ನಿರ್ಮಾಪಕರ ಕಾಲು ಹಿಡಿದುಕೊಂಡಿದ್ದ ‘ಪುಷ್ಪ’ ನಿರ್ದೇಶಕ ಸುಕುಮಾರ್: ಕಾರಣ?
‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್, ಈಗ ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ. ಆದರೆ ಸುಕುಮಾರ್ ಒಮ್ಮೆ ನಿರ್ಮಾಪಕರೊಬ್ಬರ ಕಾಲು ಹಿಡಿದುಕೊಂಡಿದ್ದರಂತೆ. ಆ ಘಟನೆಯನ್ನು ಅವರೇ ವಿವರಿಸಿದ್ದಾರೆ.

‘ಪುಷ್ಪ’ (Pushpa) ಸಿನಿಮಾ ವಿಶ್ವಮಟ್ಟದಲ್ಲಿ ಹಿಟ್ ಎನಿಸಿಕೊಂಡಿದೆ. ಇದೀಗ ‘ಪುಷ್ಪ 2’ ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದ್ದು ಆ ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆಗಳು ಬೆಟ್ಟದಷ್ಟಾಗಿವೆ. ‘ಪುಷ್ಪ’ ನಿರ್ದೇಶಕ ಸುಕುಮಾರ್, ಈಗ ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಹಲವು ಸ್ಟಾರ್ ನಟರು ಸುಕುಮಾರ್ ಜೊತೆ ಕೆಲಸ ಮಾಡಲು ಕಾಯುತ್ತಿದ್ದಾರೆ. ಸ್ಟಾರ್ ನಿರ್ದೇಶಕರಾಗಿರುವ ಸುಕುಮಾರ್, ನಿರ್ಮಾಪಕರೊಬ್ಬರ ಕಾಲು ಹಿಡಿದುಕೊಳ್ಳುವ ಪರಿಸ್ಥಿತಿ ಬಂದಿತ್ತಂತೆ ಅದೂ ಒಂದಲ್ಲ ಎರಡು ಬಾರಿ. ಆ ಬಗ್ಗೆ ಸ್ವತಃ ಸುಕುಮಾರ್ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಸುಕುಮಾರ್ ನಿರ್ದೇಶನ ಮಾಡಿ, ಅಲ್ಲು ಅರ್ಜುನ್ ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ‘ಆರ್ಯ’ ಬಿಡುಗಡೆ ಆಗಿ 20 ವರ್ಷವಾಗಿದ್ದಕ್ಕೆ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಸುಕುಮಾರ್, ಆರ್ಯ ಸಿನಿಮಾದ ಚಿತ್ರೀಕರಣ ಮಾಡುವ ವೇಳೆ ಕಷ್ಟಗಳನ್ನು ನೆನಪು ಮಾಡಿಕೊಂಡಿದ್ದರು. ಆ ಸಿನಿಮಾದ ನಿರ್ಮಾಪಕ ದಿಲ್ ರಾಜು ಜೊತೆಗೆ ಮಾಡಿಕೊಂಡಿದ್ದ ಜಗಳಗಳನ್ನು ಸಹ ಸುಕುಮಾರ್ ನೆನಪು ಮಾಡಿಕೊಂಡರು.
ಮೊದಲಿಗೆ ನಿರ್ಮಾಪಕ ದಿಲ್ ರಾಜು ಜೊತೆಗೆ ಐಟಂ ಸಾಂಗ್ ವಿಚಾರಕ್ಕೆ ಜಗಳ ಮಾಡಿದರಂತೆ ಸುಕುಮಾರ್. ತಮ್ಮ ಸಿನಿಮಾದಲ್ಲಿ ಐಟಂ ಸಾಂಗ್ ಇರಬಾರದು ಎಂಬುದು ಸುಕುಮಾರ್ ವಾದವಾಗಿತ್ತಂತೆ. ಆದರೆ ದಿಲ್ ರಾಜು, ‘ಅಲ್ಲು ಅರ್ಜುನ್, ಅಲ್ಲು ಅರವಿಂದ್ ಅವರ ಮಗ, ಅವರ ಸಿನಿಮಾದಲ್ಲಿ ಐಟಂ ಸಾಂಗ್ ಇರಬೇಕು ಆಗಲೇ ಆತ ಕಮರ್ಶಿಯಲ್ ಸ್ಟಾರ್ ಎನಿಸಿಕೊಳ್ಳುವುದು’ ಎಂದರಂತೆ. ಆದರೆ ಮೊದಲಿಗೆ ಒಪ್ಪದ ಸುಕುಮಾರ್, ಕೊನೆಗೆ ದಿಲ್ ರಾಜು ಒತ್ತಡಕ್ಕೆ ಮಣಿದು ಒಪ್ಪಿಕೊಳ್ಳಬೇಕಾಯ್ತಂತೆ.
ಇದನ್ನೂ ಓದಿ:‘ಪುಷ್ಪ ಚಿತ್ರದಿಂದ ನನ್ನ ಕರಿಯರ್ನಲ್ಲಿ ಏನೂ ಬದಲಾಗಿಲ್ಲ’; ಖಾರವಾಗಿ ಹೇಳಿದ ಫಹಾದ್ ಫಾಸಿಲ್
ಬಳಿಕ ಸುಕುಮಾರ್, ಸಿನಿಮಾಕ್ಕೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಹೆಚ್ಚು ದಿನ ಶೂಟಿಂಗ್ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ದಿಲ್ ರಾಜು ಕೋಪ ಮಾಡಿಕೊಂಡಿದ್ದರಂತೆ. ಒಂದು ದಿನ ಮಳೆಯಲ್ಲಿ ನಾಯಕ ಡ್ಯಾನ್ಸ್ ಮಾಡುತ್ತಿರುವ ದೃಶ್ಯದ ಚಿತ್ರೀಕರಣ ಮಾಡಬೇಕಿತ್ತಂತೆ. ಅದರಲ್ಲೂ ಮೇಲಿನ ಕೋಣೆಯಲ್ಲಿ ನಾಯಕಿ, ಎರಡನೇ ನಾಯಕ ಇನ್ನಿತರರು ಪಾರ್ಟಿ ಮಾಡುತ್ತಿರುತ್ತಾರೆ, ಕೆಳಗೆ ಮಳೆಯಲ್ಲಿ ನಾಯಕ ಡ್ಯಾನ್ಸ್ ಮಾಡುತ್ತಿರುತ್ತಾನೆ ಈ ದೃಶ್ಯ ಸುಕುಮಾರ್ಗೆ ಬೇಕಿತ್ತಂತೆ. ಆದರೆ ದಿಲ್ ರಾಜು ಅದಾಗಲೇ ತಾಳ್ಮೆ ಕಳೆದುಕೊಂಡಿದ್ದರಂತೆ.
ಸುಕುಮಾರ್ ಅವರನ್ನು ಕರೆದು ದಿಲ್ ರಾಜು ನೀನು ಹೆಚ್ಚು ಹಣ ಖರ್ಚು ಮಾಡುತ್ತಿದ್ದೀಯ, ಮೊದಲನೇಯ ಸಿನಿಮಾಕ್ಕೆ ಯಾರೂ ಇಷ್ಟು ಹಣ ಖರ್ಚು ಮಾಡುವುದಿಲ್ಲ ಎಂದರಂತೆ. ಆಗ ಸುಕುಮಾರ್ ಸಹ ಬಹಳ ಸಿಟ್ಟಿನಿಂದ ದಿಲ್ ರಾಜು ಜೊತೆ ಜಗಳವಾಡಿದರಂತೆ. ಮೊದಲಿಗೆ ನೀವು ಎನ್ನುವುದರಿಂದ ಜಗಳ ಆರಂಭವಾಗಿ ನೀನು-ತಾನು ಎನ್ನುವ ಮಟ್ಟಿಗೆ ಬಂತಂತೆ. ನೀನು ನಿರ್ಮಾಪಕನಾದರೆ ನನಗೇನು ಎಂದೆಲ್ಲ ಸುಕುಮಾರ್ ಮಾತನಾಡಿದರಂತೆ. ಏನೇ ಆದರೂ ದಿಲ್ ರಾಜು ಪಟ್ಟು ಬಿಡಲಿಲ್ಲವಂತೆ, ಆಗ ಜಗಳದ ಮಧ್ಯೆಯೇ ಸುಕುಮಾರ್, ದಿಲ್ ರಾಜು ಕಾಲು ಹಿಡಿದುಕೊಂಡು ಬಿಟ್ಟರಂತೆ. ದಯವಿಟ್ಟು ಈ ಒಂದು ದೃಶ್ಯ ಚಿತ್ರೀಕರಣ ಮಾಡಿಕೊಳ್ಳಲು ಬಿಡಿ, ಈ ದೃಶ್ಯ ಸಿನಿಮಾಕ್ಕೆ ಬಹಳ ಮುಖ್ಯ, ಇದೊಂದು ರೂಪಕ, ಹಾಗಾಗಿ ಈ ದೃಶ್ಯ ಬೇಕೇ ಬೇಕು ಎಂದರಂತೆ. ಸುಕುಮಾರ್ ದಯನೀಯವಾಗಿ ಕೇಳಿಕೊಂಡಿದ್ದು ನೋಡಿ ದಿಲ್ ರಾಜು ಸಹ ಸರಿ ಶೂಟಿಂಗ್ ಮಾಡಿಕೋ ಎಂದರಂತೆ.
ಆ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ದಿಲ್ ರಾಜು ಜೊತೆಗೆ ಸಾಕಷ್ಟು ಬಾರಿ ಜಗಳ ಮಾಡಿದ್ದೇನೆ. ಮೂರು ಬಾರಿ ಕಾಲು ಸಹ ಹಿಡಿದಿದ್ದೇನೆ ಎಂದರು ಸುಕುಮಾರ್, ಆಗ ದಿಲ್ ರಾಜು, ಮೂರಲ್ಲ ಎರಡು ಬಾರಿ ಎಂದು ತಿದ್ದಿದರು. ಮಾತು ಮುಂದುವರೆಸಿದ ಸುಕುಮಾರ್, ನಿರ್ದೇಶಕ ಎಂದರೆ ಅವನು ಬಾಸ್ ರೀತಿ ಇರುತ್ತಾನೆ. ಅವನು ಹೇಳಿದ್ದೆನ್ನ ನಡೆಯುತ್ತದೆ ಎಂದು ಯಾರೂ ಅಂದುಕೊಳ್ಳಬಾರದು. ನಾನು ಸ್ವತಃ ಸಾಕಷ್ಟು ಬಾರಿ ಕಾಂಪ್ರಮೈಸ್ ಆಗಿದ್ದೇನೆ, ಬೈಸಿಕೊಂಡಿದ್ದೇನೆ, ನೊಂದುಕೊಂಡಿದ್ದೇನೆ, ಇಷ್ಟವಿಲ್ಲದ್ದು ಮಾಡಿದ್ದೇನೆ. ಆದರೆ ಎಲ್ಲವನ್ನೂ ಸಿನಿಮಾಕ್ಕಾಗಿ ಮಾಡಿದ್ದೇನೆ. ಹೊಸಬರು ಸಹ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಚಿತ್ರರಂಗಕ್ಕೆ ಬನ್ನಿ ಎಂದು ಸಲಹೆ ನೀಡಿದರು ಸುಕುಮಾರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ