ಕೊರೊನಾ 2ನೇ ಅಲೆ: ಹೌಸ್ಫುಲ್ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್? ಬಿಬಿಎಂಪಿ ಪ್ರಸ್ತಾವನೆಗೆ ಪುನೀತ್ ವಿರೋಧ
ಪುನೀತ್ ರಾಜ್ಕುಮಾರ್ ಅವರ ‘ಯುವರತ್ನ’ ಸಿನಿಮಾ ಏ.1ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಸಂದರ್ಭಕ್ಕೆ ಹೌಸ್ಫುಲ್ ಪ್ರದರ್ಶನಕ್ಕೆ ಬ್ರೇಕ್ ಹಾಕಿದರೆ ಚಿತ್ರತಂಡಕ್ಕೆ ಭಾರಿ ನಷ್ಟ ಆಗಲಿದೆ.
ದೇಶಾದ್ಯಂತ ಕೊರೊನಾ ವೈರಸ್ನ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಆಗಬಹುದೇನೂ ಎಂಬ ಆತಂಕ ಮನೆ ಮಾಡಿದೆ. ಅದರಲ್ಲೂ ಚಿತ್ರರಂಗಕ್ಕೆ ಹೆಚ್ಚು ನಷ್ಟವಾಗುವ ಸಾಧ್ಯತೆ ಎದುರಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಬ್ರೇಕ್ ಹಾಕಬೇಕು ಎಂದು ಬಿಬಿಎಂಪಿ ಆಲೋಚಿಸುತ್ತಿದೆ. ಇದನ್ನು ಕನ್ನಡ ಚಿತ್ರರಂಗ ವಿರೋಧಿಸುತ್ತಿದೆ.
ಲಾಕ್ಡೌನ್ ಸಡಿಲಿಕೆಗೂ ಮುನ್ನ ಚಿತ್ರಮಂದಿಗಳು ಸಂಪೂರ್ಣ ಬಂದ್ ಆಗಿದ್ದವು. ಬಳಿಕ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಲಾಯಿತು. ಪೊಗರು ಚಿತ್ರದ ರಿಲೀಸ್ ಸಂದರ್ಭದಲ್ಲಿ ಹೌಸ್ಫುಲ್ ಪ್ರದರ್ಶನಕ್ಕೆ ಅನುಮತಿ ಸಿಕ್ಕಿತು. ಆದರೆ ಈಗ ಕೊರೊನಾ ವೈರಸ್ ಎರಡನೇ ಅಲೆ ಹಬ್ಬುತ್ತಿದೆ ಎಂಬ ಕಾರಣಕ್ಕೆ ಮತ್ತೆ ಚಿತ್ರಮಂದಿರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಆಸನಗಳ ಭರ್ತಿಗೆ ಅವಕಾಶ ನೀಡಬಾರದು ಎಂಬ ಪ್ರಸ್ತಾವನೆ ಕೇಳಿಬಂದಿದೆ. ಆದರೆ ಇದರಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಲಿದ್ದು, ಪುನೀತ್ ರಾಜ್ಕುಮಾರ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ‘ಯುವರತ್ನ’ ಸಿನಿಮಾ ಏ.1ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಹೌಸ್ಫುಲ್ ಪ್ರದರ್ಶನಕ್ಕೆ ಬ್ರೇಕ್ ಹಾಕಿದರೆ ಚಿತ್ರತಂಡಕ್ಕೆ ಭಾರಿ ನಷ್ಟ ಆಗಲಿದೆ. ಈ ಕುರಿತು ಪುನೀತ್ ಪ್ರತಿಕ್ರಿಯೆ ನೀಡಿದ್ದಾರೆ. ‘ದಯವಿಟ್ಟು 100 ಪರ್ಸೆಂಟ್ಗೆ ಅವಕಾಶ ನೀಡಬೇಕು. ನಮ್ಮ ಇಂಡಸ್ಟ್ರೀ ಮಾತ್ರವಲ್ಲ, ಇಡೀ ಆರ್ಥಿಕತೆ ಈಗತಾನೇ ಚೇತರಿಸಿಕೊಳ್ಳುತ್ತಿದೆ’ ಎಂದು ಪುನೀತ್ ಹೇಳಿದ್ದಾರೆ.
‘ನಮ್ಮ ಜೀವ, ಆರೋಗ್ಯ, ಕುಟುಂಬ ನಮಗೆ ಮುಖ್ಯ. ವ್ಯಾಪಾರ-ವ್ಯಾವಹಾರ ಎರಡನೆಯದ್ದು. ನನ್ನ ಪ್ರಕಾರ ಹೇಳಬೇಕೆಂದರೆ ಮದುವೆ, ಸಾರ್ವಜನಿಕ ಸಮಾರಂಭ, ಚುನಾವಣೆಗಳನ್ನು ಹಲವಾರು ತಿಂಗಳ ಹಿಂದೆಯೇ ಅವಾಯ್ಡ್ ಮಾಡಬೇಕಿತ್ತು. ಥಿಯೇಟರ್ಗೆ ಇದು ಬೇಕಾಗಿಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಚಿತ್ರಮಂದಿರದ ಶೌಚಾಯಲ ಕ್ಲೀನ್ ಆಗಿರಬೇಕು. ಅದು ತುಂಬ ಮುಖ್ಯ. ದಯವಿಟ್ಟು 100 ಪರ್ಸೆಂಟ್ ಮಾಡಬೇಕು. ಚಿತ್ರಮಂದಿರದಲ್ಲಿ ಎಲ್ಲವೂ ಜಾಗ್ರತೆಯಿಂದ ನಡೆಯುತ್ತಿದೆ’ ಎಂದು ಪುನೀತ್ ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪುನೀತ್ ಸಿಂಪಲ್ ಬರ್ತ್ಡೇ; ಫೋಟೋ ಕೇಳಿದ ಅಭಿಮಾನಿಗಳಿಗೆ ಅಪ್ಪು ಕಂಡೀಷನ್