ಯಶ್ ಬೆಂಗಾವಲು ಕಾರು ಹರಿದು ಗಾಯ, ಯುವಕನಿಂದ ದೂರು ದಾಖಲು

Yash: ಬಳ್ಳಾರಿಯ ಅಮೃತೇಶ್ವರ ದೇವಾಲಯ ಉದ್ಘಾಟನೆಗೆ ಯಶ್ ಆಗಮಿಸಿದ್ದಾಗ ಆದ ಅವಘಡದಲ್ಲಿ ಗಾಯಗೊಂಡಿದ್ದ ಯುವಕ ಉಮೇಶ್ ಇದೀಗ ಪೊಲೀಸ್ ದೂರು ದಾಖಲಿಸಿದ್ದಾರೆ.

ಯಶ್ ಬೆಂಗಾವಲು ಕಾರು ಹರಿದು ಗಾಯ, ಯುವಕನಿಂದ ದೂರು ದಾಖಲು
Follow us
ಮಂಜುನಾಥ ಸಿ.
|

Updated on: Mar 02, 2024 | 9:13 PM

ಕೆಲವು ದಿನಗಳ ಹಿಂದಷ್ಟೆ ಬಳ್ಳಾರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬಂದಿದ್ದ ಯಶ್​ರ (Yash) ಹಿಂಬಾಲಕರ ಕಾರು ಹರಿದು ಯುವಕನೊಬ್ಬ ಗಾಯಗೊಂಡಿದ್ದ. ಇದೀಗ ಆ ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕೆ ಒತ್ತಾಯಿಸಿದ್ದಾನೆ. ಫೆಬ್ರವರಿ 29 ರಂದು ಅಮೃತೇಶ್ವರ ದೇವಾಲಯ ಉದ್ಘಾಟನೆಗೆ ನಟ ಯಶ್ ಆಗಮಿಸಿದ್ದರು. ಈ ವೇಳೆ ಯಶ್​ರ ಹಿಂಬಾಲಕರ ಕಾರು ಸಿರಗುಪ್ಪ ತಾಲೂಕಿನ‌ ಮುದ್ದೇನೂರು ಗ್ರಾಮದ ಯುವಕ ಉಮೇಶ್ ಎಂಬುವರ ಕಾಲಿನ ಮೇಲೆ ಹರಿದಿತ್ತು. ಇದರಿಂದ ಯುವಕ ಗಾಯಗೊಂಡಿದ್ದ.

ಇದೀಗ ಯುವಕ ಉಮೇಶ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಕಾಲ ಮೇಲೆ ಹರಿದ ಕಾರನ್ನು ಚಲಾಯಿಸುತ್ತಿದ್ದ ಚಾಲಕನ ಪತ್ತೆಗೆ ಒತ್ತಾಯಿಸಿದ್ದಾರೆ. ಕಾರಿನ ಚಾಲಕನಿಗೆ ಕಾನೂನು ರೀತ್ಯ ಶಿಕ್ಷೆ ಆಗಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ದಾರುಣ ಸಾವನ್ನಪ್ಪಿದ ಯಶ್ ಅಭಿಮಾನಿಗಳ ಕುಟುಂಬಕ್ಕೆ ಭೂ ಒಡೆತನ ಯೋಜನೆ ಅಡಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದೇನೆ: ಹೆಚ್ ಕೆ ಪಾಟೀಲ್

ಫೆಬ್ರವರಿ 29 ರಂದು ಅಮೃತೇಶ್ವರ ದೇವಸ್ಥಾನ ಉದ್ಘಾಟನೆಗೆ ಯಶ್ ಬಳ್ಳಾರಿಗೆ ಆಗಮಿಸಿದ್ದರು. ಯಶ್​ರನ್ನು ನೋಡಲು ಸಾವಿರಾರು ಮಂದಿ ಜನ ಸ್ಥಳದಲ್ಲಿ ಸೇರಿದ್ದರು. ಪ್ರಾಣ ಪ್ರತಿಷ್ಠಾನಪನೆ ಕಾರ್ಯಕ್ರಮ ಮುಗಿಸಿ ಯಶ್ ವಾಪಾಸ್ಸಾಗುವ ವೇಳೆ ಸ್ಥಳದಲ್ಲಿ ನೂಕು ನುಗ್ಗಾಟ ಉಂಟಾಯಿತು. ಜನ ಸಂದಣಿಯ ನೂಕಾಟದಲ್ಲಿ ಯಶ್​ರ ಹಿಂಬಾಲಕ ಕಾರು ಉಮೇಶ್​ರ ಕಾಲಿನ ಮೇಲೆ ಹರಿದಿತ್ತು. ಇದರ ಪರಿಣಾಮ ಉಮೇಶ್ ಗಾಯಗೊಂಡಿದ್ದರು. ಕೂಡಲೇ ಆ ಯುವಕನನ್ನು ಬಳ್ಳಾರಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಯುವಕ ಚೇತರಿಸಿಕೊಂಡಿದ್ದು, ತಮಗೆ ಗಾಯ ಮಾಡಿದ ಕಾರು ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ಯಶ್​ರ ಹುಟ್ಟುಹಬ್ಬದ ವೇಳೆ ಯಶ್​ರ ಕಟೌಟ್ ಕಟ್ಟಲು ಹೋಗಿ ಒಂದೇ ಗ್ರಾಮದ ಮೂವರು ಯಶ್ ಅಭಿಮಾನಿಗಳು ಮೃತಪಟ್ಟಿದ್ದರು. ನಿಧನ ಹೊಂದಿದ ಅಭಿಮಾನಿಗಳ ಮನೆಗೆ ಯಶ್ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಬಳಿಕ ಅದೇ ದಿನ ಯಶ್​ರನ್ನು ನೋಡಲು ಬರುವ ಧಾವಂತದಲ್ಲಿ ಬೆಂಗಾವಲು ವಾಹನಕ್ಕೆ ಢಿಕ್ಕಿಯಾಗಿ ಯಶ್​ರ ಮತ್ತೊಬ್ಬ ಅಭಿಮಾನಿ ಮೃತಪಟ್ಟಿದ್ದ. ಇದೆಲ್ಲದರ ನೆನಪು ಹಸಿಯಾಗಿರುವಂತೆಯೇ ಇತ್ತೀಚೆಗೆ ಬಳ್ಳಾರಿಯಲ್ಲಿ ಯಶ್​ ಅಭಿಮಾನಿಯ ಮೇಲೆ ಅವರ ಹಿಂಬಾಲಕರ ಕಾರು ಹರಿದು ತೀವ್ರ ಗಾಯವಾಗಿತ್ತು. ಪುಣ್ಯಕ್ಕೆ ಅಭಿಮಾನಿಯ ಜೀವಕ್ಕೆ ಏನೂ ಆಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ