ರಾಜಕೀಯಕ್ಕೆ ಬರ್ತಾರ ನಿರ್ದೇಶಕ ಆರ್ ಚಂದ್ರು: ಉತ್ತರಿಸಿದ್ದು ಹೀಗೆ
R Chandru: ನಿರ್ದೇಶಕರಾಗಿ ಜನಪ್ರಿಯರಾಗಿರುವ ಆರ್ ಚಂದ್ರು ಇಂದು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಚಂದ್ರು ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.
ಇತ್ತೀಚೆಗಷ್ಟೆ ಅದ್ಧೂರಿಯಾಗಿ ನಿರ್ಮಾಣ ಸಂಸ್ಥೆ ಆರಂಭಿಸಿ ಒಂದೇ ಬಾರಿಗೆ ಐದು ಸಿನಿಮಾ ಘೋಷಣೆ ಮಾಡಿರುವ ಆರ್ ಚಂದ್ರು (R Chandru) ಇಂದು (ಫೆಬ್ರವರಿ 7) ಕ್ಕೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಜನಪ್ರಿಯ ನಿರ್ದೇಶಕರಾಗಿ ಹೆಸರು ಮಾಡಿರುವ ಆರ್ ಚಂದ್ರುಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಸಿನಿಮಾರಂಗದವರು ರಾಜಕೀಯಕ್ಕೆ ಬರುವುದು ಸಾಮಾನ್ಯ ಎಂಬಂತಾಗಿದೆ ಆರ್ ಚಂದ್ರು ಅವರಿಗೂ ಅಂಥಹದ್ದೊಂದು ಆಲೋಚನೆ ಇದೆಯೇ? ಅವರೇ ಉತ್ತರ ನೀಡಿದ್ದಾರೆ.
‘ರಾಜಕೀಯದಲ್ಲಿ ಸಾಕಷ್ಟು ಮಂದಿ ನನಗೆ ಗೆಳೆಯರಿದ್ದಾರೆ. ನಾನು ಅಂದುಕೊಳ್ಳದವರು ಸಹ ಶಾಸಕರಾಗಿದ್ದಾರೆ ಅದು ಅವರ ಯೋಗ. ದೇವರು ಇಲ್ಲಿಯವರೆಗೆ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ಚಿತ್ರರಂಗದಲ್ಲಿ ಕಲಾಸೇವೆ ಮಾಡು ಎಂದು ಬಿಟ್ಟಿದ್ದಾರೆ, ಅಂತೆಯೇ ನಾನು ಸೇವೆ ಮಾಡುತ್ತಿದ್ದೇನೆ. ಮುಂದೊಂದು ದಿನ ದೇವರು ಇಲ್ಲ ನೀನು ಇನ್ನಷ್ಟು ಸೇವೆ ಮಾಡುವುದು ಬಾಕಿ ಇದೆ ಎಂದು ರಾಜಕೀಯಕ್ಕೆ ನನ್ನನ್ನು ಕರೆದುಕೊಂಡು ಹೋದರೆ ಹೋಗುತ್ತೇನೆ. ಅಲ್ಲಿಯೂ ಕೆಲಸ ಮಾಡುತ್ತೇನೆ. ಸದ್ಯಕ್ಕಂತೂ ರಾಜಕೀಯದ ಯೋಚನೆ ಇಲ್ಲ. ಮುಂದೆ ಅವಕಾಶ ಬಂದರೆ ನೋಡೋಣ’ ಎಂದಿದ್ದಾರೆ.
ಇದನ್ನೂ ಓದಿ:ಸರ್ಕಾರಕ್ಕೆ 20 ಕೋಟಿ ತೆರಿಗೆ ಕಟ್ಟಿದ್ದೀನಿ: ಬಹಿರಂಗವಾಗಿ ಹೇಳಿದ ಆರ್ ಚಂದ್ರು
ಆರ್ ಚಂದ್ರು ಅವರು ಮೂಲತಃ ಶಿಡ್ಲಘಟ್ಟ ಬಳಿಯ ಕೇಶವಾರದವರು. ಕೆಲ ವರ್ಷಗಳ ಹಿಂದೆ ಶಿಡ್ಲಘಟ್ಟದಲ್ಲಿ ಆರ್ ಚಂದ್ರು ನೇತೃತ್ವದಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆಯೊಂದು ನಡೆದಿತ್ತು. ಆಗಲೇ ಆರ್ ಚಂದ್ರು ಶಿಡ್ಲಘಟ್ಟದಲ್ಲಿ ರಾಜಕೀಯ ನೆಲೆಗಾಗಿ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಹಬ್ಬಿತ್ತು. ಬಳಿಕ ಕಳೆದ ವರ್ಷ ಅವರ ನಿರ್ದೇಶನದ ‘ಕಬ್ಜ’ ಸಿನಿಮಾದ ಅದ್ಧೂರಿ ಕಾರ್ಯಕ್ರಮವನ್ನು ಅವರು ಶಿಡ್ಲಘಟ್ಟದಲ್ಲಿಯೇ ಮಾಡಿದರು. ಕಾರ್ಯಕ್ರಮಕ್ಕೆ ಸ್ಥಳೀಯ ರಾಜಕೀಯ ಮುಖಂಡರನ್ನು ಆಹ್ವಾನಿಸಿದ್ದರು. ಆಗಲೂ ಸಹ ಆರ್.ಚಂದ್ರು ರಾಜಕೀಯ ತಯಾರಿಯ ಗುಸು-ಗುಸು ಹರಡಿತ್ತು.
ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಹೊಸಕೋಟೆ ಭಾಗದ ಪ್ರಮುಖ ರಾಜಕೀಯ ಮುಖಂಡರುಗಳೊಡನೆ ಉತ್ತಮ ಬಂಧವನ್ನು ಆರ್ ಚಂದ್ರು ಹೊಂದಿದ್ದಾರೆ. ಜೊತೆಗೆ ಕೆಲ ಪಕ್ಷದ ಪ್ರಮುಖ ರಾಜಕೀಯ ಮುಖಂಡರೊಂದಿಗೂ ಉತ್ತಮ ನಂಟನ್ನು ಚಂದ್ರು ಹೊಂದಿದ್ದಾರೆ. ಇತ್ತೀಚೆಗೆ ನಡೆದ ತಮ್ಮ ನಿರ್ಮಾಣ ಸಂಸ್ಥೆ ಅನಾವರಣಕ್ಕೂ ಸಹ ಚಂದ್ರು ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದರು. ಚಂದ್ರು ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಆದರೆ ಅವರು ಸಕ್ರಿಯ ರಾಜಕೀಯಕ್ಕೆ ಇಳಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ