ಉಪೇಂದ್ರ, ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಜನವರಿ 30ಕ್ಕೆ ರಿಲೀಸ್
ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಕ್ತ ಕಾಶ್ಮೀರ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ರಮ್ಯಾ, ಉಪೇಂದ್ರ, ದೊಡ್ಡಣ್ಣ, ಕುರಿ ಪ್ರತಾಪ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೇಶಭಕ್ತಿ ಕಥಾಹಂದರ ಹೊಂದಿರುವ ಈ ಸಿನಿಮಾ ಜನವರಿ 30ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ಒಂದಷ್ಟು ವರ್ಷಗಳ ಹಿಂದೆಯೇ ‘ರಕ್ತ ಕಾಶ್ಮೀರ’ ಸಿನಿಮಾದ ಶೂಟಿಂಗ್ ನಡೆದಿತ್ತು. ಉಪೇಂದ್ರ (Upendra) ಹಾಗೂ ರಮ್ಯಾ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದು ತಡವಾಗಿತ್ತು. ಜನವರಿ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು (SV Rajendra Singh Babu) ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಎಂಡಿಎಂ ಪ್ರೊಡಕ್ಷನ್ಸ್’ ಮೂಲಕ ‘ರಕ್ತ ಕಾಶ್ಮೀರ’ (Raktha Kashmira) ಸಿನಿಮಾ ನಿರ್ಮಾಣ ಆಗಿದೆ. ಮುಖೇಶ್ ರಿಶಿ, ದೊಡ್ಡಣ್ಣ, ಓಂ ಪ್ರಕಾಶ್ ರಾವ್, ತೆಲುಗು ನಟಿ ಅನಿಲ, ಕುರಿ ಪ್ರತಾಪ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
ಮಾರ್ಸ್ ಸುರೇಶ್ ಅವರು ‘ರಕ್ತ ಕಾಶ್ಮೀರ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಗಣರಾಜ್ಯೋತ್ಸವದ ವಾರದಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ಪಾಕ್ ಉಗ್ರಗಾಮಿಗಳು ಕಾಶ್ಮೀರದಲ್ಲಷ್ಟೇ ಅಲ್ಲದೇ, ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲೂ ದಾಳಿ ನಡೆಸಿ ಸಾವಿರಾರು ಜನರನ್ನು ಹತ್ಯೆ ಮಾಡಿರುತ್ತಾರೆ. ಇದರಿಂದ ನೊಂದ ಚಿತ್ರದ ನಾಯಕ ಮತ್ತು ನಾಯಕಿ ಬೆಂಗಳೂರಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಉಗ್ರರನ್ನು ಮಟ್ಟಹಾಕುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ.
‘ರಕ್ತ ಕಾಶ್ಮೀರ’ ಚಿತ್ರಕ್ಕೆ ಕಾಶ್ಮೀರದಲ್ಲೇ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಸಾಕಷ್ಟು ಮಕ್ಕಳು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೇಶಪ್ರೇಮ ಸಾರುವ ಈ ಚಿತ್ರವು ಕುಟುಂಬ ಸಮೇತ ನೋಡುವಂತಿದೆ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ಹದಿನೆಂಟು ನಿಮಿಷಗಳ ಒಂದು ಹಾಡು ಇದರಲ್ಲಿದೆ!
ಇದನ್ನೂ ಓದಿ: 35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ
18 ನಿಮಿಷಗಳ ವಿಶೇಷ ಹಾಡಿನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ಕುಮಾರ್, ಶ್ರೀನಾಥ್, ದರ್ಶನ್, ಪುನೀತ್ ರಾಜ್ಕುಮಾರ್, ಜಗ್ಗೇಶ್, ರಮೇಶ್ ಅರವಿಂದ್, ಉಪೇಂದ್ರ, ಜೈ ಜಗದೀಶ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದು ಈವರೆಗೂ ಯಾರೂ ಮಾಡಿರದ ದಾಖಲೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಗುರುಕಿರಣ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




