ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ತಂಡದಿಂದ ಪ್ರತಿ ದಿನವೂ ಒಂದಿಲ್ಲೊಂದು ಅಪ್ಡೇಟ್ ಸಿಗುತ್ತಿದೆ. ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ‘ವಿಕ್ರಾಂತ್ ರೋಣ’ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳು ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಹಾಡುಗಳು (Vikrant Rona Songs) ಗಮನ ಸೆಳೆದಿವೆ. ಈಗ ಇನ್ನೊಂದು ಹಾಡಿನ ಮೂಲಕ ಸದ್ದು ಮಾಡಲು ತಯಾರಿ ನಡೆದಿದೆ. ‘ಹೇ ಫಕೀರಾ..’ ಎಂಬ ಮೂರನೇ ಸಾಂಗ್ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಆ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ಅನೂಪ್ ಭಂಡಾರಿ ಅವರು ಬಹಳ ಕಾಳಜಿಯಿಂದ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಕಲ್ಪನೆಯ ಲೋಕವನ್ನು ತೆರೆಗೆ ತರಲು ನಿರ್ಮಾಪಕ ಜಾಕ್ ಮಂಜು ಹಣ ಹೂಡಿದ್ದಾರೆ. ಪ್ರಬಲವಾದ ತಂತ್ರಜ್ಞರ ತಂಡ ಈ ಚಿತ್ರಕ್ಕಾಗಿ ಶ್ರಮಿಸಿದೆ. ಅದರಲ್ಲೂ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ರಾರಾ ರಕ್ಕಮ್ಮ..’ ಹಾಗೂ ‘ರಾಜಕುಮಾರಿ…’ ಹಾಡುಗಳು ಜನಮನ ಗೆದ್ದಿವೆ. ಈಗ ಮೂರನೇ ಗೀತೆ ಹೊರಬರುತ್ತಿದೆ.
Another track from #VikrantRona.@nirupbhandari as #SanjeevGambhira #Sanju | #HeyFakira lyric video on July 12 | 5:02 PM #VRonJuly28 @anupsbhandari @JackManjunath @AJANEESHB #VikrantRona pic.twitter.com/w5R3UHdRG3
— Kichcha Sudeepa (@KicchaSudeep) July 10, 2022
ಜುಲೈ 12ರಂದು ಸಂಜೆ 5 ಗಂಟೆಗೆ ‘ಹೇ ಫಕೀರಾ..’ ಹಾಡು ರಿಲೀಸ್ ಆಗಲಿದೆ. ಈ ಗೀತೆಯಲ್ಲಿ ನಟ ನಿರೂಪ್ ಭಂಡಾರಿ ಹೈಲೈಟ್ ಆಗಲಿದ್ದಾರೆ ಎಂಬುದಕ್ಕೆ ಪೋಸ್ಟರ್ನಲ್ಲಿ ಸಾಕ್ಷಿ ಸಿಕ್ಕಿದೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ಸುಳಿವು ಸಿಗಬಹುದು ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ಇನ್ನುಳಿದ ಹಾಡುಗಳನ್ನು ನೋಡಲು ಕೂಡ ಅಭಿಮಾನಿಗಳು ಕಾದಿದ್ದಾರೆ. ಜುಲೈ 28ರಂದು ‘ವಿಕ್ರಾಂತ್ ರೋಣ’ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲೂ ಕೂಡ ಚಿತ್ರ ರಿಲೀಸ್ ಆಗಲಿದೆ.
‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್, ನೀತಾ ಅಶೋಕ್ ಮುಂತಾದವರು ಕೂಡ ನಟಿಸಿದ್ದಾರೆ. ಅದ್ದೂರಿ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ. ಹಲವು ರಾಜ್ಯಗಳಿಗೆ ತೆರಳಿ ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಮೂಡಿಬಂದಿರುವುದು ವಿಶೇಷ. ಹಾಗಾಗಿ ನಿರೀಕ್ಷೆ ಜೋರಾಗಿದೆ.