Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ

|

Updated on: Feb 09, 2024 | 11:39 AM

‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಮ್ಯೂಸಿಕಲ್​ ಲವ್​ಸ್ಟೋರಿ ಇದೆ. ನಿರ್ದೇಶಕ ಸಿಂಪಲ್​ ಸುನಿ ಅವರು ಎಂದಿನಂತೆ ಲವಲವಿಕೆಯ ಶೈಲಿಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮ ನಡುವಿನ ಒಬ್ಬ ಹುಡುಗ ಎಂಬಂತಹ ಫೀಲ್​ ಕೊಡುವ ರೀತಿಯಲ್ಲಿ ವಿನಯ್​ ರಾಜ್​ಕುಮಾರ್​ ಅವರ ಪಾತ್ರ ಮೂಡಿಬಂದಿದೆ. ಒಟ್ಟಾರೆ ವಿಮರ್ಶೆ ಇಲ್ಲಿದೆ..

Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ
ಒಂದು ಸರಳ ಪ್ರೇಮಕಥೆ
Follow us on

ಸಿನಿಮಾ: ಒಂದು ಸರಳ ಪ್ರೇಮಕಥೆ. ನಿರ್ಮಾಣ: ಮೈಸೂರು ರಮೇಶ್​. ನಿರ್ದೇಶನ: ಸಿಂಪಲ್​ ಸುನಿ. ಪಾತ್ರವರ್ಗ: ವಿನಯ್​ ರಾಜ್​ಕುಮಾರ್​, ಮಲ್ಲಿಕಾ ಸಿಂಗ್​, ಸ್ವಾದಿಷ್ಟಾ, ರಾಜೇಶ್ ನಟರಂಗ, ಸಾಧು ಕೋಕಿಲ, ಕಾರ್ತಿಕ್​ ಮಹೇಶ್​ ಮುಂತಾದವರು.  ಸ್ಟಾರ್​: 3.5/5

ನಿರ್ದೇಶಕ ಸಿಂಪಲ್​ ಸುನಿ (Simple Suni) ಅವರು ಮಾಡುವ ಸಿನಿಮಾಗಳಲ್ಲಿ ಒಂದು ನವಿರಾದ ಪ್ರೇಮಕಥೆ ಇರುತ್ತದೆ. ಅದರಲ್ಲಿ ತಿಳಿಯಾದ ಹಾಸ್ಯವೂ ಬೆರೆತಿರುತ್ತದೆ. ಚಿನಕುರುಳಿ ರೀತಿಯ ಡೈಲಾಗ್​ಗಳು ಮನರಂಜನೆ ನೀಡುತ್ತವೆ. ಅಂಥ ಅಂಶಗಳನ್ನು ಅವರ ಸಿನಿಮಾಗಳಿಂದ ಪ್ರೇಕ್ಷಕರು ನಿರೀಕ್ಷಿಸುತ್ತಾರೆ. ಆ ನಿರೀಕ್ಷೆಗೆ ತಕ್ಕಂತೆಯೇ ‘ಒಂದು ಸರಳ ಪ್ರೇಮಕಥೆ’ (Ondu Sarala Prema Kathe) ಸಿನಿಮಾ ಮೂಡಿಬಂದಿದೆ. ಈ ಸಿನಿಮಾದಲ್ಲಿ ವಿನಯ್​ ರಾಜ್​ಕುಮಾರ್​ (Vinay Rajkumar), ಸ್ವಾದಿಷ್ಟಾ, ಮಲ್ಲಿಕಾ ಸಿಂಗ್​ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದು ಅತಿಥಿ ಪಾತ್ರದಲ್ಲಿ ಬಿಗ್​ ಬಾಸ್​ ವಿನ್ನರ್​ ಕಾರ್ತಿಕ್​ ಮಹೇಶ್​ ಕೂಡ ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಾಜೇಶ್​ ನಟರಂಗ ಅವರಂತಹ ಪ್ರತಿಭಾವಂತ ಹಿರಿಯ ಕಲಾವಿದರು ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಅಂದ ಹೆಚ್ಚಿಸಿದ್ದಾರೆ.

‘ಒಂದು ಸರಳ ಪ್ರೇಮಕಥೆ’ ಎಂದು ಶೀರ್ಷಿಕೆಯನ್ನು ‘ಒಂದು ವಿರಳ ಪ್ರೇಮಕಥೆ’ ಎಂದು ಕಾಣುವ ರೀತಿಯಲ್ಲೂ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಹೆಸರಿಗೆ ತಕ್ಕಂತೆಯೇ ಈ ಸಿನಿಮಾ ಮೂಡಿಬಂದಿದೆ ಎನ್ನಬಹುದು. ಮೇಲ್ನೋಟಕ್ಕೆ ನೋಡಿದರೆ ಇದು ಸರಳವಾದ ಪ್ರೇಮಕಥೆ. ಆದರೆ ಅದನ್ನು ಕಟ್ಟಿಕೊಟ್ಟ ರೀತಿ ಗಮನಿಸಿದರೆ ಇದು ಖಂಡಿತವಾಗಿಯೂ ವಿರಳವಾದ ಪ್ರೇಮಕಥೆ. ಇದರಲ್ಲಿ ಮ್ಯೂಸಿಕಲ್​ ಗುಣ ಇದೆ. ಸಂಗೀತದ ಹಿನ್ನೆಲೆಯಲ್ಲಿ ಇಡೀ ಸಿನಿಮಾದ ಕಥೆಯನ್ನು ಹೇಳಲಾಗಿದೆ. ಆ ನಿಟ್ಟಿನಲ್ಲಿ ನಿರ್ದೇಶಕ ಸಿಂಪಲ್​ ಸುನಿ ಅವರ ಖಾತೆಯಲ್ಲಿ ಇದೊಂದು ಡಿಫರೆಂಟ್​ ಪ್ರಯತ್ನ.

ವಿನಯ್​ ರಾಜ್​ಕುಮಾರ್​ ಅವರು ಈ ಸಿನಿಮಾದಲ್ಲಿ ಅತಿಶಯ್​ ಎಂಬ ಪಾತ್ರ ಮಾಡಿದ್ದಾರೆ. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ತಾನೊಬ್ಬ ದೊಡ್ಡ ಮ್ಯೂಸಿಕ್​ ಡೈರೆಕ್ಟರ್​ ಆಗಬೇಕು ಮತ್ತು ತನ್ನ ಹೃದಯದಲ್ಲಿ ಇರುವ ಸಂಗೀತಕ್ಕೆ ಹೊಂದಿಕೊಳ್ಳುವಂತಹ ಧ್ವನಿ ಇರುವ ಹುಡುಗಿಯನ್ನು ಮದುವೆ ಆಗಬೇಕು ಎಂಬುದು ಅತಿಶಯ್​ ಆಸೆ. ಎಲ್ಲೋ ಕೇಳಿದ ಒಂದು ಹುಡುಗಿಯ ಧ್ವನಿಯ ಜಾಡು ಹಿಡಿದು ಆತ ಹೊರಡುತ್ತಾನೆ. ಆದರೆ ಆಕೆಯ ಮುಖ ಕಾಣಿಸುವುದಿಲ್ಲ. ಧ್ವನಿಯನ್ನೇ ಪ್ರೀತಿಸುವ ಅವನಿಗೆ ಹಲವು ಅಚ್ಚರಿಗಳು ಎದುರಾಗುತ್ತವೆ. ಆತ ಪ್ರೀತಿಸಿದ ಧ್ವನಿ ಯಾವ ಹುಡುಗಿಯದ್ದು ಎಂಬುದು ತಿಳಿಯಬೇಕಿದ್ದರೆ ಕ್ಲೈಮ್ಯಾಕ್ಸ್​ ತನಕ ಕಾಯಬೇಕು.

ಇದನ್ನೂ ಓದಿ: Captain Miller Review: ಮದ್ದು-ಗುಂಡುಗಳ ಸದ್ದಿನಲ್ಲಿ ಮಸುಕಾಯ್ತಾ ‘ಕ್ಯಾಪ್ಟನ್​ ಮಿಲ್ಲರ್​’ ಆಶಯ?

ಹಿಂದಿ ಕಿರುತೆರೆಯಲ್ಲಿ ಫೇಮಸ್​ ಆದವರು ಮಲ್ಲಿಕಾ ಸಿಂಗ್​. ‘ರಾಧಾಕೃಷ್ಣ’ ಸೀರಿಯಲ್​ನಲ್ಲಿ ರಾಧೆಯ ಪಾತ್ರ ಮಾಡಿದ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಅವರೊಂದು ಪಾತ್ರ ಮಾಡಿದ್ದಾರೆ. ಮಧುರಾ ಎಂಬ ಗಾಯಕಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ಹೆಚ್ಚು ತೂಕ ಇದೆ. ಅದೇ ರೀತಿ, ಮತ್ತೋರ್ವ ನಟಿ ಸ್ವಾದಿಷ್ಟ ಪಾತ್ರ ಕೂಡ ಹೈಲೈಟ್​ ಆಗಿದೆ. ತ್ರಿಕೋನ ಪ್ರೇಮಕಥೆಯಲ್ಲಿ ಇಬ್ಬರು ನಾಯಕಿಯರು ಹಾಗೂ ಕಥಾನಾಯಕನ ಪಾತ್ರಗಳಿಗೆ ಸೂಕ್ತವಾದ ಸ್ಕ್ರೀನ್​ ಸ್ಪೇಸ್​ ನೀಡಲಾಗಿದೆ. ಸೀರಿಯಲ್​ನಲ್ಲಿ ರಾಧೆಯಾಗಿ ಇಷ್ಟವಾಗಿದ್ದ ಮಲ್ಲಿಕಾ ಸಿಂಗ್​ ಅವರು ಈ ಸಿನಿಮಾದಲ್ಲಿ ಸಿಂಪಲ್​ ಹುಡುಗಿಯಾಗಿ ಇಷ್ಟವಾಗುತ್ತಾರೆ. ಸೂಕ್ಷ್ಮ ಅಭಿನಯದ ಮೂಲಕ ನಟಿ ಸ್ವಾದಿಷ್ಟ ಕೂಡ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ: Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’

ಸ್ಟಾರ್​ ನಟನ ಕುಟುಂಬದಿಂದ ಬಂದ ಹೀರೋ ಎಂಬ ಇಮೇಜ್​ ಬದಿಗಿಟ್ಟು ವಿನಯ್​ ರಾಜ್​ಕುಮಾರ್​ ಅವರು ಮಧ್ಯಮವರ್ಗದ ಸಾಮಾನ್ಯ ಹುಡುಗನಾಗಿ ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ನಟಿಸಿದ್ದಾರೆ. ನಮ್ಮ ನಡುವಿನ ಒಬ್ಬ ಹುಡುಗ ಎಂಬಂತಹ ಫೀಲ್​ ಕೊಡುವ ರೀತಿಯಲ್ಲಿ ಅವರ ಪಾತ್ರ ಮೂಡಿಬಂದಿದೆ. ಅನಗತ್ಯ ಹೀರೋಯಿಸಂ ಈ ಸಿನಿಮಾದಲ್ಲಿ ಇಲ್ಲ. ಅಷ್ಟರಮಟ್ಟಿಗೆ, ಪಾತ್ರಕ್ಕೆ, ಕಥೆಗೆ ನಿರ್ದೇಶಕರು ಮಹತ್ವ ನೀಡಿದ್ದಾರೆ. ಸಾಧು ಕೋಕಿಲ ಅವರು ಈ ಸಿನಿಮಾದಲ್ಲಿ ಕಾಮಿಡಿಯ ಜವಾಬ್ದಾರಿ ಹೊತ್ತಿಲ್ಲ. ಬದಲಿಗೆ, ಓರ್ವ ಸಂಗೀತ ನಿರ್ದೇಶಕನ ಪಾತ್ರವನ್ನು ಅವರು ಮಾಡಿದ್ದಾರೆ. ಕಥೆಯಲ್ಲಿ ರಿಯಾಲಿಟಿ ಶೋ ಜಡ್ಜ್​ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಹಾಗಂತ ಇದು ಸೀರಿಯಸ್​ ಆದ ಪಾತ್ರ ಕೂಡ ಅಲ್ಲ. ಅವರು ತೆರೆಮೇಲೆ ಬಂದಾಗಲೆಲ್ಲ ಪ್ರೇಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ. ಕಥಾನಾಯಕನ ತಂದೆಯ ಪಾತ್ರದಲ್ಲಿ ರಾಜೇಶ್​ ನಟರಂಗ ಅವರು ಎಂದಿನಂತೆ ಪ್ರಬುದ್ಧ ಅಭಿನಯ ನೀಡಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿರುವ ಕಾರ್ತಿಕ್​ ಮಹೇಶ್​ ಅವರು ಕೆಲವೇ ಹೊತ್ತು ಕಾಣಿಸಿಕೊಂಡರೂ ಕೂಡ ಸಿನಿಮಾದ ಸಸ್ಪೆನ್ಸ್​ ಹೆಚ್ಚಿಸುತ್ತಾರೆ.

ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

ಇದು ಮ್ಯೂಸಿಕಲ್​ ಲವ್​​ಸ್ಟೋರಿ ಇರುವಂತಹ ಸಿನಿಮಾ. ಇಂಥ ಚಿತ್ರದ ಸಂಗೀತ ನಿರ್ದೇಶಕರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದನ್ನು ವೀರ್​ ಸಮರ್ಥ್​ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಎಲ್ಲ ಹಾಡುಗಳಲ್ಲೂ ಕಾಡುವ ಗುಣ ಇದೆ. ಪ್ರೀತಿ, ಎಮೋಷನಲ್​ ಸಂದರ್ಭಗಳಿಗೆ ಅವರು ಸಂಗೀತದ ಮೂಲಕ ಜೀವ ತುಂಬಿದ್ದಾರೆ. ಇಡೀ ಸಿನಿಮಾದಲ್ಲಿ ‘ಮೂಕನಾಗಬೇಕು.. ಜಗದೊಳು ಜ್ವಾಕ್ಯಾಕಿಗಿರಬೇಕು..’ ಎಂಬ ಹಾಡನ್ನು ಒಂದು ಪಾತ್ರದ ರೀತಿಯಲ್ಲೇ ಬಳಸಲಾಗಿದೆ. ಚಿತ್ರದ ಕಥೆಗೆ ಈ ಹಾಡು ದೊಡ್ಡ ಟ್ವಿಸ್ಟ್​ ನೀಡುವ ರೀತಿಯಲ್ಲಿ ಬಳಕೆ ಆಗಿದೆ. ಇದು ಮ್ಯೂಸಿಕಲ್​ ಹಿನ್ನೆಲೆಯಲ್ಲಿ ಇರುವ ತ್ರಿಕೋನ ಪ್ರೇಮಕಥೆಯ ಸಿನಿಮಾ ಆದ್ದರಿಂದ ‘ಎಕ್ಸ್​ಕ್ಯೂಸ್​ ಮೀ’ ಸಿನಿಮಾದ ಫೀಲ್​ ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ