರ ಏನು?
Shwetha Srivatsav: ವರ್ಷಾ ಸಂಜೀವ್ ಅವರು ‘ಹೋಪ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರು ನಿಭಾಯಿಸಿದ್ದಾರೆ. ಅಂಬರೀಷ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಖ್ಯಾತ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivatsav) ಅವರು ‘ಹೋಪ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ ಈ ಸಿನಿಮಾ ಮೇಲೆ ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈವರೆಗೂ ಅನೇಕ ಚಿತ್ರಗಳಲ್ಲಿ ನಟಿಸಿ, ಬೇರೆ ಬೇರೆ ಪಾತ್ರಗಳ ಮೂಲಕ ಜನಮನ ಗೆದ್ದಿರುವ ಶ್ವೇತಾ ಶ್ರೀವಾತ್ಸವ್ ಅವರಿಗೆ ‘ಹೋಪ್’ ಸಿನಿಮಾದಲ್ಲಿ ಕೆಎಎಸ್ ಅಧಿಕಾರಿಯ ಪಾತ್ರ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಆಗುವುದು ವಿಳಂಬ ಆಯಿತು. ಈಗ ‘ಹೋಪ್’ (Hope Movie) ಬಿಡುಗಡೆಗೆ ಕಾಲ ಕೂಡಿಬಂದಿದೆ. ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಜುಲೈ 8ಕ್ಕೆ ರಿಲೀಸ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಶ್ವೇತಾ ಶ್ರೀವಾತ್ಸವ್ ಮಾತ್ರವಲ್ಲದೇ ಅನೇಕ ಪ್ರತಿಭಾವಂತ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಸುಮಲತಾ ಅಂಬರೀಶ್, ಗೋಪಾಲ ದೇಶಪಾಂಡೆ, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ.
‘ಹೋಪ್’ ಸಿನಿಮಾದ ಕಥಾಹಂದರ ಕೂಡ ಭಿನ್ನವಾಗಿದೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆಯಿಂದ ಸಾಮಾನ್ಯ ಜನರ ಜೀವನದಲ್ಲಿ ಏನೆಲ್ಲಾ ಪರಿಣಾಮಗಳು ಆಗುತ್ತವೆ ಎಂಬ ಕಥಾವಸ್ತು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಆ ಕಾರಣದಿಂದ ಕೆಎಎಸ್ ಅಧಿಕಾರಿ ಪಾತ್ರವನ್ನು ಶ್ವೇತಾ ಶ್ರೀವಾತ್ಸವ್ ಅವರು ನಿಭಾಯಿಸಿದ್ದಾರೆ. ಉಳಿದ ಕಲಾವಿದರಾದ ಪ್ರಮೋದ್ ಶೆಟ್ಟಿ, ಸುಮಲತಾ ಅಂಬರೀಶ್, ಗೋಪಾಲ ದೇಶಪಾಂಡೆ, ಪ್ರಕಾಶ್ ಬೆಳವಾಡಿ ಅವರ ಪಾತ್ರಗಳು ಹೇಗಿವೆ ಎಂಬುದನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.
ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಅವರು ‘ಹೋಪ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರು ನಿಭಾಯಿಸಿದ್ದಾರೆ. ಅಂಬರೀಷ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೊರೊನಾ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬ ಆಗಿದ್ದವು. ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಸಿನಿಮಾ ರಿಲೀಸ್ ಆಗುತ್ತಿದೆ. ‘ಹೋಪ್’ ಚಿತ್ರಕ್ಕೆ ಹಾಲೇಶ್ ಛಾಯಾಗ್ರಾಹಣ ಮಾಡಿದ್ದಾರೆ. ಹರೀಶ್ ಕೊಮ್ಮೆ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಒಟ್ಟು 34 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.