ಪುನೀತ್ ರಾಜ್ಕುಮಾರ್ ಹೆಸರಿನ ನಗು ಕಳೆದು ಮೂರು ವರ್ಷ; ಅಂದು ನಡೆದಿದ್ದೇನು?
2021ರ ಅಕ್ಟೋಬರ್ 29ರಂದು ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನುಂಟುಮಾಡಿತು. ಮೂರು ವರ್ಷಗಳು ಕಳೆದರೂ, ಅವರ ಅಭಿಮಾನಿಗಳು ಮತ್ತು ಚಿತ್ರರಂಗದವರು ಅವರನ್ನು ಇನ್ನೂ ನೆನಪಿಸಿಕೊಳ್ಳುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29ಕ್ಕೆ ) ಮೂರು ವರ್ಷ ತುಂಬಿದೆ. ಪುನೀತ್ ರಾಜ್ಕುಮಾರ್ ಇಷ್ಟು ಸಣ್ಣ ವಯಸ್ಸಲ್ಲಿ (46 ವರ್ಷ) ನಿಧನ ಹೊಂದುತ್ತಾರೆ ಎಂದರೆ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರ ನಿಧನ ವಾರ್ತೆ ಎಲ್ಲರಿಗೂ ಶಾಕಿಂಗ್ ಎನಿಸಿತ್ತು. ಈಗಲೂ ಜನರ ಬಳಿ ಪುನೀತ್ ನಿಧನ ವಾರ್ತೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಕ್ಟೋಬರ್ 28ರಂದು ಗುರುಕಿರಣ್ ಜನ್ಮದಿನ. ಈ ಬರ್ತ್ಡೇ ಪಾರ್ಟಿಗೆ ಪುನೀತ್ ತೆರಳಿದ್ದರು. ಬರ್ತ್ಡೇನ ಅದ್ದೂರಿಯಾಗಿ ಆಚರಿಸಿಕೊಂಡ ಬಳಿಕ ಅವರು ಮನೆಗೆ ಬಂದರು. ಅಕ್ಟೋಬರ್ 29ರ ಬೆಳಿಗ್ಗೆ ಪುನೀತ್ ಜಿಮ್ ಮಾಡಿದರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಪುನೀತ್ ಜಿಮ್ ಮಾಡಿಲ್ಲ ಎನ್ನುತ್ತಾರೆ. ಆದರೆ, ಅವರಿಗೆ ತೀವ್ರ ಹೃದಯಾಘಾತವಂತೂ ಆಯಿತು.
ಪುನೀತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಪುನೀತ್ ಇಲ್ಲ ಎಂಬ ವಾರ್ತೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಯಾರಿಗೂ ಈ ಸುದ್ದಿಯನ್ನು ನಂಬೋಕೆ ಆಗುತ್ತಲೇ ಇರಲಿಲ್ಲ. ‘ಇದು ಸುಳ್ಳಾಗಲಿ’ ಎಂದು ಎಲ್ಲರೂ ಕೋರಿಕೊಂಡರು. ಆದರೆ, ನಿಧನ ವಾರ್ತೆ ನಿಜವಾಯಿತು. ಅವರ ಅಂತಿಮ ದರ್ಶನಕ್ಕೆ ಪರಭಾಷೆಯ ಹೀರೋಗಳು ಕೂಡ ಆಗಮಿಸಿದರು. ಅವರ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಕೊನೆಯ ಬಾರಿಗೆ ನೆಚ್ಚಿನ ಹೀರೋನ ದರ್ಶನ ಪಡೆದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಮಣ್ಣಾದರು.
ಇದನ್ನೂ ಓದಿ: ‘ಮುಂಗಾರು ಮಳೆ’ ಚಿತ್ರದ ಆಫರ್ ಗಣೇಶ್ ಕೈ ಸೇರಲು ಕಾರಣ ಆಗಿದ್ದೇ ಪುನೀತ್ ರಾಜ್ಕುಮಾರ್
ಅಕ್ಟೋಬರ್ 29ರಂದು ಶಿವರಾಜ್ಕುಮಾರ್ ನಟನೆಯ ‘ಬಜರಂಗಿ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಅವರು ಬೆಳಿಗ್ಗೆ ವಿಶ್ ಮಾಡಿದ್ದರು. ಇದುವೇ ಪುನೀತ್ ಮಾಡಿದ ಕೊನೆಯ ಟ್ವೀಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಅವರನ್ನು ನೆನಪಿಸಿಕೊಳ್ಳುವ ಕೆಲಸ ಎಲ್ಲರಿಂದಲೂ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Mon, 28 October 24