AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವ್ಯಾಕ್ಸಿನ್​ ಬಂದಮೇಲೂ ಲಾಕ್​ಡೌನ್​ ಮಾಡುವುದು ವಿಪರ್ಯಾಸ’: ಯುವರತ್ನ ನಿರ್ದೇಶಕ ಸಂತೋಷ್ ಆನಂದ್​ರಾಮ್​!

ಲಾಕ್​ಡೌನ್​ ಸಡಿಲಿಕೆ ಬಳಿಕ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನಗಳು ಆರಂಭ ಆಗಿದ್ದವು. ಆದರೆ ಈಗ ಕೊರೊನಾ ಎರಡನೇ ಅಲೆ ಭೀತಿಯಿಂದ ಮತ್ತೆ ಶೇ.50ಕ್ಕೆ ಇಳಿಸಬೇಕು ಎಂಬ ಬಿಬಿಎಂಪಿ ಪ್ರಸ್ತಾವನೆಯನ್ನು ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್​ ರಾಮ್​ ವಿರೋಧಿಸಿದ್ದಾರೆ.

‘ವ್ಯಾಕ್ಸಿನ್​ ಬಂದಮೇಲೂ ಲಾಕ್​ಡೌನ್​ ಮಾಡುವುದು ವಿಪರ್ಯಾಸ’: ಯುವರತ್ನ ನಿರ್ದೇಶಕ ಸಂತೋಷ್ ಆನಂದ್​ರಾಮ್​!
ಸಂತೋಷ್​ ಆನಂದ್​ರಾಮ್
ಮದನ್​ ಕುಮಾರ್​
| Edited By: |

Updated on: Mar 19, 2021 | 5:36 PM

Share

‘ಚಿತ್ರರಂಗವನ್ನು ನಂಬಿಕೊಂಡು ತುಂಬ ಜನ ಇದ್ದಾರೆ. ಒಂದು ವರ್ಷದಿಂದ ಜನರು ಲಾಕ್​ಡೌನ್​ ಎದುರಿಸಿದ್ದಾರೆ. ಮತ್ತೆ ಅವರನ್ನು ಹೆದರಿಸುವಂತಹ ಕೆಲಸ ಆಗಬಾರದು. ಜನರು ಈಗಾಗಲೇ ಜಾಗೃತರಾಗಿದ್ದಾರೆ. ಅವರಿಗೆ ಅವರವರ ಸುರಕ್ಷತೆ ಬಗ್ಗೆ ಗೊತ್ತು. ಎಲ್ಲರಿಗೂ ಅರಿವು ಇದೆ. ಕಳೆದ ವರ್ಷ ಕೊರೊನಾ ಹೊಸದಾಗಿತ್ತು. ಈಗ ವ್ಯಾಕ್ಸಿನ್ ಕೂಡ ಇದೆ. ವಯಸ್ಕರೆಲ್ಲ ಹಾಕಿಸಿಕೊಳ್ಳುತ್ತಿದ್ದಾರೆ’ ಎಂದಿರುವ ಸಂತೋಷ್​ ಆನಂದ್​ ರಾಮ್​ ಅವರು ಶೇ.50ರಷ್ಟು ಆಸನ ಮಿತಿ ಹೇರಬಾರದು ಎಂದು ಹೇಳಿದ್ದಾರೆ.

‘ಶಾಲೆ-ಕಾಲೇಜು ಓಪನ್​ ಆಗಿದೆ. ​ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ನಮ್ಮ ಜಾಗೃತಿ ನಮಗೆ ಬಂದಿರುವಾಗ ಶೇ.50 ಮಿತಿ ಹೇರುವುದು ಸಮಂಜಸ ಅಲ್ಲ ಎನ್ನುವುದು ನನ್ನ ಭಾವನೆ. ಸಿಂಗಲ್​ ಸ್ಕ್ರೀನ್​ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಈಗ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಎಲ್ಲರನ್ನೂ ಮತ್ತೆ ಒಂದು ವರ್ಷ ಹಿಂದಕ್ಕೆ ಕರೆದುಕೊಂಡು ಹೋಗೋದು ಬೇಡ’ ಎಂದಿದ್ದಾರೆ ಸಂತೋಷ್​ ಆನಂದ್​ರಾಮ್​.

‘ಲಾಕ್​ಡೌನ್​ ಮುಂದುವರಿದರೆ ಕೊರೊನಾಕ್ಕಿಂತಲೂ ಬದುಕು ದೊಡ್ಡ ಸಮಸ್ಯೆ ಆಗಿಬಿಡುತ್ತದೆ. ವ್ಯಾಕ್ಸಿನ್​ ಬಂದ ನಂತರವೂ ಲಾಕ್​ಡೌನ್​ ಮಾಡುವುದು ವಿಪರ್ಯಾಸ. ಮಹಾರಾಷ್ಟ್ರದಲ್ಲಿ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಬೇರೆ ಎಲ್ಲಾ ಕಡೆ ನಿಯಂತ್ರಣದಲ್ಲಿದೆ. ಈ ಸಂದರ್ಭದಲ್ಲಿ ನಿರ್ಬಂಧ ಹೇರಿದರೆ ಚಿತ್ರೋದ್ಯಮಕ್ಕೆ ತೊಂದರೆ ಕೊಟ್ಟಂತೆ ಆಗುತ್ತದೆ. ಚಿತ್ರರಂಗದ ಎಲ್ಲರೂ ಮತ್ತು ಪ್ರೇಕ್ಷಕರು ಕೂಡ ಅದನ್ನೇ ಹೇಳುತ್ತಿದ್ದಾರೆ’ ಎಂಬುದು ಸಂತೋಷ್​ ಆನಂದ್​ರಾಮ್​ ಅಭಿಪ್ರಾಯ.

‘ಎಲ್ಲಿ ಜಾಸ್ತಿ ಪ್ರಕರಣಗಳು ಇವೆಯೋ ಆ ಗಡಿಯಲ್ಲಿ ನಿಯಂತ್ರಣ ಹಾಕಬೇಕು. ರಾಜ್ಯದ ಒಳಗೆ ಮತ್ತೆ ನಿರ್ಬಂಧ ಹೇರಿದರೆ ಬದುಕುವುದೇ ಕಷ್ಟ ಆಗುತ್ತದೆ. ಜನರನ್ನು ಇನ್ನೂ ಕುಗ್ಗಿಸುತ್ತದೆ. ಯುವರತ್ನ ಮಾತ್ರವಲ್ಲದೇ ಎಲ್ಲ ಸಿನಿಮಾಗಳಿಗೂ ತೊಂದರೆ ಆಗುತ್ತದೆ. ಈಗಾಗಲೇ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರಗಳಿಗೂ ಸಮಸ್ಯೆ ಆಗುತ್ತದೆ. ನಾವು ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತೇನೆ. ನಾವು ಯಾವುದೇ ಸಮಾವೇಷ ಮಾಡುತ್ತಿಲ್ಲ. ಸರ್ಕಾರ ಚಿತ್ರರಂಗದ ಪರವಾಗಿ ನಿಂತುಕೊಳ್ಳಬೇಕು’ ಎಂದು ಸಂತೋಷ್​ ಆನಂದ್​ರಾಮ್​ ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪುನೀತ್​ ಸಿಂಪಲ್ ಬರ್ತ್​​ಡೇ; ಫೋಟೋ ಕೇಳಿದ ಅಭಿಮಾನಿಗಳಿಗೆ ಅಪ್ಪು ಕಂಡೀಷನ್