ಸಿನಿಮಾ ಸೆಟ್ನಲ್ಲಿ ಸೂರ್ಯಗೆ ಗಾಯ, ಚಿತ್ರೀಕರಣ ಮುಂದೂಡಿಕೆ
Suriya: ಚಿತ್ರೀಕರಣ ಸೆಟ್ನಲ್ಲಿ ನಡೆದ ಅವಘಡದಿಂದಾಗಿ ನಟ ಸೂರ್ಯಗೆ ಗಾಯವಾಗಿದ್ದು ಸಿನಿಮಾ ಚಿತ್ರೀಕರಣಕ್ಕೆ ವಿರಾಮ ನೀಡಲಾಗಿದೆ.

ತಮಿಳಿನ ಸ್ಟಾರ್ ನಟ ಸೂರ್ಯ (Suriya) ನಟಿಸುತ್ತಿರುವ ಭಾರಿ ಬಜೆಟ್ನ ಸಿನಿಮಾದ ಚಿತ್ರೀಕರಣ (Shooting) ಸೆಟ್ನಲ್ಲಿ ಸಣ್ಣ ಅವಘಡ ಸಂಭವಿಸಿದ್ದು ನಟ ಸೂರ್ಯಗೆ ಗಾಯವಾಗಿದೆ. ಇದೇ ಕಾರಣಕ್ಕೆ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಿ ಕೆಲ ಕಾಲ ಚಿತ್ರೀಕರಣ ಮುಂದೂಡಲಾಗಿದೆ. ಸೂರ್ಯಗೆ ಗಾಯವಾಗಿರುವ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಸೂರ್ಯಗೆ ಆಗಿರುವುದು ಸಣ್ಣ ಗಾಯವಷ್ಟೆ ಎನ್ನಲಾಗಿದೆ.
ಆಗಿರುವುದಿಷ್ಟು, ‘ಕಂಗುವ’ ಹೆಸರಿನ ಭಾರಿ ಬಜೆಟ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕಾಗಿ ಫೈಟ್ ದೃಶ್ಯದ ಚಿತ್ರೀಕರಣ ನಡೆಸಲಾಗುತ್ತಿತ್ತು. ಅದ್ಧೂರಿ ಸೆಟ್ನಲ್ಲಿ ಈ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಸಲಾಗುತ್ತಿತ್ತು. ಚಿತ್ರೀಕರಣಕ್ಕಾಗಿ ದೊಡ್ಡ ಕ್ಯಾಮೆರಾವನ್ನು ರೋಪ್ಗೆ ಕೆಟ್ಟಿ ಮೇಲೆತ್ತಲಾಗಿತ್ತು. ಆ ರೋಪ್ ತುಂಡಾಗಿ ಕ್ಯಾಮೆರಾ ಸೂರ್ಯ ಮೇಲೆ ಬಿದ್ದಿದೆ ಎನ್ನಲಾಗುತ್ತಿದೆ.
ಕ್ಯಾಮೆರಾ ಸೂರ್ಯರ ಭುಜದ ಮೇಲೆ ಬಿದ್ದ ಕಾರಣ ಭುಜಕ್ಕೆ ಸಣ್ಣದಾಗಿ ಪೆಟ್ಟಾಗಿದೆ. ಘಟನೆ ನಡೆದ ಕೂಡಲೇ ಸೂರ್ಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆಗಿರುವುದು ಸಣ್ಣ ಗಾಯವಾದರೂ ಸೂರ್ಯಗೆ ವಿಶ್ರಾಂತಿಗೆ ಸಮಯ ನೀಡುವ ಕಾರಣಕ್ಕೆ ಕೆಲ ದಿನಗಳ ಕಾಲ ಚಿತ್ರೀಕರಣವನ್ನು ಮುಂದೂಡಲಾಗಿದೆ.
ಇದನ್ನೂ ಓದಿ:ಸೂರ್ಯ ಮುಂದಿನ ಸಿನಿಮಾ 38 ಭಾಷೆಗಳಲ್ಲಿ ಬಿಡುಗಡೆ: ನಿರ್ಮಾಪಕ
ಸೂರ್ಯ ನಟಿಸುತ್ತಿರುವ ‘ಕಂಗುವ’ ಸಿನಿಮಾ ಭಾರತದ ಈ ವರೆಗಿನ ಭಾರಿ ಬಜೆಟ್ ಸಿನಿಮಾಗಳಲ್ಲಿ ಒಂದು ಎನ್ನಲಾಗುತ್ತಿದೆ. ಪುರಾತನ ಕಾಲದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಫ್ಯಾಂಟಸಿ ಕತೆಯುಳ್ಳ ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ವಿಶೇಷವೆಂದರೆ ಸಿನಿಮಾದಲ್ಲಿ ಸೂರ್ಯ ಬರೋಬ್ಬರಿ ಆರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಸೂರ್ಯ ಎದುರು ನಾಯಕಿಯಾಗಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್.
‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಲಾಗಿದೆ. ಸಿನಿಮಾದ ನಿರ್ಮಾಪಕರು ಈಗಾಗಲೇ ಹೇಳಿರುವಂತೆ, ಈ ಸಿನಿಮಾವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
‘ಕಂಗುವ’ ಮಾತ್ರವೇ ಅಲ್ಲದೆ ಸೂರ್ಯ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವೆಟ್ರಿಮಾರನ್ ನಿರ್ದೇಶನದ ‘ವಡಿವಾಸಲ್’ ಸಿನಿಮಾದಲ್ಲಿ ಸೂರ್ಯ ನಟಿಸಲಿದ್ದಾರೆ. ಈ ಸಿನಿಮಾದ ಘೋಷಣೆ ಆಗಿ ಬಹಳ ದಿನಗಳಾಗಿವೆ ಆದರೆ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ