ಒಟಿಟಿ, ಚಿತ್ರಮಂದಿರದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ ‘ಹೌದ್ದೋ ಹುಲಿಯ’ ಸಿನಿಮಾ
ಹೌದು ಹುಲಿಯಾ ಎಂಬ ಡೈಲಾಗ್ ಮೀಮ್ ಮತ್ತು ಟ್ರೋಲ್ ಪೇಜ್ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಅದೇ ಶೀರ್ಷಿಕೆಯಲ್ಲಿ ಸಿನಿಮಾ ತಯಾರಾಗಿದ್ದು, ಜನವರಿ 30ರಂದು ಬಿಡುಗಡೆ ಆಗುತ್ತಿದೆ. ಇದು ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಎಂದು ‘ಹೌದ್ದೋ ಹುಲಿಯ’ ಚಿತ್ರತಂಡ ಹೇಳಿದೆ.

ಪಕ್ಕಾ ಉತ್ತರ ಕರ್ನಾಟಕ ಭಾಷೆಯ ಸೊಗಡಿರುವ ಹೊಸ ಕಾಮಿಡಿ ಸಿನಿಮಾ ‘ಹೌದ್ದೋ ಹುಲಿಯ’ (Howdu Huliya) ಬಿಡುಗಡೆಗೆ ಸಜ್ಜಾಗಿದೆ. ‘ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಆ್ಯಂಡ್ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಜನವರಿ 30ರಂದು ಈ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಏನೆಂದರೆ, ಒಂದು ಪ್ರಯೋಗಕ್ಕೆ ಚಿತ್ರತಂಡ ಮುಂದಾಗಿದೆ. ಏಕಕಾಲದಲ್ಲಿ ಚಿತ್ರಮಂದಿರ ಹಾಗೂ ‘ಟಾಕೀಸ್’ ಒಟಿಟಿ (OTT) ಮೂಲಕ ಈ ಚಿತ್ರ ಬಿಡುಗಡೆ ಆಗಲಿದೆ. ‘ಹೌದ್ದೋ ಹುಲಿಯ’ ಸಿನಿಮಾದಲ್ಲಿ ವೈಜನಾಥ್ ಬಿರಾದರ್ (Vaijanath Biradar) ಅವರು ನಟಿಸಿದ್ದಾರೆ.
‘ಹೌದ್ದೋ ಹುಲಿಯ’ ಚಿತ್ರವನ್ನು ಕೆ. ರತ್ನಾಕರ ಕಾಮತ್ ಹಾಗೂ ಗಣೇಶ್ ಆರ್. ಕಾಮತ್ ಅವರು ನಿರ್ಮಾಣ ಮಾಡಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಜಿ.ಜಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ‘ದಸ್ಕತ್’ ಸಿನಿಮಾ ನಿರ್ದೇಶಿಸಿದ ಯುವ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಅವರು ಈಗ ‘ಹೌದ್ದೋ ಹುಲಿಯ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಸಿನಿಮಾ ಥೀಮ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ‘ಗ್ರಾಮೀಣ ಬದುಕಿನ ಸೊಗಡು, ಹಾಸ್ಯ, ಎಮೋಷನ್ ಮತ್ತು ಸಮಾಜದ ನೈಜ ಮುಖವನ್ನು ಒಳಗೊಂಡ ಕಥಾವಸ್ತುವನ್ನು ಹೊಂದಿರುವ ಚಿತ್ರ ಇದು. ಸಂಪೂರ್ಣ ಜವಾರಿ ಭಾಷೆಯಲ್ಲಿ ಮೂಡಿ ಬಂದಿದ್ದು ಯುವ ಹಾಗೂ ಅನುಭವಿ ಕಲಾವಿದರನ್ನ ಒಳಗೊಂಡಿದೆ’ ಎಂದು ಚಿತ್ರಂಡ ಹೇಳಿದೆ.
ವೈಜನಾಥ್ ಬಿರಾದರ್ ಅವರ ಜೊತೆಗೆ ಮಿಮಿಕ್ರಿ ಗೋಪಿ, ಪ್ರಿಯಾ ಸವದಿ, ಮಲ್ಯ ಬಾಗಲಕೋಟೆ, ಸೂರಜ್, ಸಂತೋಷ್ ರೋಣ, ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ, ಸದಾನಂದ, ಉಮೇಶ್ ಕಿನ್ನಾಳ್ ದಾನಪ್ಪ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದೆ. ಈ ಕಥೆ ಎಲ್ಲ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿದೆ ಎಂದಿದೆ ‘ಹೌದ್ದೋ ಹುಲಿಯ’ ಚಿತ್ರತಂಡ.
ಇದನ್ನೂ ಓದಿ: ಅವತ್ತು ಗಾಂಧಿ ನಗರದಲ್ಲಿ ಅವಮಾನ, ಇಂದು ಕಟೌಟ್: ಇಳಿ ವಯಸ್ಸಿನಲ್ಲಿ ಕಟೌಟ್ ಕಂಡ ನಟ ಬಿರಾದರ್ ಖುಷಿಗೆ ಪಾರವಿಲ್ಲ
ಈ ಸಿನಿಮಾಗೆ ಸಂತೋಷ್ ಗುಂಪಲಾಜೆ ಹಾಗೂ ದೀಕ್ಷಿತ್ ಧರ್ಮಸ್ಥಳ ಅವರು ಛಾಯಗ್ರಹಣ ಮಾಡಿದ್ದಾರೆ. ಕಿಶೋರ್ ಶೆಟ್ಟಿ, ಸಮರ್ಥನ್ ರಾವ್ ಅವರು ಸಂಗೀತ ನೀಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಡಿ. ಗೌಡ ಅವರು ಕೆಲಸ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಸ್ಮಿತೇಶ್ ಕಾರ್ಯ ನಿರ್ವಹಿಸಿದ್ದಾರೆ. ಚಿದಾನಂದ ಪೈ, ನಿಶಿತ್ ಶೆಟ್ಟಿ, ಮನೋಜ್ ಆನಂದ್, ನೀರಜ್ ಕುಂಜರ್ಪ ಹಾಗೂ ಅನೂಪ್ ಭಟ್ ಕೂಡ ತಂಡದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




