‘ರೂಂಗೆ ಕರೆದು..’; ಯುವ ನಟಿಗೆ ಲೈಂಗಿಕ ಕಿರುಕುಳ ನೀಡಿದ ಹಿರಿಯ ನಟ
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಅರಿಯಲು ರಚಿಸಲಾಗಿದ್ದ ಹೇಮಾ ಸಮಿತಿಯ ವರದಿಯನ್ನು ಕೊನೆಗೂ ಕೇರಳ ಸರ್ಕಾರ ಪ್ರಕಟಿಸಿದ್ದು, ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ. ಈ ಬೆನ್ನಲ್ಲೇ ಮಲಯಾಳಂನ ಹಿರಿಯ ನಟ ಸಿದ್ದಿಕಿ ಅವರ ವಿರುದ್ಧ ಯುವ ನಟಿ ರೇವತಿ ಸಂಪತ್ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಮಲಯಾಳಂನ ಹಿರಿಯ ನಟ ಸಿದ್ದಿಕಿ ಅವರ ವಿರುದ್ಧ ಯುವ ನಟಿ ರೇವತಿ ಸಂಪತ್ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ವಿಚಾರ ಮಲಯಾಳಂ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಆರೋಪದ ಬೆನ್ನಲ್ಲೇ ಸಿದ್ದಿಕಿ ಅವರು ಮಲಯಾಳಂ ಕಲಾವಿದರ ಸಂಘದ (AMMA) ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಇತ್ತೀಚೆಗೆ ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿಸಿತ್ತು. ಮಲಯಾಳಂ ಚಿತ್ರರಂಗದಲ್ಲಿ ನಟಿಯರಿಗೆ ಸುರಕ್ಷತೆ ಇಲ್ಲ ಎಂದೆಲ್ಲ ಹೇಳಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಈ ಆರೋಪ ಕೇಳಿ ಬಂದಿದೆ.
AMMA ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಕ್ಕೆ ಇಳಿದಿರುವ ಬಗ್ಗೆ ಅವರು ಅಧ್ಯಕ್ಷ ಮೋಹನ್ಲಾಲ್ ಅವರಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ. ‘ನನ್ನ ವಿರುದ್ಧ ಕೇಳಿ ಬಂದ ಆರೋಪದ ಕಾರಣಕ್ಕೆ ನಾನು ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. 2016ರಲ್ಲಿ ಸಿದ್ದಿಕಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ರೇವತಿ ಹೇಳಿದ್ದಾರೆ.
‘ಸಾಮಾಜಿಕ ಜಾಲತಾಣದ ಮೂಲಕ ಸಿದ್ದಿಕಿ ನನ್ನನ್ನು ಸಂಪರ್ಕಿಸಿದರು. ಮಗಳೇ ಎಂದು ಅವರು ಕರೆಯುತ್ತಿದ್ದರು. ನಾನು ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಅವರು ನನ್ನನ್ನು ಮತ್ತೆ ಸಂಪರ್ಕಿಸಿದರು. ಆಗಲೂ ಅವರು ಮಗಳೇ ಎನ್ನುತ್ತಿದ್ದರು. ಅವರ ಉದ್ದೇಶ ಕೆಟ್ಟದಿದೆ ಎಂದು ತಿಳಿಯುವ ವಯಸ್ಸು ನನ್ನದಾಗಿರಲಿಲ್ಲ. ನನಗೆ ನಟನೆಯಲ್ಲಿ ಆಸಕ್ತಿ ಇದೆಯೇ ಎಂದು ಕೇಳಿದ್ದರು’ ಎಂದು ರೇವತಿ ಸಂಪತ್ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
‘21ನೇ ವಯಸ್ಸಿಗೆ ನಾನು ಸ್ಥಳೀಯ ಥಿಯೇಟರ್ಗೆ ‘ಸುಖಮೈರಿಕ್ಕಟ್ಟೆ’ ಸಿನಿಮಾ ನೋಡಲು ಹೋಗಿದ್ದೆ. ನಂತರ ಸಿದ್ದಿಕಿ ಅವರು ಸಿನಿಮಾ ಬಗ್ಗೆ ಮಾತನಾಡಲು ಹೋಟೆಲ್ ಒಂದಕ್ಕೆ ಕರೆದರು. ನನ್ನನ್ನು ರೂಂನಲ್ಲಿ ಲಾಕ್ ಮಾಡಲಾಗಿತ್ತು. ನನ್ನನ್ನು ಅವರು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಅವರು ಬಂದು ಅಪ್ಪಿದರು. ನಾನು ಬದುಕುತ್ತೀನಾ ಎಂದೆಲ್ಲ ಅನಿಸಿತ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ: ಮಲಯಾಳಂ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಹೇಮಾ ಸಮಿತಿ ವರದಿ
‘ನಾನು ಕಷ್ಟಪಟ್ಟು ರೂಂನಿಂದ ಹೊರಬಂದೆ. ನಾನು ಈ ವಿಚಾರವನ್ನು ಸಾರ್ವಜನಿಕವಾಗಿ ಹೇಳುತ್ತೇನೆ ಎಂದು ಆಗಲೇ ಹೇಳಿದ್ದೆ. ನಿನ್ನನ್ನು ಯಾರು ನಂಬುತ್ತಾರೆ? ನೀನು ಒಂದು ಸಿನಿಮಾದಲ್ಲಾದರೂ ನಟಿಸಿದ್ದೀಯಾ? ನಿನ್ನನ್ನು ಯಾರೂ ಗುರುತಿಸಲ್ಲ ಎಂದಿದ್ದರು. ನನಗೆ ಈ ನೋವು ಹಾಗೆಯೇ ಇದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.