ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಂದೇಶ ಕೊಟ್ಟ ಶ್ರೀದೇವಿ ಭೈರಪ್ಪ

ನಟ ಯುವ ಅವರಿಂದ ವಿಚ್ಛೇದನ ಕೇಳಿರುವ ಶ್ರೀದೇವಿ ಬೈರಪ್ಪ, ಮಹಿಳೆಯರಲ್ಲಿ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದ್ದಾರೆ. ವಿವಾಹದ ನಂತರ ಮಹಿಳೆಯರು ಎದುರಿಸುವ ಸವಾಲುಗಳು, ಸುಳ್ಳು ಆರೋಪಗಳನ್ನು ಎದುರಿಸುವ ವಿಧಾನ ಮತ್ತು ನ್ಯಾಯಾಲಯದಲ್ಲಿ ಪುರಾವೆಗಳ ಮಹತ್ವದ ಬಗ್ಗೆ ಅವರು ಮಾತನಾಡಿದ್ದಾರೆ. ಮಹಿಳೆಯರು ತಮ್ಮ ಘನತೆ ಕಾಪಾಡಿಕೊಳ್ಳಲು ಮತ್ತು ಸುರಕ್ಷಿತ ಸಮಾಜ ನಿರ್ಮಿಸಲು ಧೈರ್ಯದಿಂದ ಹೋರಾಡಬೇಕೆಂದು ಶ್ರೀದೇವಿ ಕರೆ ನೀಡಿದ್ದಾರೆ.

ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಂದೇಶ ಕೊಟ್ಟ ಶ್ರೀದೇವಿ ಭೈರಪ್ಪ
ಯುವ-ಶ್ರೀದೇವಿ
Edited By:

Updated on: Apr 23, 2026 | 3:20 PM

ನಟ ಯುವ ರಾಜ್​ಕುಮಾರ್ (Yuva) ಹಾಗೂ ಶ್ರೀದೇವಿ ಬೈರಪ್ಪ ವಿವಾಹ ಆದ ಕೆಲವೇ ವರ್ಷಗಳಲ್ಲಿ ದೂರ ಆಗುವ ನಿರ್ಧಾರಕ್ಕೆ ಬಂದರು. ನಟಿಯ ಜೊತೆ ಯುವ ಅಫೇರ್ ಹೊಂದಿದ್ದಾರೆ ಎಂದು ಶ್ರೀದೇವಿ ಆರೋಪಿಸಿದ್ದಾರೆ. ಇದೇ ಕಾರಣ ನೀಡಿ ಅವರು ಯುವ ಅವರಿಂದ ವಿಚ್ಛೇದನ ಕೇಳಿದ್ದಾರೆ. ಈ ಪ್ರಕರಣ ಇನ್ನೂ ಕೋರ್ಟ್​​ನಲ್ಲಿ ಇದೆ ಎನ್ನಲಾಗಿದೆ. ಈಗ ಶ್ರೀದೇವಿ ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅದು ಕೂಡ ಯುವ ಜೊತೆಗಿನ ಫೋಟೋ ಹಂಚಿಕೊಂಡು! ಫೋಟೋ ಕ್ಯಾಪ್ಶನ್​​ ಅಲ್ಲಿ ಉದ್ದನೆಯ ಸಂದೇಶ ಬರೆದಿದ್ದಾರೆ. ವಿಶೇಷ ಎಂದರೆ ಇಂದು (ಏಪ್ರಿಲ್ 23) ಯುವ ಜನ್ಮದಿನ. ಇದೇ ದಿನದಂದು ಶ್ರೀದೇವಿ ಈ ಪೋಸ್ಟ್​ ಮಾಡಿದ್ದಾರೆ.

‘ತಡವಾಗುವುದಕ್ಕೂ ಮೊದಲು ಮಹಿಳೆಯರೇ ನಿಮ್ಮ ಹಕ್ಕುಗಳ ಬಗ್ಗೆ ತಿಳಿಯಿರಿ’ ಎಂದು ಬರಹ ಆರಂಭಿಸಿದ್ದಾರೆ ಶ್ರೀದೇವಿ. ‘ನಾನು ಈ ಹಕ್ಕುಗಳ ಬಗ್ಗೆ ಶಿಕ್ಷಣದ ಮೂಲಕ ಕಲಿತಿಲ್ಲ. ಕಠಿಣ ಸಮಯಗಳಲ್ಲಿ ಮತ್ತು ಎಲ್ಲಾ ಮಹಿಳೆಯರು ಘನತೆಯಿಂದ ಬದುಕುವ ಸಲುವಾಗಿ ನಮಗಿಂತ ಮೊದಲು ಹೋರಾಡಿದ ಜನರಿಂದ ಕಲಿತಿದ್ದೇನೆ. ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಿಕೊಡಲು ಮಾತ್ರ ನಾವು ಹೆಣ್ಣು ಮಕ್ಕಳನ್ನು ಸಿದ್ಧಪಡಿಸುತ್ತೇವೆ. ಆದರೆ, ಹಕ್ಕುಗಳನ್ನು ಪಡೆದುಕೊಳ್ಳಲು ಅವರನ್ನು ಸಿದ್ಧಪಡಿಸೋದು ತುಂಬಾನೇ ಕಡಿಮೆ’ ಎಂದು ಅವರು ಹೇಳಿದ್ದಾರೆ.

‘ನೋವು ಮತ್ತು ಸಂಕಟಗಳನ್ನು ಅನುಭವಿಸುತ್ತಿರುವ, ಇನ್ನೂ ಹೋರಾಡಲು ಮತ್ತು ಬಿಟ್ಟುಕೊಡದ ಮನಸ್ಥಿತಿ ಇರುವ ಮಹಿಳೆಯರಿಗೆ ಎರಡು ಸಂದೇಶ.

1. ‘ಸಂತೋಷದಿಂದ ದಾಂಪತ್ಯ ಆರಂಭಿಸಿ ನಂತರ ಅವರು ನಿಮ್ಮ ಬಗ್ಗೆ ಸುಳ್ಳು ಆರೋಪ ಮಾಡಿದರೆ ತಾಳ್ಮೆಯಿಂದ ಇರಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸಾಬೀತುಪಡಿಸಬೇಕಿರುವುದು ಅವರ ಜವಾಬ್ದಾರಿ, ನಿಮ್ಮದಲ್ಲ. ಮಹಿಳೆಯರಿಗೆ ಅವಮಾನ ಮಾಡುವುದು ಅವರು ತಪ್ಪಿಸಿಕೊಳ್ಳಲು ಬಳಸುವ ಅಗ್ಗದ ತಂತ್ರ. ನೆನಪಿಡಿ, ನ್ಯಾಯಾಲಯವು ಪುರಾವೆಗಳನ್ನು ಕೇಳುತ್ತದೆಯೇ ಹೊರತು, ಕೆಲವು ಅಗ್ಗದ ಸ್ಕ್ರಿಪ್ಟ್ ಅಲ್ಲ’ ಎಂದಿದ್ದಾರೆ ಶ್ರೀದೇವಿ.

2. ‘ಸೋಶಿಯಲ್ ಮೀಡಿಯಾ ಫೋಟೋಗಳನ್ನು ತೆಗೆದುಹಾಕಲು ನಿಮ್ಮನ್ನು ಅವರು ಒತ್ತಾಯಿಸುತ್ತಾರೆ. ಅದಕ್ಕೆ ಅವರು ನೀಡುತ್ತಿರುವ ಕಾರಣ, ನಮಗೆ ಅದನ್ನು ಇಟ್ಟುಕೊಳ್ಳಲು ಕಾನೂನುಬದ್ಧ ಹಕ್ಕಿಲ್ಲ ಎಂದು. ಮದುವೆಯಾಗಿದ್ದರೂ ಅಕ್ರಮ ಸಂಬಂಧದಲ್ಲಿ ಇರುವುದು ಮತ್ತು ಮದುವೆ ಆದರೂ ಸ್ವತಂತ್ರವಾಗಿ ಓಡಾಡುವುದು ಕಾನೂನುಬದ್ಧವಲ್ಲ’ ಎಂದಿದ್ದಾರೆ ಅವರು.

‘ಪ್ರತಿಯೊಂದು ಗಾಯವು ಗೋಚರಿಸುವುದಿಲ್ಲ. ಆದರೆ ಪ್ರತಿಯೊಂದು ಮೌನಕ್ಕೂ ಬೆಲೆ ಇರುತ್ತದೆ. ಮಹಿಳೆಯರಿಗೆ ಹಾನಿ ಮಾಡುವ ಮತ್ತು ಅವರನ್ನು ಹಗುರವಾಗಿ ಪರಿಗಣಿಸುವ ಸಮಾಜವನ್ನು ನಾವು ಸಾಮಾನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಮ್ಮ ಪೀಳಿಗೆಯೊಂದಿಗೆ ಇದು ಕೊನೆಗೊಳ್ಳಬೇಕು. ನಮ್ಮ ಮನೆಗಳಲ್ಲಿರುವ ಹೆಣ್ಣು ಮಕ್ಕಳು ವಾಸಿಸಲು ಉತ್ತಮ ಹಾಗೂ ಸುರಕ್ಷಿತ ಜಗತ್ತನ್ನು ಹೊಂದಬೇಕು’ ಎಂದು ತಮ್ಮ ಸಾಲುಗಳನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಯುವ ಹಾಗೂ ಆ ನಟಿ ಬಗ್ಗೆ ಕೇಳಿದ್ದಕ್ಕೆ ರಾಜ್​​ಕುಮಾರ್ ಹಾಡಿನ ಮೂಲಕ ಉತ್ತರಿಸಿದ ಶ್ರೀದೇವಿ

2019ರಲ್ಲಿ ಯುವ ಹಾಗೂ ಶ್ರೀದೇವಿ ವಿವಾಹ ನಡೆಯಿತು. ಇಬ್ಬರೂ ಪ್ರೀತಿಸಿ ಮದುವೆ ಆದರು. ವಿವಾಹ ಆದ ಕೆಲ ವರ್ಷಗಳ ಬಳಿಕ ಇಬ್ಬರೂ ದೂರ ಆಗುವ ನಿರ್ಧಾರಕ್ಕೆ ಬಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 3:05 pm, Thu, 23 April 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us