ಭಾಷೆ ಮಾತನಾಡಲು ಒತ್ತಾಯಿಸಿ, ಹಿಂಸಿಸೋದು ತಪ್ಪು; ಸುನಿಲ್ ಶೆಟ್ಟಿ
ಮುಂಬೈನಲ್ಲಿ ಮರಾಠಿ ಭಾಷೆ ಕುರಿತು ನಡೆಯುತ್ತಿರುವ ವಿವಾದ ಮತ್ತು ಹಿಂಸಾಚಾರದ ಬಗ್ಗೆ ನಟ ಸುನಿಲ್ ಶೆಟ್ಟಿ ಮಾತನಾಡಿದ್ದಾರೆ. ಭಾಷೆ ಕಲಿಯಲು ಬಲವಂತ ಅಥವಾ ಹಿಂಸೆ ತಪ್ಪು ಎಂದ ಅವರು, ಮುಂಬೈನಲ್ಲಿ ವಾಸಿಸುವವರು ಮರಾಠಿ ಭಾಷೆಯನ್ನು ಗೌರವದಿಂದ ಕಲಿಯುವುದು ಮುಖ್ಯ ಎಂದಿದ್ದಾರೆ. ಅವರ ಈ ನೇರ ನಿಲುವಿಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮರಾಠಿ ಮತ್ತು ವಲಸಿಗರ ನಡುವೆ ಮರಾಠಿ ಭಾಷೆಯ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಆಗಾಗ್ಗೆ ಭಾಷೆಯ ಕುರಿತಾದ ಚರ್ಚೆ ಹಿಂಸಾಚಾರದ ಹಂತವನ್ನು ತಲುಪಿದೆ. ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಈ ಘಟನೆ ಮತ್ತು ಅದರಿಂದ ಹುಟ್ಟಿಕೊಂಡ ರಾಜಕೀಯದ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾಷಾ ನಿಯಂತ್ರಣಕ್ಕಾಗಿ ಹಿಂಸೆ ತಪ್ಪು ಎಂದು ಅವರು ಹೇಳಿದ್ದಾರೆ.
ನಟ ಸುನಿಲ್ ಶೆಟ್ಟಿ ತಮ್ಮ ನೇರ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ, ಮರಾಠಿ ಭಾಷೆಯ ಮೇಲಿನ ಪ್ರಸ್ತುತ ರಾಜಕೀಯ ಮತ್ತು ಅದರಿಂದಾಗುತ್ತಿರುವ ಹಿಂಸಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿದರು. ‘ಮರಾಠಿ ಭಾಷೆಯ ಮೇಲೆ ರಾಜಕೀಯ ಮಾಡುವುದು ಮತ್ತು ಅದನ್ನು ಮಾತನಾಡುವಂತೆ ಒತ್ತಾಯಿಸಲು ಹಿಂಸಾಚಾರ ಮಾಡೋದು ಸಂಪೂರ್ಣವಾಗಿ ತಪ್ಪು. ಬಡ ವ್ಯಕ್ತಿಯನ್ನು ಹೊಡೆಯುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ’ ಎಂದು ಸುನಿಲ್ ಶೆಟ್ಟಿ ಹೇಳಿದರು.
‘ನಾನು ಮುಂಬೈನವನು. ಈ ನಗರ ನನಗೆ ಹೆಸರು, ಯಶಸ್ಸು, ಪ್ರತಿಷ್ಠೆ, ಎಲ್ಲವನ್ನೂ ನೀಡಿದೆ. ಅದಕ್ಕಾಗಿಯೇ ನಾನು ನನ್ನ ಹೃದಯದಿಂದ ಹೇಳುತ್ತೇನೆ, ನೀವು ಮುಂಬೈನಲ್ಲಿ ವಾಸಿಸಲು ಬಯಸಿದರೆ, ಮರಾಠಿ ಮಾತನಾಡುವುದು ಮತ್ತು ಕಲಿಯುವುದು ಬಹಳ ಮುಖ್ಯ. ನೀವು ವಾಸಿಸುವ ಸ್ಥಳದ ಭಾಷೆಯನ್ನು ಮಾತನಾಡಿದರೆ, ಆ ಸ್ಥಳದ ಜನರ ಪ್ರೀತಿ ಮತ್ತು ಗೌರವ ಹತ್ತು ಪಟ್ಟು ಹೆಚ್ಚಾಗುತ್ತದೆ. ನಾನು ಯಾವಾಗಲೂ ನನ್ನ ಮನೆಯಲ್ಲಿ ನನ್ನ ಸಿಬ್ಬಂದಿಗೆ ಮರಾಠಿ ಮಾತನಾಡುತ್ತೇನೆ. ಆದರೆ ಯಾರೂ ಭಾಷೆಯನ್ನು ಕಲಿಯಲು ಒತ್ತಾಯಿಸಬಾರದು ಅಥವಾ ಅವರನ್ನು ಮಾತನಾಡುವಂತೆ ಒತ್ತಾಯಿಸಬಾರದು ಎಂಬುದು ನಿಜ. ನಿಮ್ಮ ಸ್ವಂತ ಮಗುವನ್ನು ಸಹ ಏನನ್ನಾದರೂ ಕಲಿಯುವಂತೆ ನೀವು ಒತ್ತಾಯಿಸಲು ಸಾಧ್ಯವಿಲ್ಲ. ಹಾಗಾದರೆ ನೀವು ಬೇರೆಯವರನ್ನು ಅದನ್ನು ಮಾಡಲು ಹೇಗೆ ಒತ್ತಾಯಿಸಬಹುದು’ ಎಂಬುದು ಸುನಿಲ್ ಪ್ರಶ್ನೆ.
ಸುನಿಲ್ ಶೆಟ್ಟಿ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಹಿಂಸೆ ಮತ್ತು ಬಲವಂತವನ್ನು ದೃಢವಾಗಿ ತಿರಸ್ಕರಿಸುವ ಜೊತೆಗೆ ಭಾಷೆಯ ಬಗ್ಗೆ ಗೌರವ ಮತ್ತು ಪ್ರೀತಿಯ ಸಂದೇಶವನ್ನು ರವಾನಿಸುವ ಅವರ ನಿಲುವನ್ನು ಪ್ರಶಂಸಿಸಲಾಗುತ್ತಿದೆ.
ಇದನ್ನೂ ಓದಿ: ‘ಇಷ್ಟೊಂದು ಕೆಟ್ಟ ಮಿಮಿಕ್ರಿ ನಾನು ಎಲ್ಲಿಯೂ ನೋಡಿಲ್ಲ’; ಸುನಿಲ್ ಶೆಟ್ಟಿ ಕೋಪಗೊಂಡಿದ್ದು ಯಾರ ಮೇಲೆ?
ಸುನಿಲ್ ಶೆಟ್ಟಿ ಅವರ ಕೆಲಸದ ಬಗ್ಗೆ
ಸುನಿಲ್ ಶೆಟ್ಟಿ ಅವರ ಕೆಲಸದ ಬಗ್ಗೆ ಹೇಳುವುದಾದರೆ, ಅವರು ತುಳು ಚಿತ್ರ ‘ಜೈ’ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ರೂಪೇಶ್ ಶೆಟ್ಟಿ ನಿರ್ದೇಶನ ಇದೆ.ಅಲ್ಲದೆ, ಅವರು ‘ಕೇಸರಿ ವೀರ್’ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.‘ಹೇರಾ ಫೇರಿ 3’ ಸಿನಿಮಾದಲ್ಲೂ ಅವರು ನಟಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



