ನಟ ಯಶ್ಗೆ ಅವಮಾನ ಮಾಡಿದ ಮಲಯಾಳಂ ಸಿನಿಮಾ
Yash KGF: ಯಶ್ ನಟನೆಯ ‘ಕೆಜಿಎಫ್’ ಸಿನಿಮಾ ಈಗ ಬರುತ್ತಿರುವ ಹಲವು ಮಾಸ್, ಎಲಿವೇಷನ್ ಸಿನಿಮಾಗಳಿಗೆ ಮೂಲ. ‘ಕೆಜಿಎಫ್’ ಸಿನಿಮಾ ಸರಣಿಯ ಯಶಸ್ಸನ್ನು ಇಡೀ ಭಾರತೀಯ ಚಿತ್ರರಂಗವೇ ಕೊಂಡಾಡುತ್ತಿದೆ. ಆದರೆ ಕೆಲವರಿಗೆ ‘ಕೆಜಿಎಫ್’ ಮತ್ತು ಯಶ್ರ ಯಶಸ್ಸು ಹೊಟ್ಟೆಉರಿ ತಂದಿದೆ. ತಮ್ಮ ಸಿನಿಮಾಗಳಲ್ಲಿ ಯಶ್ ಅನ್ನು, ಕೆಜಿಎಫ್ ಸಿನಿಮಾವನ್ನು ಹೀಗಳೆಯುವ ಮೂಲಕ ಹೊಟ್ಟೆಉರಿ ತಣ್ಣಗಾಗಿಸಿಕೊಳ್ಳುತ್ತಿದ್ದಾರೆ. ಅಂಥಹದ್ದೊಂದು ಘಟನೆ ಇಲ್ಲಿದೆ ನೋಡಿ.
ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಈಗ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾದ ಮೂಲಕ ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್ಗೆ ತೆಗೆದುಕೊಂಡು ಹೋಗಬಹುದು ಎಂದು ತೋರಿಸಿಕೊಟ್ಟ ನಟ ಅವರು. ಕೇವಲ ಕನ್ನಡ ಸಿನಿಮಾಗಳಿಗೆ ಮಾತ್ರವೇ ಅಲ್ಲದೆ ಪರಭಾಷೆಯ ಸಿನಿಮಾಗಳಿಗೂ, ನಟ, ತಂತ್ರಜ್ಞರಿಗೂ ಸ್ಪೂರ್ತಿಯಾಗಿದ್ದಾರೆ ನಟ ಯಶ್. ಇದೀಗ ‘ಟಾಕ್ಸಿಕ್’ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಏರುವ ಪ್ರಯತ್ನದಲ್ಲಿದ್ದಾರೆ. ಆದರೆ ಯಶಸ್ಸಿಗೆ ಶತ್ರುಗಳು ಹೆಚ್ಚು ಎಂಬಂತೆ, ಅವರ ಎತ್ತರಕ್ಕೆ ಏರಲಾಗದ ಕೆಲವರು ಅವರನ್ನು ಹೀಯಾಳಿಸುವ ಮೂಲಕ, ವ್ಯಂಗ್ಯ ಮಾಡುವ ಮೂಲಕ ತಮ್ಮ ಹೊಟ್ಟೆಉರಿಯನ್ನು ತಣ್ಣಗಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ಮಲಯಾಳಂನಲ್ಲಿ ‘ಮಾರ್ಕೊ’ ಹೆಸರಿನ ಸಿನಿಮಾ ಬಂತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಯಶಸ್ಸು ಕಂಡಿತು. ಆದರೆ ಸಿನಿಮಾದಲ್ಲಿ ಘನಘೋರವಾದ ಹಿಂಸೆಯಿತ್ತು. ಅದೆಷ್ಟು ಕೆಟ್ಟ ರೀತಿಯ ಹಿಂಸೆಯೆಂದರೆ ಸಿನಿಮಾ ನೋಡಿದ ಕೆಲ ಮಹಿಳೆಯರು ಚಿತ್ರಮಂದಿರದಲ್ಲಿ ವಾಂತಿ ಮಾಡಿಕೊಂಡರೆಂದು ವರದಿಗಳಾಯ್ತು. ಈ ಸಿನಿಮಾದಲ್ಲಿರುವ ಅತಿಯಾದ ಹಿಂಸೆಯಿಂದಾಗಿ ಸಿನಿಮಾದ ಒಟಿಟಿ ಬಿಡುಗಡೆ ಮೇಲೆ ಸಹ ತಡೆ ಹೇರಲಾಗಿತ್ತು. ಆದರೆ ಸಿನಿಮಾ, ಬಿಹಾರ, ಉತ್ತರ ಪ್ರದೇಶ ಇನ್ನಿತರೆ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡು ಹಿಟ್ ಎನಿಸಿಕೊಂಡಿತು.
ಇದನ್ನೂ ಓದಿ:‘ಕೆಜಿಎಫ್ 2’ ಕೆಟ್ಟ ಸಿನಿಮಾ ಹೇಗೆ ಗೆದ್ದಿತೊ‘: ಯಶ್ ಅಭಿಮಾನಿಗಳ ಕೆಣಕಿದ ವರ್ಮಾ
ಇದೇ ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಿದ ಉನ್ನಿ ಮುಕುಂದನ್, ‘ಮಾರ್ಕೊ’ ಸಿನಿಮಾದಲ್ಲಿ ‘ಕೆಜಿಎಫ್’ ಸಿನಿಮಾವನ್ನು ಯಶ್ ಬಗ್ಗೆ ಕೆಟ್ಟದಾಗಿ ಹೀಗಳೆದಿದ್ದಾರೆ. ದೃಶ್ಯದ ತುಣುಕು ವೈರಲ್ ಆಗುತ್ತಿದ್ದು ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಮಾದ ಫೈಟ್ ದೃಶ್ಯವೊಂದರಲ್ಲಿ ನಾಯಕ (ಉನ್ನಿ ಮುಕುಂದನ್) ಸಂಭಾಷಣೆಯೊಂದನ್ನು ಹೇಳುತ್ತಾನೆ, ‘ನಾನು ನಾಯಿ ಪ್ರೇಮಿ, ನನ್ನ ಬಳಿ ಒಂದು ಹಸ್ಕಿ ನಾಯಿ ಇದೆ, ಆ ನಾಯಿಯ ಹೆಸರು ರಾಕಿ’ ಎನ್ನುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ, ರಾಕಿ ಹೆಸರು ಹೇಳಿದ ಬಳಿಕ ಕೆಟ್ಟದಾಗಿ ಕ್ಯಾಕರಿಸಿ ಉಗಿಯುತ್ತಾನೆ ಈ ಸನ್ನಿವೇಶದಲ್ಲಿ ನಾಯಕನ ಮುಖಭಾವ, ಸಂಭಾಷಣೆಯಲ್ಲಿ ನೀಡುವ ಮಾಹಿತಿ ಸ್ಪಷ್ಟಪಡಿಸುತ್ತದೆ ಆ ಸಂಭಾಷಣೆ ‘ಕೆಜಿಎಫ್’ ಸಿನಿಮಾದ ರಾಕಿಭಾಯ್ ಕುರಿತಾಗಿಯೇ ಆಗಿದೆ ಎಂಬುದನ್ನು.
‘ಕೆಜಿಎಫ್’ ಸಿನಿಮಾದಲ್ಲಿ ವೈಲೆನ್ಸ್ ಬಗ್ಗೆ ಕೆಲ ಡೈಲಾಗ್ಗಳಿವೆ. ‘ಮಾರ್ಕೊ’ ಅತಿ ಹೆಚ್ಚು ವೈಲೆಂಟ್ ಸಿನಿಮಾ ಆಗಿರುವ ಕಾರಣ, ನಮ್ಮದು ಕೆಜಿಎಫ್ಗಿಂತಲೂ ವೈಲೆಂಟ್ ಸಿನಿಮಾ, ರಾಕಿಗಿಂತಲೂ ತಮ್ಮ ಸಿನಿಮಾದ ನಾಯಕನ ಪಾತ್ರವಾದ ಮಾರ್ಕೊ ಪೀಟರ್ ಉತ್ತಮ ಎಂಬ ಭ್ರಮೆಯಲ್ಲಿ ಈ ಸಂಭಾಷಣೆ ಹೇಳಿಸಿರುವ ಸಾಧ್ಯತೆ ಇದೆ. ಉನ್ನಿ ಮುಕುಂದನ್ ಅಭಿಮಾನಿಗಳು ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಆದರೆ ಯಶ್ ಅಭಿಮಾನಿಗಳು, ಕನ್ನಡ ಸಿನಿಮಾ ಅಭಿಮಾನಿಗಳು ಈ ಕೆಟ್ಟ ಹೀಗಳಿಕೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:11 am, Thu, 20 February 25