6 ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಯ್ತು ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾ
‘ಕೊರಗಜ್ಜ’ ಸಿನಿಮಾದಲ್ಲಿ ಶ್ರುತಿ, ಭವ್ಯ, ಕಬೀರ್ ಬೇಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ನವೆಂಬರ್ ವೇಳೆಗೆ 6 ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಜ್ಜಾಗುತ್ತಿದ್ದಾರೆ. ‘ಕೊರಗಜ್ಜ’ ಸಿನಿಮಾಗೆ ಗೋಪಿ ಸುಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಹಲವು ಕಾರಣಗಳಿಂದಾಗಿ ‘ಕೊರಗಜ್ಜ’ (Koragajja) ಸಿನಿಮಾ ಸುದ್ದಿ ಆಗುತ್ತಿದೆ. ಸುಧೀರ್ ಅತ್ತಾವರ್ (Sudheer Attavar) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ತ್ರಿವಿಕ್ರಮ ಸಪಲ್ಯ ಅವರು ನಿರ್ಮಾಣ ಮಾಡಿದ್ದಾರೆ. ‘ಸಕ್ಸಸ್ ಫಿಲ್ಮ್ಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇತ್ತೀಚೆಗೆ ‘ಕೊರಗಜ್ಜ’ ಸಿನಿಮಾ (Koragajja Kannada Movie) ಫಸ್ಟ್ ಲುಕ್ ಟೀಸರ್ ಮತ್ತು ತ್ರಿಡಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವೆ ಮೋಟಮ್ಮ, ನಿರ್ಮಾಪಕಿ-ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಮುಂತಾದವರು ಪಾಲ್ಗೊಂಡಿದ್ದರು.
ಕೊರಗಜ್ಜ ಸಿನಿಮಾ 3 ವರ್ಷಗಳ ಹಿಂದೆ ಸೆಟ್ಟೇರಿತ್ತು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಮಾತನಾಡಿದರು. ‘ಕೊರಗಜ್ಜನ ಆಶೀರ್ವಾದದಿಂದ ಅಂದುಕೊಂಡ ಹಾಗೆ ಸಿನಿಮಾ ಮೂಡಿಬಂದಿದೆ. ಯಾವುದೇ ಕೊರತೆ ಬಾರದ ರೀತಿಯಲ್ಲಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಕೆಲಸ ಮಾಡಿದ್ದಾರೆ. ಒಟ್ಟು 6 ಭಾಷೆಗಳಲ್ಲಿ ಈ ಸಿನಿಮಾ ಮೂಡಿಬಂದಿದೆ. ಅಂದಾಜು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ವಿಜಯಲಕ್ಷ್ಮಿ ಅವರು ಮಾತನಾಡಿ, ‘ಇದು ನಾನು ಹಾಗೂ ಜೈ ಜಗದೀಶ್ ಆರಂಭಿಸಿದ ಸಿನಿಮಾ. ಸುಮಾರು 25 ಸಿನಿಮಾ ನಿರ್ಮಾಣ ಮಾಡಿರುವ ನಮಗೆ ಈ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗದೇ ಹಿಂದೆ ಸರಿದೆವು. ಆದರೆ ಅದು ಈಗ ಸುಧೀರ್ ಅತ್ತಾವರ್ ಅವರಿಗೆ ಒಲಿದಿದೆ’ ಎಂದರು. ಅಲ್ಲದೇ, ಫಸ್ಟ್ ಲುಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು ಮಾತನಾಡಿ, ‘ನಿರ್ದೇಶಕರು ನನಗೆ ಹಲವು ವರ್ಷಗಳ ಸ್ನೇಹಿತರು. ಅವರು ಹೇಳಿದ ಕಥೆ ಕೇಳಿದ ತಕ್ಷಣ ನಾನು ನಿರ್ಮಾಣಕ್ಕೆ ಮುಂದಾದೆ. ನಾವು ಕೂಡ ಕೊರಗಜ್ಜನನ್ನು ಆರಾಧಿಸುವ ಕುಟುಂಬದವರು. ಅನುಭವಿ ಕಲಾವಿದರು ಮತ್ತು ನುರಿತ ತಂತ್ರಜ್ಞರು ನಮ್ಮ ಸಿನಿಮಾದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನವೆಂಬರ್ ಕೊನೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಾಡುತ್ತಿದ್ದೇವೆ’ ಎಂದರು.
ಇದನ್ನೂ ಓದಿ: ‘ಕೊರಗಜ್ಜ’ದಲ್ಲಿ 800 ವರ್ಷ ಹಿಂದಿನ ಕಥೆ; 96ನೇ ವಯಸ್ಸಿನಲ್ಲೂ ಸತ್ಯು ಮಾರ್ಗದರ್ಶನ
ಹಿರಿಯ ಕಲಾವಿದರಾದ ಭವ್ಯ, ಶ್ರುತಿ, ಕಬೀರ್ ಬೇಡಿ ಮುಂತಾದವರು ‘ಕೊರಗಜ್ಜ’ ಸಿನಿಮಾದಲ್ಲಿ ನಟಿಸಿದ್ದಾರೆ. ಕೊರಗಜ್ಜನ ಸಾಕು ತಾಯಿಯ ಪಾತ್ರವನ್ನು ಶ್ರುತಿ ಅವರು ನಿಭಾಯಿಸಿದ್ದಾರೆ. ‘ನನ್ನ ವೃತ್ತಿಜೀವನದಲ್ಲೇ ಇದು ವಿಭಿನ್ನವಾದ ಸಿನಿಮಾ. ಸತತ 28 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದು ಮರೆಯಲಾಗದ ಅನುಭವ’ ಎಂದು ಶ್ರುತಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




