ಸ್ಟಾರ್ ನಿರ್ದೇಶಕ ಶಂಕರ್ಗೆ ನೋ ಹೇಳಿದ ಸ್ಟಾರ್ ನಟರಿವರು
Shankar: ನಿರ್ದೇಶಕ ಶಂಕರ್ ನಿರ್ದೇಶಿಸಿ ರಾಮ್ ಚರಣ್ ನಟಿಸಿರುವ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದ ಶಂಕರ್, ತಾವು ತೆಲುಗಿನ ಯಾವ ಯಾವ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡಲು ಪ್ರಯತ್ನಿಸಿ ವಿಫಲನಾದೆ ಎಂದು ಹೇಳಿಕೊಂಡಿದ್ದಾರೆ.
ಭಾರತದ ಈಗಿನ ಸ್ಟಾರ್ ನಿರ್ದೇಶಕ ಯಾರೆಂದರೆ ಕೇಳುವ ಒಂದೇ ಹೆಸರು ರಾಜಮೌಳಿ. ಆದರೆ ಹದಿನೈದು, ಇಪ್ಪತ್ತು ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆಗ ಶಂಕರ್ ಭಾರತದ ಸ್ಟಾರ್ ನಿರ್ದೇಶಕ. ಅಸಾಧ್ಯ ಎನಿಸುವುದನ್ನು ತೆರೆಯ ಮೇಲೆ ತರುತ್ತಿದ್ದರು. ಅವರ ಹಾಡುಗಳು, ಮೇಕಿಂಗ್ ಭಾರಿ ಅದ್ಧೂರಿಯಾಗಿರುತ್ತಿದ್ದವು. ಶಂಕರ್ ಸಿನಿಮಾದ ಆಕ್ಷನ್ ದೃಶ್ಯಗಳನ್ನು ಹಾಲಿವುಡ್ ಸಿನಿಮಾಗಳಿಗೆ ಹೋಲಿಕೆ ಮಾಡಲಾಗುತ್ತಿತ್ತು. ಅವರ ಸಿನಿಮಾಗಳು ಆಗಲೇ ಬಾಲಿವುಡ್ ಸಿನಿಮಾಗಳನ್ನು ಹಿಂದೆ ಹಾಕಿದ್ದವು. ಆದರೆ ಇತ್ತೀಚೆ ಶಂಕರ್ ಅವರ ಹವಾ ತುಸು ಕಡಿಮೆ ಆಗಿದೆ. ಅಂದಹಾಗೆ ಶಂಕರ್ ಹಲವು ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದರಂತೆ ಈ ಬಗ್ಗೆ ಅವರೇ ಮಾತನಾಡಿದ್ದಾರೆ.
ರಜನೀಕಾಂತ್, ಕಮಲ್ ಹಾಸನ್, ವಿಜಯ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡಿರುವ ಶಂಕರ್ಗೆ ಮೆಗಾಸ್ಟಾರ್ ಚಿರಂಜೀವಿ ಅವರೊಟ್ಟಿಗೆ ತೆಲುಗಿನಲ್ಲಿ ಸಿನಿಮಾ ಮಾಡುವ ಆಸೆಯಿತ್ತಂತೆ. ಇದಕ್ಕಾಗಿ ಸಾಕಷ್ಟು ಬಾರಿ ಪ್ರಯತ್ನ ಮಾಡಿದ್ದರೂ ಅದು ಸಾಧ್ಯವಾಗಲಿಲ್ಲವಂತೆ. ಆದರೆ ಈಗ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ಜೊತೆ ಸಿನಿಮಾ ಮಾಡಿದ್ದಾರೆ. ಶಂಕರ್ ಹಾಗೂ ರಾಮ್ ಚರಣ್ ತೇಜ ಕಾಂಬಿನೇಷನ್ನ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ:‘ಪುಷ್ಪ 2’ ಎಫೆಕ್ಟ್, ರಾಮ್ ಚರಣ್ ಸಿನಿಮಾಕ್ಕೆ ಇಲ್ಲ ವಿಶೇಷ ಶೋ, ಭಾರಿ ನಷ್ಟ
ಮೆಗಾಸ್ಟಾರ್ ಚಿರಂಜೀವಿ ಮಾತ್ರವೇ ಅಲ್ಲದೆ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಮಹೇಶ್ ಬಾಬು ಅವರೊಟ್ಟಿಗೂ ಸಿನಿಮಾ ಮಾಡಲು ಶಂಕರ್ ಪ್ರಯತ್ನಿಸಿದ್ದರಂತೆ. ಆದರೆ ಆ ಸಿನಿಮಾ ಸಹ ಸೆಟ್ಟೇರಲಿಲ್ಲವಂತೆ. ಸಿನಿಮಾ ಕತೆ ಎಲ್ಲವೂ ಇಷ್ಟವಾದರೂ ಬೇರೆ ಬೇರೆ ಕಾರಣಗಳಿಗಾಗಿ ಸಿನಿಮಾ ಸೆಟ್ಟೇರಲಿಲ್ಲವಂತೆ. ಇದು ಮಾತ್ರವೇ ಅಲ್ಲದೆ, ಕೋವಿಡ್ ಸಮಯದಲ್ಲಿ ನಟ ಪ್ರಭಾಸ್ ಜೊತೆಗೂ ಕತೆಯೊಂದರ ಬಗ್ಗೆ ಚರ್ಚಿಸಿದ್ದರಂತೆ ಶಂಕರ್. ಪ್ರಭಾಸ್ ಸಹ ಕತೆ ಕೇಳಿದ್ದರಂತೆ ಆದರೆ ಆ ಸಿನಿಮಾ ಸಹ ಅನಿವಾರ್ಯ ಕಾರಣಗಳಿಂದಾಗಿ ಸೆಟ್ಟೇರಲಿಲ್ಲವಂತೆ.
ಇದೀಗ ಶಂಕರ್, ರಾಮ್ ಚರಣ್ಗಾಗಿ ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶಿಸಿದ್ದಾರೆ. ಇದು ರಾಜಕೀಯ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಎನ್ನಲಾಗುತ್ತಿದೆ. ಐಎಎಸ್ ಅಧಿಕಾರಿಯ ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿ. ಸಿನಿಮಾದಲ್ಲಿ ತೆಲುಗು ನಟ ಸುನಿಲ್, ತಮಿಳು ನಟ ಎಸ್ಜೆ ಸೂರ್ಯ ಸೇರಿದಂತೆ ಇನ್ನೂ ಕೆಲವು ಸ್ಟಾರ್ ನಟರಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ. ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾ ಫ್ಲಾಪ್ ಆಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ