ರಾಮ್ ಚರಣ್-ಶಿವಣ್ಣ ಸಿನಿಮಾಕ್ಕೆ ಹಾಲಿವುಡ್ ಮಾದರಿ ಪ್ರಯೋಗ, ಖರ್ಚು ಕಡಿಮೆಯಲ್ಲ
Shiva Rajkumar: ರಾಮ್ ಚರಣ್, ಶಿವರಾಜ್ ಕುಮಾರ್ ಹಾಗೂ ಜಾನ್ಹವಿ ಕಪೂರ್ ನಟನೆಯ ಹೊಸ ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ. ಈ ಸಿನಮಾದಲ್ಲಿ ಹಾಲಿವುಡ್ನ ಆಸ್ಕರ್ ವಿಜೇತ ಸಿನಿಮಾಗಳಲ್ಲಿ ಬಳಸಲಾಗುವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಸಿನಿಮಾದ ತಂತ್ರಜ್ಞರು ಈಗಾಗಲೇ ಪ್ರಯೋಗ ಆರಂಭಿಸಿದ್ದಾರೆ. ಈ ಪ್ರಯೋಗಕ್ಕೆ ಖರ್ಚಾಗುವ ಹಣ, ಹಾಕಬೇಕಿರುವ ಶ್ರಮ ಕಡಿಮೆ ಅಲ್ಲ.

ರಾಮ್ ಚರಣ್ ಮತ್ತು ಶಿವರಾಜ್ ಕುಮಾರ್ ತೆಲುಗು ಸಿನಿಮಾ ಒಂದರಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಹಿಂದೆ ‘ಉಪ್ಪೆನ’ ಹೆಸರಿನ ಅದ್ಭುತ ಲವ್ ಸ್ಟೋರಿ ಸಿನಿಮಾ ನೀಡಿದ್ದ ಪ್ರತಿಭಾವಂತ ನಿರ್ದೇಶಕ ಬುಚ್ಚಿಬಾಬು ಸನಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಭಾರಿ ಬಜೆಟ್ ಸಿನಿಮಾಕ್ಕೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿ. ಸಿನಿಮಾದ ಮೇಲೆ ಭಾರಿ ಬಂಡವಾಳ ತೊಡಗಿಸಲಾಗಿಸಿರುವುದು ಮಾತ್ರವೇ ಅಲ್ಲದೆ ಹಾಲಿವುಡ್ ಮಾದರಿಯ ಕೆಲ ಪ್ರಯೋಗಗಳನ್ನು ಸಿನಿಮಾದಲ್ಲಿ ಮಾಡಲಾಗುತ್ತಿದೆ.
2023 ರಲ್ಲಿ ಬಿಡುಗಡೆ ಆಗಿದ್ದ ಬಲು ಜನಪ್ರಿಯ ಆಸ್ಕರ್ ವಿಜೇತ ಸಿನಿಮಾ ‘ಆಪನ್ಹೈಮರ್’ ನಲ್ಲಿ ಬಳಸಲಾಗಿದ್ದ ಕೆಲವು ತಂತ್ರಜ್ಞಾನಗಳನ್ನು ರಾಮ್ ಚರಣ್-ಶಿವಣ್ಣ ಅವರ ಸಿನಿಮಾಕ್ಕೂ ಬಳಸಲಾಗುತ್ತಿದೆ. ಖ್ಯಾತ ನಿರ್ದೇಶಕ ಕ್ರಿಸ್ಟೊಫರ್ ನೋಲನ್ ‘ಆಪನ್ಹೈಮರ್’ ಸಿನಿಮಾವನ್ನು ನೆಗೆಟಿವ್ ರೀಲ್ ಬಳಸಿ ಚಿತ್ರೀಕರಣ ಮಾಡಿದ್ದರು. ಇದರಿಂದ ಅತ್ಯುತ್ತಮ ಗುಣಮಟ್ಟದ ದೃಶ್ಯಗಳು ಸೆರೆ ಹಿಡಿಯಲ್ಪಟ್ಟಿದ್ದವು. ‘ಆಪನ್ಹೈಮರ್’ ಸಿನಿಮಾದ ಅತ್ಯುತ್ತಮ ಗುಣಮಟ್ಟಕ್ಕೆ ಈ ಪ್ರಯೋಗವೇ ಕಾರಣ.
ಇದೀಗ ಅದೇ ಪ್ರಯೋಗವನ್ನು ಆರ್ಸಿ 16 ಸಿನಿಮಾಕ್ಕೂ ಬಳಸಿಕೊಳ್ಳಲಾಗುತ್ತಿದೆ. ಕನ್ನಡದ ‘ಗಾಳಿಪಟ’ ಪರಭಾಷೆಗಳ ಸೂಪರ್ ಹಿಟ್ ಸಿನಿಮಾಗಳಾದ ‘ಆರ್ಯ’, ‘ರೋಬೋ’, ‘ವಾರಣಂ ಅಯರುಂ’, ‘ರಂಗಸ್ಥಳಂ’, ಇತ್ತೀಚೆಗೆ ಬಿಡುಗಡೆ ಆದ ‘ದೇವರ’ ಸಿನಿಮಾಗಳಿಗೆ ಕ್ಯಾಮೆರಾ ಕೆಲಸ ಮಾಡಿರುವ ರತ್ನವೇಲು ಅವರು ಆರ್ಸಿ 16ಗೆ ಕ್ಯಾಮೆರಾಮ್ಯಾನ್ ಆಗಿದ್ದು, ರತ್ನವೇಲು ಅವರು ಆರ್ಸಿ 16 ಸಿನಿಮಾವನ್ನು ನೆಗೆಟಿವ್ ಫಿಲಂ ಬಳಸಿ ಚಿತ್ರೀಕರಣ ಮಾಡಲಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ಸಂಭಾವನೆಗೆ ದೊಡ್ಡ ಹೊಡೆತ ಕೊಟ್ಟ ‘ಗೇಮ್ ಚೇಂಜರ್’ ಕಲೆಕ್ಷನ್
ಅತ್ಯುತ್ತಮ ಗುಣಮಟ್ಟದ ದೃಶ್ಯಗಳನ್ನು ಸೆರೆಹಿಡಿಯಲೆಂದು ಈ ಪ್ರಯೋಗಕ್ಕೆ ರತ್ನವೇಲು ಕೈ ಹಾಕಿದ್ದು, ಈಗಾಗಲೇ ಈಸ್ಟರ್ನ್ ಕೊಡ್ಯಾಕ್ ಸಂಸ್ಥೆಯೊಂದಿಗೆ ಈ ಬಗ್ಗೆ ಮಾತುಕತೆ ಮಾಡಿಕೊಂಡಿದ್ದಾರೆ. ಕೋಡ್ಯಾಕ್ ಸಂಸ್ಥೆ ರತ್ನವೇಲು ಅವರ ಪ್ರಯೋಗಕ್ಕೆ ಬೆಂಬಲ ನೀಡುತ್ತಿದೆ. ಸಿನಿಮಾದಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್, ಜಾನ್ಹವಿ ಕಪೂರ್ ಜೊತೆಗೆ ಜಗಪತಿ ಬಾಬು, ದಿವ್ಯೇಂದು ಶರ್ಮಾ ಇನ್ನಿತರರು ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ಶುರುವಾಗಿದ್ದು ಹೈದರಾಬಾದ್ ಸೇರಿದಂತೆ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಶಿವಣ್ಣ ಶೀಘ್ರದಲ್ಲಿಯೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:14 am, Sun, 2 February 25