‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಟ್ರೇಲರ್; ‘ಅಣ್ಣಯ್ಯ’ ಧಾರಾವಾಹಿ ನಟ ವಿಕಾಶ್ ಹೀರೋ
ಹಾರರ್ ಕಥಾಹಂದರ ಇರುವ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ‘ಅಣ್ಣಯ್ಯ’ ಧಾರಾವಾಹಿ ಖ್ಯಾತಿಯ ವಿಕಾಶ್ ಉತ್ತಯ್ಯ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಫೆ.28ರಂದು ಈ ಸಿನಿಮಾ ತೆರೆಕಾಣಲಿದೆ. ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಟೈಟಲ್ ಮೂಲಕವೇ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಕೌತುಕ ಮೂಡಿಸಿದೆ. ಈಗ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಶೀರ್ಷಿಕೆಯೇ ಸೂಚಿಸುವಂತೆ ಒಂದು ದೊಡ್ಡ ಅಪಾಯವನ್ನು ಎದುರಿಸಲು ಹೊರಟ ಹುಡುಗರ ಕಹಾನಿ ಈ ಸಿನಿಮಾದಲ್ಲಿ ಇದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ‘ಅಣ್ಣಯ್ಯ’ ಸೀರಿಯಲ್ ಮೂಲಕ ಮನೆಮಾತಾಗಿರುವ ನಟ ವಿಕಾಶ್ ಉತ್ತಯ್ಯ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಮಿಥುನ್ ತೀರ್ಥಹಳ್ಳಿ ಹಾಗೂ ರಾಘವ್ ಕೊಡಚಾದ್ರಿ ಕೂಡ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ.
ಹಾರರ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಟ್ರೇಲರ್ ಇಷ್ಟ ಆಗಿದೆ. ಅಭಿಜಿತ್ ತೀರ್ಥಹಳ್ಳಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೊದಲ ಸಿನಿಮಾ. ‘ಇದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಆಗಿದ್ದರೂ ಕೂಡ ಹಾರರ್ ಅಂಶ ಗಮನ ಸೆಳೆಯುತ್ತೆ. ಬೆಂಕಿ, ನೀರು, ಗಾಳಿ ಈ ಮೂರನ್ನು ಪ್ರತಿನಿಧಿಸುವ 3 ಪಾತ್ರಗಳು ಪ್ರಮುಖವಾಗಿ ಬರಲಿವೆ. ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ ಮತ್ತು ರಾಘವ್ ಕೊಡಚಾದ್ರಿ ಅವರು ಆ ಪಾತ್ರಗಳನ್ನು ಮಾಡಿದ್ದಾರೆ’ ಎಂದು ನಿರ್ದೇಶಕರು ಹೇಳಿದರು.
‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಟ್ರೇಲರ್:
‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಟೀಸರ್ ಹಾಗೂ ಹಾಡುಗಳಿಗೆ ಈ ಮೊದಲೇ ಜನರಿಂದ ಮೆಚ್ಚುಗೆ ಸಿಕ್ಕಿತ್ತು. ಈಗ ಟ್ರೇಲರ್ ಕೂಡ ಗಮನ ಸೆಳೆಯುತ್ತಿರುವುದು ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ‘ಆನಂದ್ ಆಡಿಯೋ’ ಮೂಲಕ ಟ್ರೇಲರ್ ಬಿಡುಗಡೆ ಆಗಿದೆ. ಫೆಬ್ರವರಿ 28ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಮಾತನಾಡಿದರು.
ವಿಕಾಶ್ ಉತ್ತಯ್ಯ ಅವರು ಈ ಮೊದಲು ‘ಆನ’, ‘ಮೇರಿ’ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರು ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಮೂಲಕ ಹೀರೋ ಆಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಅವರು ನಾಸ್ತಿಕನ ಪಾತ್ರ ಮಾಡಿದ್ದಾರೆ. ಟ್ರೇಲರ್ನಲ್ಲಿ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಈ ಸಿನಿಮಾಗೆ ನಾಯಕಿಯಾಗಿ ರಾಧಾ ಭಗವತಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಹಾರರ್ ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ; ಕರ್ನಾಟಕದಲ್ಲಿ ನಡೆಯಲಿದೆ ಕಥೆ
ಸಿನಿಮಾದಲ್ಲಿ ನಟಿಸಿರುವ ಮಿಥುನ್ ತೀರ್ಥಹಳ್ಳಿ, ಅಶ್ವಿನ್ ಹಾಸನ್, ರಾಘವ್ ಕೊಡಚಾದ್ರಿ, ದೇವ್ ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಿನಿಮಾಗೆ ಸುನಾದ್ ಗೌತಮ್ ಅವರು ಛಾಯಾಗ್ರಹಣದ ಜೊತೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ‘ಚಿತ್ರತಂಡದ ಸಹಕಾರದಿಂದ ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಹೊಸತಂಡದ ಈ ಪ್ರಯತ್ನಕ್ಕೆ ಪ್ರೇಕ್ಷಕರ ಬೆಂಬಲ ಬೇಕಿದೆ’ ಎಂದು ನಿರ್ಮಾಪಕರಾದ ಮಂಜುನಾಥ್ ವಿ.ಜಿ. ಮತ್ತು ಪೂರ್ಣಿಮಾ ಗೌಡ. ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.