Sudha Murthy: ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರ ವೀಕ್ಷಿಸಿ ಸುಧಾ ಮೂರ್ತಿ ಹೇಳಿದ್ದೇನು? ಇಲ್ಲಿದೆ ನೋಡಿ
Sudha Murthy: ಮೇಘನಾ ರಾಜ್ ಹಾಗೂ ಸೃಜನ್ ಲೋಕೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರವನ್ನು ಸುಧಾ ಮೂರ್ತಿ ವೀಕ್ಷಿಸಿದ್ದಾರೆ. ನಂತರ ಅವರು ಹೇಳಿದ್ದೇನು? ಇಲ್ಲಿದೆ ನೋಡಿ.
ಮೊಬೈಲ್ ಗೀಳಿನ ಬಗ್ಗೆ ಬೆಳಕು ಚೆಲ್ಲುವ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ (Selfie Mummy Google Daddy) ಚಿತ್ರ ಇತ್ತೀಚೆಗೆ ತೆರೆಕಂಡು ಮೆಚ್ಚುಗೆ ಗಳಿಸಿದೆ. ಇದೀಗ ಚಿತ್ರತಂಡ 25ನೇ ದಿನವನ್ನು ಆಚರಿಸಿದ್ದು, ಸುಧಾ ಮೂರ್ತಿ (Sudha Murthy) ಚಿತ್ರ ವೀಕ್ಷಿಸಿ ತಂಡದ ಸಂಭ್ರಮ ಹೆಚ್ಚಿಸಿದ್ದಾರೆ. ಸಿನಿಮಾ ನೋಡಿದ ನಂತರ ಮೆಚ್ಚುಗೆಯ ಮಾತುಗಳನ್ನಾಡಿರುವ ಅವರು, ವಿಶೇಷ ಪ್ರಯತ್ನಕ್ಕೆ ಶಹಬ್ಬಾಸ್ಗಿರಿ ನೀಡಿದ್ದಾರೆ. ಮಕ್ಕಳು, ಪೋಷಕರಿಗೆ ಒಳ್ಳೆ ಸಂದೇಶವಿರುವ ಚಿತ್ರವನ್ನು ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘‘ಇದೊಂದು ಹೊಸ ರೀತಿಯ ಪ್ರಯೋಗ. ಏಕೆಂದರೆ ನಿಜ ಜೀವನದಲ್ಲಿ ಈ ಸಮಸ್ಯೆಯನ್ನು ಬಹಳಷ್ಟು ಕಡೆ ನೋಡಿದ್ದೇನೆ. ಟಿಪ್ ಆಫ್ ದಿ ಐಸ್ಬರ್ಗ್ ಅನ್ನುವ ಹಾಗೆ ಈ ಸಮಸ್ಯೆ ನಿಜವಾಗಿ ದೊಡ್ಡ ಮಟ್ಟದ ಸಮಸ್ಯೆ ಆಗುತ್ತಾ ಇದೆ. ನಮ್ಮ ಸಮಾಜದಲ್ಲಿ, ನಮ್ಮ ಎಜುಕೇಶನ್ ಸಿಸ್ಟಂನಲ್ಲಿ ಬಹಳ ಕಷ್ಟ ಆಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ’’ ಎಂದಿದ್ದಾರೆ.
ನಂತರ ಚಿತ್ರತಂಡಕ್ಕೆ ಶಹಬ್ಬಾಸ್ಗಿರಿ ನೀಡಿದ ಅವರು, ‘‘ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ಹ್ಯೂಮರ್ ಆಗಿದ್ದು, ಖುಷಿಯಿಂದ ನೋಡುವ ಹಾಗೆ ಕಟ್ಟಿಕೊಡಲಾಗಿದೆ. ಸದ್ಯ ಸಾಮಾಜಿಕ ಪರಿಸ್ಥಿತಿಯ ಕತೆ ತೆಗೆದುಕೊಂಡು ಚೆನ್ನಾಗಿ ಮಾಡಿದ್ದಾರೆ, ಅಭಿನಂದನೆಗಳು’’ ಎಂದಿದ್ದಾರೆ. ಸುಧಾಮೂರ್ತಿಯವರು ಕಲಾವಿದರ ಶ್ರಮವನ್ನು ಹೊಗಳಲು ಮರೆಯಲಿಲ್ಲ. ಜತೆಗೆ ನಿರ್ದೇಶಕ ಮಧುಚಂದ್ರ ಅವರಿಗೂ ವಿಶೇಷವಾಗಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಸಮಸ್ಯೆ ಹಾಗೂ ಅದಕ್ಕೆ ಪರಿಹಾರವನ್ನು ಚಿತ್ರದಲ್ಲಿ ಹೇಳಿದ್ದರ ಬಗ್ಗೆಯೂ ಅವರು ಖುಷಿ ಹಂಚಿಕೊಂಡಿದ್ದಾರೆ.
ಸುಧಾ ಮೂರ್ತಿ ಮಾತನಾಡಿರುವ ವಿಡಿಯೋ ಇಲ್ಲಿದೆ:
ಸುಧಾಮೂರ್ತಿಯವರ ಮಾತು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ನೀಡಿದೆ. ಒಳ್ಳೆಯ ಪ್ರಯತ್ನಗಳು ಗುರುತಿಸಿಕೊಳ್ಳದೇ ಹೋಗುವುದಿಲ್ಲ ಎನ್ನುವುದು ಇದರಿಂದ ಮತ್ತೆ ಸಾಬೀತಾಗಿದೆ. ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರವನ್ನು ಈಗಾಗಲೇ ಹಲವು ಗಣ್ಯರು ವೀಕ್ಷಿಸಿದ್ದಾರೆ. ಶಿಕ್ಷಣ ಸಚಿವ ಬಿಸಿ ನಾಗೇಶ್ ಕೂಡ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಕರ್ನಾಟಕದ 100ಕ್ಕೂ ಅಧಿಕ ಕಡೆಗಳಲ್ಲಿ ‘777 ಚಾರ್ಲಿ’ ಪ್ರೀಮಿಯರ್; ಹೊರರಾಜ್ಯದ ಪ್ರೇಕ್ಷಕರಿಂದ ಮೆಚ್ಚುಗೆ
‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರವನ್ನು ನಿರ್ದೇಶಿಸಿದವರು ಮಧುಚಂದ್ರ. ಕತೆ, ಚಿತ್ರಕತೆಯೂ ಕೂಡ ಅವರದ್ದೇ. ಅವರ ವಿಭಿನ್ನ ಪ್ರಯತ್ನಕ್ಕೆ ಜತೆಯಾದವರು ಮೇಘನಾ ರಾಜ್ ಹಾಗೂ ಸೃಜನ್ ಲೋಕೇಶ್. ಈ ತಾರೆಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾಮಾಜಿಕ ಕಳಕಳಿ ಇರುವ ಈ ಚಿತ್ರವನ್ನು 80 ಜನ ಪೋಷಕರೇ ನಿರ್ಮಿಸಿರುವುದು ವಿಶೇಷ.
ಮತ್ತಷ್ಟು ಸಿನಿಮಾ ಸಂಬಂಧಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ