ಪೊಲೀಸರಿಗೆ ವಿಡಿಯೋ ಕಾಲ್ ಮಾಡಿ ಕ್ಷಮೆ ಕೇಳಿದ ನಟ ಸಿದ್ದಾರ್ಥ್; ಈ ಬಾರಿ ಅವರು ಮಾಡಿದ ತಪ್ಪೇನು?
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ಗೆ ಭೇಟಿ ನೀಡಿದ್ದಾಗ ಆದ ಭದ್ರತಾ ಲೋಪದ ಕುರಿತು ಕಳವಳ ವ್ಯಕ್ತಪಡಿಸಿ ಸೈನಾ ನೆಹ್ವಾಲ್ ಅವರು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದಾರ್ಥ್ ಅವರು ಅವಹೇಳನಕಾರಿ ಪದಗಳನ್ನು ಬಳಸಿದ್ದರು.

ನಟ ಸಿದ್ದಾರ್ಥ್ (Siddharth ) ಅವರು ಆಗಾಗ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಸಿದ್ಧಾಂತದ ವಿಚಾರವಾಗಿ ಅವರು ಅನೇಕ ಬಾರಿ ಜಗಳ ಆಡಿದ್ದಿದೆ. ಇತ್ತೀಚೆಗೆ ಅವರು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal) ಬಗ್ಗೆ ಆಕ್ಷೇಪಾರ್ಹವಾಗಿ ಟ್ವೀಟ್ (Twitter) ಮಾಡಿದ್ದರು. ಅದಕ್ಕೆ ಅನೇಕರಿಂದ ಖಂಡನೆ ವ್ಯಕ್ತವಾಗಿತ್ತು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಈ ಟ್ವೀಟ್ ಇದೆ ಎಂದು ಮಹಿಳಾ ಆಯೋಗ ಕೂಡ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದಾರ್ಥ್ ಅವರು ಸೈನಾ ಬಳಿ ಕ್ಷಮೆ ಕೇಳಿದ್ದರು. ಈಗ ಸಿದ್ದಾರ್ಥ್ ಅವರು ಚೆನ್ನೈ ಪೊಲೀಸ್ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳಿಗೆ ಕರೆ ಮಾಡಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ಕಾರಣ ಅದೇ ಹಳೆಯ ಸೈನಾ ನೆಹ್ವಾಲ್ ಪ್ರಕರಣ.
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ಗೆ ಭೇಟಿ ನೀಡಿದ್ದಾಗ ಆದ ಭದ್ರತಾ ಲೋಪದ ಕುರಿತು ಕಳವಳ ವ್ಯಕ್ತಪಡಿಸಿ ಸೈನಾ ನೆಹ್ವಾಲ್ ಅವರು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದಾರ್ಥ್ ಅವರು ಅವಹೇಳನಕಾರಿ ಪದಗಳನ್ನು ಬಳಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದ ಸಿದ್ದಾರ್ಥ್, ‘ಡಿಯರ್ ಸೈನಾ.. ಕೆಲವೇ ದಿನಗಳ ಹಿಂದೆ ನಿಮ್ಮ ಟ್ವೀಟ್ಗೆ ಪ್ರತಿಯಾಗಿ ನಾನು ಕೆಟ್ಟ ಜೋಕ್ ಮಾಡಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಮತ್ತು ಸಿಟ್ಟು ಕೂಡ ನಾನು ಬಳಸಿದ ಪದಗಳು ಹಾಗೂ ಧಾಟಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್ ಅನ್ನು ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದಾದರೆ ಅದು ಒಳ್ಳೆಯ ಜೋಕ್ ಅಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಸಿದ್ದಾರ್ಥ್ ಟ್ವೀಟ್ ಮಾಡಿದ್ದರು.
‘ಇದು ಮಹಿಳೆಯರ ಘನತೆಗೆ ಸಂಬಂಧಿಸಿದ ವಿಚಾರ. ಓರ್ವ ಮಹಿಳೆಯನ್ನು ಅವರು ಈ ರೀತಿ ಟಾರ್ಗೆಟ್ ಮಾಡಬಾರದು. ಆದರೆ ಇಂಥ ವಿಚಾರಗಳಿಂದ ನಾನು ವಿಚಲಿತ ಆಗಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಖುಷಿಯಾಗಿದ್ದೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಸೈನಾ ನೆಹ್ವಾಲ್ ಉತ್ತರಿಸಿದ್ದರು. ಅಲ್ಲಿಗೆ ಈ ಪ್ರಕರಣ ಇತ್ಯರ್ಥವಾಗಿತ್ತು. ಆದರೆ, ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಲೇ ಇದ್ದಾರೆ.
ಇಂದು (ಫೆಬ್ರವರಿ 7) ಸಿದ್ದಾರ್ಥ್ ವಿಡಿಯೋ ಕಾನ್ಫರೆನ್ಸ್ ಲೈನ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ‘ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆ ಇದಾಗಿರಲಿಲ್ಲ. ಈ ಬಗ್ಗೆ ಕ್ಷಮೆ ಕೇಳುತ್ತೇನೆ’ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಸಿದ್ದಾರ್ಥ್ ವಿಚಾರಣೆಗೆ ಸಂಪೂರ್ಣವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಗೆದ್ದಿದ್ದಕ್ಕೆ ಯೋಗಿ ಆದಿತ್ಯನಾಥ್ರಿಗೆ ಅಭಿನಂದನೆ ಹೇಳಿದ ಸೈನಾ ನೆಹ್ವಾಲ್; ಪ್ರತಿಪಕ್ಷಗಳಿಂದ ಕಟು ಟೀಕೆ
Published On - 4:43 pm, Mon, 7 February 22