ಕಮಲ್ ಹಾಸನ್ ಸಿನಿಮಾ ಬಿಡುಗಡೆ ಮಾಡಿದ್ರೆ ಚಿತ್ರಮಂದಿರಗಳಿಗೆ ಬೆಂಕಿ: ಕರವೇ ನಾರಾಯಣಗೌಡ ಎಚ್ಚರಿಕೆ
Kamal Haasan Movie: ಕಮಲ್ ಹಾಸನ್ ಕನ್ನಡದ ಉಗಮದ ಬಗ್ಗೆ ನೀಡಿರುವ ಹೇಳಿಕೆ ವಿವಾದ ಹುಟ್ಟಿಸಿದೆ. ಕನ್ನಡಪರ ಸಂಘಟನೆಗಳು ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದಿವೆ. ಒಂದೊಮ್ಮೆ ಚಿತ್ರ ಬಿಡುಗಡೆ ಮಾಡಿದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿವೆ.

ಕಮಲ್ ಹಾಸನ್ (Kamal Haasan), ಕನ್ನಡದ ಬಗ್ಗೆ ನೀಡಿರುವ ಹೇಳಿಕೆಗೆ ಕನ್ನಡಪರ ಸಂಘಟನೆಗಳು, ಫಿಲಂ ಚೇಂಬರ್ ಹಾಗೂ ಕೆಲ ಸಿನಿಮಾ ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಸಹ ಕೇಳಿ ಬಂದಿದೆ. ಇಂದು (ಮೇ 30) ಸುದ್ದಿಗೋಷ್ಠಿ ನಡೆಸಿದ ಕರವೇ ಅಧ್ಯಕ್ಷ ನಾರಾಯಣಗೌಡ, ಯಾವುದಾದರೂ ಚಿತ್ರಮಂದಿರಗಳು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದಲ್ಲಿ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಮಲ್ ಹಾಸನ್ ಅವರು ಕ್ಷಮೆ ಕೇಳದೇ ಇದ್ದರೆ ಅವರ ಯಾವ ಸಿನಿಮಾಗಳೂ ಸಹ ಕರ್ನಾಟಕದಲ್ಲಿ ಬಿಡುಗಡೆ ಆಗಲು ಬಿಡುವುದಿಲ್ಲ. ಕನ್ನಡದ ಭಗ್ಗೆ ಯಾರೇ ಮಾತಾಡಿದರೂ ಕನ್ನಡ ರಕ್ಷಣಾ ವೇದಿಕೆ ಮಾತ್ರ ಬಿಡಲ್ಲ. ನಮ್ಮ ಮೇಲೆ ಇನ್ನೂ ಕೇಸ್ ಹಾಕಿದರೂ ಸಮಸ್ಯೆ ಇಲ್ಲ. ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ದರೆ ಅವರ ಸಿನಿಮಾ ಬಿಡುಗಡೆ ಆಗಲ್ಲ. ಐದನೇ ತಾರೀಖು ಕಮಲ್ ಹಾಸನ್ ಸಿನಿಮಾ ಇಲ್ಲಿ ರಿಲೀಸ್ ಮಾಡಲು ಬಿಡಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಯಾಕೋ ಕನ್ನಡದ ಭಗ್ಗೆ ಮಾತುಗಳು ಜಾಸ್ತಿಯಾಗಿದೆ. ಆಗಾಗ ತಮಿಳುನಾಡಿಗೂ ನಮಗೂ ಕಾವೇರಿ ವಿಚಾರಕ್ಕೆ ಸಂಘರ್ಷ ನಡೀತಾ ಇತ್ತು. ಉತ್ತರದ ಹಿಂದಿ ಬಾಷೆಯ ಒತ್ತಡ ಕನ್ನಡದ ಮೇಲೆ ಬೀಳುತ್ತಿದೆ. ಕಮಲ್ ಹಾಸನ್ ತಮಿಳಿನ ದೊಡ್ಡ ಮಹಾ ನಟ. ಅವ್ರ ಮೇಲೆ ದೊಡ್ಡ ಅಭಿಮಾನ ನಮಗೂ ಇತ್ತು. ಆದರೆ ಮೊನ್ನೆ ಸಿನಿಮಾ ಕಾರ್ಯಾಕ್ರಮದಲ್ಲಿ ಕನ್ನಡ ವಿರೋಧಿ ಹೇಳಿಕೆ ಕೊಟ್ಟಿದ್ದಾರೆ. ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದ್ದಾರೊ ಗೊತ್ತಿಲ್ಲ. ಯಾವ ಶಾಸನಗಳನ್ನು ನೋಡದೆ ತಮಿಳರನ್ನ ಓಲೈಸುವ ಹೇಳಿಕೆ ಕೊಟ್ಟಿದ್ದಾರೆ. ಅವರ ಭಾಷೆ ಭಗ್ಗೆ ಅವರು ಏನು ಬೇಕಾದರೂ ಮಾತನಾಡಲಿ, ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಬೇರೆ ಭಾಷೆ ಮಾತನಾಡುವಾಗ ಕನಿಷ್ಟ ಜ್ಞಾನ ಇರ್ಬೇಕಿತ್ತು. ಅವರು ಆ ಮಾತನ್ನ ಹೇಳುವಾಗ ಅಲ್ಲಿ ಶಿವರಾಜ್ ಕುಮಾರ್ ಇದ್ದರು. ಅವರು ಅಲ್ಲಿಯೆ ಇದಕ್ಕೆ ವಿರೋಧಿಸಬೇಕಿತ್ತು. ಕನ್ನಡ ತಮಿಳಿನಿಂದ ಬಂದಿದ್ದು ಅಲ್ಲ,ಅದಕ್ಕೆ ಸ್ವಂತ ಲಿಪಿ ಇದೆ ಎಂದು ಹೇಳಬೇಕಿತ್ತು’ ಎಂದಿದ್ದಾರೆ.
ಇದನ್ನೂ ಓದಿ:ತಪ್ಪು ಮಾಡಿಲ್ಲ, ಬೆದರಿಕೆಗೆ ಹೆದರಲ್ಲ, ಕ್ಷಮೆ ಕೇಳಲ್ಲ: ಪಟ್ಟು ಬಿಡದ ಕಮಲ್ ಹಾಸನ್
ಚಿತ್ರರಂಗದವರ ಬಗ್ಗೆಯೂ ಮಾತನಾಡಿದ ನಾರಾಯಣಗೌಡ, ‘ಕನ್ನಡ ಅಂತ ಬಂದಾಗ ಬೇರೆ ನಟರೂ ಮುಂದೆ ಬರಬೇಕು, ರಣಹೇಡಿಗಳ ರೀತಿ ನೀವು ವರ್ತಿಸೋದು ಬಿಡಿ ಎಂದು ಕಿಡಿ, ಬೆಂಗಳೂರಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿ, ನಿಮ್ಮ ಸಿನಿಮಾಗಳು ಸಹ ಕರ್ನಾಟಕದಲ್ಲಿ ರಿಲೀಸ್ ಆಗುತ್ತೆ, ನಾವ್ಯಾಕೆ ನಿಮ್ಮ ಸಿನಿಮಾ ದುಡ್ಡು ಕೊಟ್ಟು ನೋಡಬೇಕು?, ಕನ್ನಡ ವಿಚಾರದಲ್ಲಿ ಹಲವು ನಟರು ಶೂನ್ಯ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಹಲ್ಲಿಲ್ಲದ ಹಾವು’ ಎಂದಿದ್ದಾರೆ.
ಸಿನಿಮಾ ನಿಷೇಧ ಮಾಡುವುದು ಅತಿಯಾಯ್ತು ಎಂಬ ರಮ್ಯಾ ಮಾತಿಗೆ ಪ್ರತಿಕ್ರಿಯೆ ನೀಡಿರುವ ನಾರಾಯಣಗೌಡ, ‘ಸಿನಿಮಾ ನಟ-ನಟಿಯರು ವಿಶ್ವಮಾನವರು, ಭಾಷೆ ವಿಚಾರಕ್ಕೆ ಮಾತಾಡೋರು ಸಿನಿಮಾ ರಂಗದಲ್ಲಿಲ್ಲ, ರಮ್ಯಾ ಅವರೇ ನೀವು ಉಪದೇಶ ಮಾಡೋದನ್ನ ಬಿಡಿ, ಇಲ್ಲಿ ಕನ್ನಡ ಭಾಷೆಗಿಂತ ದೊಡ್ಡವರು ಯಾರೂ ಇಲ್ಲ, ನೀವು ಬುದ್ಧಿ ಹೇಳೋದಿದ್ರೆ ಕಮಲ್ ಹಾಸನ್ಗೆ ಹೇಳಿ, ಕ್ಷಮಿಸಿಬಿಡಿ ಎಂದು ಕನ್ನಡಿಗರಿಗೆ ಹೇಳಲು ಬರಬೇಡಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




