AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ?

Bharathiraja: ಇಂದು ನಿಧನರಾಗಿರುವ ಭಾರತಿರಾಜ ಅವರ ಮೊದಲ ಸಿನಿಮಾ ‘16 ವಯತಿನಿಲೆ’ ಸಿನಿಮಾ, ಸೂಪರ್ ಹಿಟ್ ಆಗಿದ್ದು, ಮಾತ್ರವಲ್ಲ ಸಿನಿಮಾ ನಿರ್ದೇಶಕರುಗಳಿಗೆ ಹೊಸ ಹಾದಿಯನ್ನೇ ಹಾಕಿಕೊಟ್ಟಿತು. ಅಂದಹಾಗೆ ಭಾರತಿರಾಜ, ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ದಿವಂಗತ ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಬಲು ಆಪ್ತರಾಗಿದ್ದ ಭಾರತಿರಾಜ ಸಾಧನೆ ಮತ್ತು ವಿಶಾಲ ಹೃದಯದ ಬಗ್ಗೆ ಎಸ್​​ಪಿಬಿ ಹಿಂದೊಮ್ಮೆ ಹೇಳಿದ್ದರು.

ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ?
Bhartiraja
ಮಂಜುನಾಥ ಸಿ.
|

Updated on: Jun 10, 2026 | 12:07 PM

Share

ತಮಿಳು ಚಿತ್ರರಂಗದ (Kollywood) ಹಿರಿಯ ನಿರ್ದೇಶಕ ಭಾರತಿ ರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿ ರಾಜ ಅವರಿಗೆ ಅಂತಿಮ ನಮನಗಳನ್ನು ಸಲ್ಲಸಿದ್ದಾರೆ. ಭಾರತಿರಾಜ, ತಮಿಳು ಸಿನಿಮಾಗಳ ವ್ಯಾಕರಣ ಬದಲಿಸಿದ ನಿರ್ದೇಶಕ. ಅವರ ಮೊದಲ ಸಿನಿಮಾ ‘16 ವಯತಿನಿಲೆ’ ಸಿನಿಮಾ, ಸೂಪರ್ ಹಿಟ್ ಆಗಿದ್ದು, ಮಾತ್ರವಲ್ಲ ಸಿನಿಮಾ ನಿರ್ದೇಶಕರುಗಳಿಗೆ ಹೊಸ ಹಾದಿಯನ್ನೇ ಹಾಕಿಕೊಟ್ಟಿತು. ಅಂದಹಾಗೆ ಭಾರತಿರಾಜ, ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ದಿವಂಗತ ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಬಲು ಆಪ್ತರಾಗಿದ್ದ ಭಾರತಿರಾಜ ಸಾಧನೆ ಮತ್ತು ವಿಶಾಲ ಹೃದಯದ ಬಗ್ಗೆ ಎಸ್​​ಪಿಬಿ ಹಿಂದೊಮ್ಮೆ ಹೇಳಿದ್ದರು.

ಭಾರತಿರಾಜ ಅವರು ಆಗಿನ್ನೂ ಚಿತ್ರರಂಗಕ್ಕೆ ಕಾಲಿರಿಸಿರಲಿಲ್ಲ ಆದರೆ ನಾಟಕಗಳಲ್ಲಿ ನಟಿಸುತ್ತಿದ್ದರು. ಅದರ ಜೊತೆಗೆ ಜೀವನಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಸಹ ಮಾಡುತ್ತಿದ್ದರು. ಅವುಗಳಲ್ಲಿ ಪೆಟ್ರೋಲ್ ಬಂಕ್​​ನಲ್ಲಿ ಪೆಟ್ರೋಲ್ ಹಾಕುವ ಕೆಲಸವೂ ಒಂದು. ಬಾಲಸುಬ್ರಹ್ಮಣ್ಯಂ ಸಹ ಸಿನಿಮಾ ಗಾಯಕ ಆಗಿರಲಿಲ್ಲ ಆದರೆ ಸ್ಟೇಜ್​​ಗಳಲ್ಲಿ ಹಾಡುತ್ತಿದ್ದರು. ಆಗಾಗ ಭಾರತಿರಾಜ ಅವರ ನಾಟಕಗಳಿಗೂ ಹಾಡುಗಳನ್ನು ಹಾಡುತ್ತಿದ್ದರು. ಆಗಿನಿಂದಲೇ ಭಾರತಿರಾಜ ಅವರು ಬಾಲಸುಬ್ರಹ್ಮಣ್ಯಂ ಅವರಿಗೆ ಪರಿಚಯ.

ಭಾರತಿರಾಜ ಅವರು ಒಮ್ಮೆ, ಎಸ್​​ಪಿಬಿ ಬಳಿ, ‘ನಮ್ಮ ಪಕ್ಕದ ಊರಿನ ಮೂರು ಮಂದಿ ಸಂಗೀತಗಾರರು ಇಲ್ಲಿಗೆ (ಚೆನ್ನೈ) ಬಂದಿದ್ದಾರೆ. ಅವರನ್ನು ನಿಮ್ಮ ತಂಡದಲ್ಲಿ ಸೇರಿಸಿಕೊ’ ಎಂದರಂತೆ. ಸರಿ ಎಂದು ಎಸ್​​ಪಿ ಬಾಲಸುಬ್ರಹ್ಮಣ್ಯಂ ತಾವು ರಿಹರ್ಸಲ್ ಮಾಡುತ್ತಿದ್ದ ಜಾಗಕ್ಕೆ ಅವರನ್ನು ಕರೆಸಿಕೊಂಡಿದ್ದಾರೆ. ಅವರೇ ಇಳಯರಾಜ ಮತ್ತು ಅವರ ಇಬ್ಬರು ಸಹೋದರರು. ಇಳಯರಾಜ ಆಗ ಹಾರ್ಮೊನಿಯಂ ನುಡಿಸುತ್ತಿದ್ದರಂತೆ. ಇಳಯರಾಜ ಅವರ ಪ್ರತಿಭೆ ಕಂಡು ಬೆರಗಾಗಿದ್ದ ಎಸ್​​ಪಿಬಿಗೆ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಆಸೆ. ಆದರೆ ತಂಡದ ನಾಯಕರಿಗೆ ಇಷ್ಟವಿಲ್ಲ ಏಕೆಂದರೆ ಅದಾಗಲೇ ಅವರ ತಂಡದಲ್ಲಿ ಹಾರ್ಮೊನಿಯಂ ವಾದಕರು ಇದ್ದರಂತೆ. ಕೊನೆಗೆ ಎಸ್​​ಪಿಬಿ ಗುಟ್ಟಾಗಿ ಇಳಯರಾಜಾಗೆ ಈ ವಿಷಯ ಹೇಳಿದಾಗ, ತಾವು ಗಿಟಾರ್ ಸಹ ವಾದಿಸುವುದಾಗಿ ಹೇಳಿದರಂತೆ. ಆಗ ಎಸ್​​ಪಿಬಿ ಅವರ ತಂಡ ಸೇರಿದ ಇಳಯರಾಜ ಬೆಳೆದ ಎತ್ತರ ಯಾರೂ ಊಹಿಸಲಾಗದ್ದು. ಇಂಥಹಾ ಇಳಯರಾಜ ಮುಖ್ಯವಾಹಿನಿಗೆ ಬರಲು ಭಾರತಿರಾಜ ಕಾರಣವಾಗಿದ್ದರು.

ಇದನ್ನೂ ಓದಿ:ಪುಟ್ಟಣ ಕಣಗಾಲ್ ಶಿಷ್ಯ, ಖ್ಯಾತ ನಿರ್ದೇಶಕ ಭಾರತಿ ರಾಜ ನಿಧನ

ಗಾಯಕರಾಗಿ ತುಸು ಜನಪ್ರಿಯರಾದ ಬಳಿಕ ಎಸ್​​ಪಿ ಬಾಲಸುಬ್ರಹ್ಮಣ್ಯಂ ಒಂದು ಮಾರುತಿ 800 ಕಾರು ಖರೀದಿ ಮಾಡಿದರಂತೆ. ಹಾಡು ರೆಕಾರ್ಡಿಂಗ್ ಮಾಡಲು, ಸ್ಟೇಜ್ ಕಾರ್ಯಕ್ರಮಗಳನ್ನು ನೀಡಲು ಕಾರಿನಲ್ಲೇ ಹೋಗುತ್ತಿದ್ದರಂತೆ. ಆಗೆಲ್ಲ ಭಾರತಿರಾಜ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ ಎಸ್​​ಪಿಬಿ. ಆಗ ದಾರಿಯಲ್ಲಿ ಭಾರತಿರಾಜ ಅವರು ತಾವು ಮಾಡಿಟ್ಟುಕೊಂಡ ಕತೆಗಳನ್ನು ಹೇಳುತ್ತಿದ್ದರಂತೆ. ಅವರು ಹೇಳುತ್ತಿದ್ದ ಕತೆಗಳು ಬಹಳ ಭಿನ್ನವಾಗಿರುತ್ತಿದ್ದವಂತೆ, ಆ ವರೆಗೆ ಯಾರೂ ಯೋಚಿಸದ ರೀತಿಯ ಕತೆಗಳನ್ನು ಭಾರತಿರಾಜ ಹೇಳುತ್ತಿದ್ದರಂತೆ.

ಭಾರತಿರಾಜ ಹೇಳುತ್ತಿದ್ದ ಕತೆಗಳನ್ನು ಕೇಳಿ ಎಸ್​​​ಪಿಬಿಗೆ ತುಸು ಅನುಮಾನವೇ ಆಗುತ್ತಿತ್ತಂತೆ. ಇಷ್ಟು ಭಿನ್ನವಾದ, ರೂಟೆಡ್ ಆದ ಕತೆಗಳನ್ನು ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ ಎನಿಸುತ್ತಿತ್ತಂತೆ. ಆದರೆ ಎಸ್​​ಪಿಬಿ ಅನುಮಾನ ಸುಳ್ಳಾಯ್ತು. ಭಾರತಿರಾಜ ಅವರ ಆ ಭಿನ್ನ ಮಾದರಿಯ, ಡಿಗ್ಲಾಮರೈಸ್ ಆದ ಸಿನಿಮಾಗಳೇ ಜನರಿಗೆ ಹೆಚ್ಚು ಇಷ್ಟವಾದವು. ಭಾರತಿರಾಜ ಅವರು ನಿಜ ಗ್ರಾಮಗಳನ್ನು, ಗ್ರಾಮಗಳ ನಿಜವಾದ ಪಾತ್ರಗಳನ್ನು ಆರಂಭದಲ್ಲಿ ತಮ್ಮ ಸಿನಿಮಾಗಳಲ್ಲಿ ತೋರಿಸಿದರು. ಅಲ್ಲದೆ, ತಮಿಳು ಚಿತ್ರರಂಗದ ಮೇಲೆ ಸ್ಟುಡಿಯೋಗಳ ಪ್ರಾಬಲ್ಯವನ್ನು ಮುರಿದಿದ್ದು ಸಹ ಭಾರತಿರಾಜ ಅವರೇ. ಈಗ ಅವರು ಇಲ್ಲವಾಗಿದ್ದಾರೆ. ಎಸ್​​ಪಿಬಿ ಕಾಲವಾದಗಲೇ ಅರೆಜೀವವಾಗಿದ್ದ ಭಾರತಿರಾಜ, ಈಗ ತಮ್ಮ ಆಪ್ತ ಗೆಳೆಯನ ಬಳಿ ತೆರಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More