150ನೇ ಸಿನಿಮಾಗೆ ಸಂಗೀತ ನೀಡಿದ ವಿ. ಮನೋಹರ್; ‘31 ಡೇಸ್’ ಚಿತ್ರದಿಂದ ಹೊಸ ಹಾಡು
ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಕನ್ನಡ ಚಿತ್ರರಂಗದಲ್ಲಿ 150 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. 150ನೇ ಸಿನಿಮಾವಾಗಿ ‘31 ಡೇಸ್’ ಮೂಡಿಬಂದಿದೆ. ಈ ಸಿನಿಮಾದ ಹೊಸ ಸಾಂಗ್ ಬಿಡುಗಡೆ ಮತ್ತು ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಸುದ್ದಿಗೋಷ್ಠಿಯಲ್ಲಿ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ವಿ. ಮನೋಹರ್ ಭಾಗಿಯಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ವಿ. ಮನೋಹರ್ ಅವರು 150ನೇ ಸಿನಿಮಾದ ಮೈಲಿಗಲ್ಲಿನಲ್ಲಿ ನಿಂತಿದ್ದಾರೆ. ‘ಜಾಲಿಡೇಸ್’ ಸಿನಿಮಾ ಖ್ಯಾತಿಯ ನಿರಂಜನ್ ಶೆಟ್ಟಿ ಅವರು ಹೀರೋ ಆಗಿ ಅಭಿನಯಿಸಿರುವ ‘31 ಡೇಸ್’ ಸಿನಿಮಾಗೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಇದು ಅವರು 150ನೇ ಸಿನಿಮಾ ಎಂಬುದು ವಿಶೇಷ. ಒಪೇರಾ ಶೈಲಿಯ ಹಾಡು ಈಗ ಬಿಡುಗಡೆ ಆಗಿದೆ. ಈ ಹಾಡನ್ನು ವಿ. ಮನೋಹರ್ ಅವರೇ ಬರೆದು, ಹಾಡಿ, ಸಂಗೀತ ಸಂಯೋಜಿಸಿದ್ದಾರೆ. ಜೊತೆಗೆ ನಿರಂಜನ್ ಶೆಟ್ಟಿ ಜೊತೆ ನಟಿಸಿದ್ದಾರೆ ಕೂಡ! ಇತ್ತೀಚೆಗೆ (ಡಿಸೆಂಬರ್ 31) ಈ ಹಾಡು ರಿಲೀಸ್ ಆಯಿತು.
ಹಾಡು ಬಿಡುಗಡೆ ಸಲುವಾಗಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರತಂಡದವರು ಮಾತನಾಡಿದರು. ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿ. ‘ಇಂದು ರಿಲೀಸ್ ಆಗಿರುವ ಒಪೇರಾ ಶೈಲಿಯ ಹಾಡು ಕನ್ನಡದಲ್ಲಿ ಇದೇ ಮೊದಲು ಎಂಬುದು ನನ್ನ ಅಭಿಪ್ರಾಯ. ನಿರಂಜನ್ ಒತ್ತಾಯಕ್ಕೆ ಮಣಿದು ಈ ಸಾಂಗ್ನಲ್ಲಿ ನಾನು ಕೂಡ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಒಟ್ಟು 10 ಹಾಡುಗಳಿವೆ. ರವೀಂದ್ರ ಸೊರಗಾವಿ, ಎಂ.ಡಿ. ಪಲ್ಲವಿ ಸೇರಿದಂತೆ ಹಲವು ಜನಪ್ರಿಯ ಗಾಯಕರು ಹಾಡಿದ್ದಾರೆ’ ಎಂದು ಹೇಳಿದರು.
ನಿರಂಜನ್ ಶೆಟ್ಟಿ ಅವರ ಸಿನಿಮಾ ಜರ್ನಿಗೆ ಈಗ 15 ವರ್ಷಗಳಾಗಿವೆ. ‘31 ಡೇಸ್’ ಸಿನಿಮಾವನ್ನು ಅವರ ಹೋಮ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿದೆ. ಅವರ ಪತ್ನಿ ನಾಗವೇಣಿ ನಿರ್ಮಾಪಕರಾಗಿದ್ದಾರೆ. ‘ಇದು 31 ದಿನಗಳಲ್ಲಿ ನಡೆಯುವ ಲವ್ ಸ್ಟೋರಿ. ಆದ್ದರಿಂದ 31 ಡೇಸ್ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಮಧ್ಯಂತರಕ್ಕಿಂತ ಮೊದಲು 15 ದಿನಗಳು ಮತ್ತು ಮಧ್ಯಂತರದ ಬಳಿಕ 15 ದಿನಗಳ ಕಥೆ ಸಾಗುತ್ತದೆ. ಕೊನೆಯ ದಿನ ಕ್ಲೈಮ್ಯಾಕ್ಸ್ ಆಗಿರುತ್ತದೆ. ಯಾರೂ ಊಹಿಸದ ಕ್ಲೈಮ್ಯಾಕ್ಸ್ ಈ ಸಿನಿಮಾದಲ್ಲಿದೆ. ವಿ. ಮನೋಹರ್ ಅವರ 150ನೇ ಸಿನಿಮಾ ನನಗೆ ಸಿಕ್ಕಿದ್ದು ನನ್ನ ಪಾಲಿನ ಪುಣ್ಯ’ ಎಂದು ನಿರಂಜನ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: 2025ರ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳಿವು
ವಿನುತ್ ಕೆ. ಅವರು ಛಾಯಾಗ್ರಹಣ ಮಾಡಿದ್ದಾರೆ. ತ್ರಿಭುವನ್, ಧನು ಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರವಿತೇಜ್ ಸಿ.ಎಚ್, ನಿತೀಶ್ ಪೂಜಾರಿ, ಸನತ್ ಅವರ ಸಂಕಲನದಲ್ಲಿ ‘31 ಡೇಸ್’ ಚಿತ್ರ ಸಿದ್ಧವಾಗಿದೆ. ‘ಸಾಕಷ್ಟು ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿದ್ದ ನನ್ನನ್ನು ನಿರಂಜನ್ ಅವರು ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಮಾಡಿದ್ದಾರೆ. ವಿ. ಮನೋಹರ್ ಸಂಗೀತ 150ನೇ ಸಿನಿಮಾ ನನ್ನ ಮೊದಲ ನಿರ್ದೇಶನದ ಚಿತ್ರ ಆಗಿರುವುದು ಖುಷಿ. ಇದು ಹೈವೋಲ್ಟೇಜ್ ಲವ್ ಸ್ಟೋರಿ’ ಎಂದು ನಿರ್ದೇಶಕ ರಾಜ ರವಿಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.