ರಾಮ್ ಚರಣ್ ಸಂಭಾವನೆಗೆ ದೊಡ್ಡ ಹೊಡೆತ ಕೊಟ್ಟ ‘ಗೇಮ್ ಚೇಂಜರ್’ ಕಲೆಕ್ಷನ್
ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಚಿತ್ರದ ನಿರೀಕ್ಷೆಗಿಂತ ಕಡಿಮೆ ಗಳಿಕೆಯಿಂದಾಗಿ ಅವರ ಮುಂದಿನ ಚಿತ್ರ ‘RC16’ಕ್ಕೆ ಸಂಭಾವನೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಪ್ರತಿ ಚಿತ್ರಕ್ಕೆ 80-100 ಕೋಟಿ ಪಡೆಯುತ್ತಿದ್ದ ಅವರ ಸಂಭವಾನೆ ತೀವ್ರ ಇಳಿಕೆ ಕಂಡಿದೆ. ಈ ಬೆಳವಣಿಗೆಯು ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಅಭಿಮಾನಿಗಳಲ್ಲಿದೆ.
ರಾಮ್ ಚರಣ್ ಅವರ ಕೊನೆಯ ಸಿನಿಮಾದ ಬಜೆಟ್ 450 ಕೋಟಿ ರೂಪಾಯಿ. ಆದರೆ, ಚಿತ್ರದ ಗಳಿಕೆ ಮಾತ್ರ 120 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಜನವರಿ 10ರಂದು ತೆರೆಗೆ ಬಂದ ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಎಂದು ಹೇಳಲಾಗಿದೆ. ಈ ಚಿತ್ರದ ಕಲೆಕ್ಷನ್ ಹಾಗೂ ಹೀನಾಯ ಸೋಲು ರಾಮ್ ಚರಣ್ ಅವರ ಸಂಭಾವನೆ ಮೇಲೆ ನೇರ ಪರಿಣಾಮ ಬೀರಿದೆ. ಮುಂದೇನು ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ದಿಲ್ ರಾಜು ಅವರು ‘ಗೇಮ್ ಚೇಂಜರ್’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಾಮ್ ಚರಣ್ ಅವರು ಪ್ರತಿ ಚಿತ್ರಕ್ಕೆ 80-100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ, ಈ ಚಿತ್ರಕ್ಕಾಗಿ ಅವರು ಪಡೆದಿದ್ದು ಕೇವಲ 60 ಕೋಟಿ ರೂಪಾಯಿ ಎನ್ನಲಾಗಿತ್ತು. ಈಗ ಅವರ ಮುಂದಿನ ಚಿತ್ರಕ್ಕೆ ಸಂಭಾವನೆಯಲ್ಲಿ ಮತ್ತಷ್ಟು ಕಡಿತ ಉಂಟಾಗಿದೆ.
ರಾಮ್ ಚರಣ್ ಅವರ ಮುಂದಿನ ಚಿತ್ರಕ್ಕೆ ತಾತ್ಕಾಲಿಕವಾಗಿ ‘RC16’ ಎಂದು ಟೈಟಲ್ ಇಡಲಾಗಿದೆ. ಇದನ್ನು ಬುಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಈ ಸಿನಿಮಾನ ದಿಲ್ ರಾಜು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ‘ಗೇಮ್ ಚೇಂಜರ್’ ಚಿತ್ರದಿಂದ ದಿಲ್ ರಾಜು ಅವರಿಗೆ ಆದ ನಷ್ಟವನ್ನು ರಾಮ್ ಚರಣ್ ಹತ್ತಿರದಿಂದ ಗಮನಿಸಿದ್ದು, ಈ ಕಾರಣಕ್ಕೆ ಈ ಚಿತ್ರಕ್ಕೆ ಕಡಿಮೆ ಸಂಭಾವನೆ ಪಡೆಯಲು ಒಪ್ಪಿದ್ದಾರೆ.
‘ಗೇಮ್ ಚೇಂಜರ್’ ಚಿತ್ರಕ್ಕೆ ರಾಮ್ ಚರಣ್ 60 ಕೋಟಿ ರೂಪಾಯಿ ಪಡೆದುಕೊಂಡಿದ್ದು ಎಂದರೆ, ಅವರ ಹೊಸ ಸಿನಿಮಾಗೆ ಸಂಭಾವನೆಯನ್ನು ಮತ್ತೆಷ್ಟು ಕಡಿಮೆ ಮಾಡಿಕೊಂಡಿರಬಹುದು ಎನ್ನುವ ಪ್ರಶ್ನೆ ಅನೇಕರಿಗೆ ಕಾಡಿದೆ. ಇದು ಹೀಗೆಯೇ ಮುಂದುವರಿದರೆ ಅವರ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಕೊಡಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮಗಳ ಮುಖ ತೋರಿಸುವುದು ಯಾವಾಗ? ಉತ್ತರ ಕೊಟ್ಟ ರಾಮ್ ಚರಣ್
ಉಳಿದ ಹೀರೋಗಳಿಗೆ ಹೋಲಿಕೆ ಮಾಡಿದರೆ ರಾಮ್ ಚರಣ್ ಅವರು ಸಿನಿಮಾ ಮಾಡೋದು ತುಂಬಾನೇ ನಿಧಾನ. ಅವರು ಅಗ್ರೆಸ್ಸಿವ್ ಆಗಿ ಚಿತ್ರ ಮಾಡೋದಿಲ್ಲ. ಇದರ ಜೊತೆಗೆ ಅವರು ಸಂಭಾವನೆ ಕಡಿಮೆ ಮಾಡಿಕೊಳ್ಳುತ್ತಾ ಹೋದರೆ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.