ವಿವಾದಿತ ಬಿಸ್ಕೆಟ್ ಕಿಂಗ್ ಪಾತ್ರದಲ್ಲಿ ಸೂರ್ಯ, ಮಲಯಾಳಂ ಸ್ಟಾರ್ ನಟನ ನಿರ್ದೇಶನ
ಕೇರಳ ಮೂಲದ ವಿವಾದಿತ ಉದ್ಯಮಿ, ಬಿಸ್ಕೆಟ್ ಕಿಂಗ್ ರಾಜನ್ ಪಿಳ್ಳೈ ಜೀವನವನ್ನು ಸಿನಿಮಾ ಮಾಡಲು ಪೃಥ್ವಿರಾಜ್ ಸುಕುಮಾರನ್ ಮುಂದಾಗಿದ್ದು, ಬಿಸ್ಕೆಟ್ ಕಿಂಗ್ ಪಾತ್ರದಲ್ಲಿ ನಟ ಸೂರ್ಯ ನಟಿಸಲಿದ್ದಾರೆ.

ಒಬ್ಬ ಸ್ಟಾರ್ ನಟನ ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ನಟ ಆಕ್ಷನ್ ಕಟ್ ಹೇಳಿರುವ ಉದಾಹರಣೆಗಳು ಕೆಲವು ಇವೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಇಂಥಹಾ ‘ಪ್ರತಿಭಾ ಸಂಗಮ’ ತುಸು ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಇಂಥಹುದೇ ಘಟನೆ ಘಟಿಸಲಿಕ್ಕೆ ವೇದಿಕೆ ಸಜ್ಜಾಗಿದೆ. ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಆಕ್ಷನ್ ಕಟ್ ಹೇಳಲಿದ್ದಾರೆ.
ಮಾಸ್ ಇಮೇಜು, ದೊಡ್ಡ ಅಭಿಮಾನಿ ವರ್ಗ ಇದ್ದಾಗಿಯೂ ತಮ್ಮನ್ನು ತಾವು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಅವುಗಳಲ್ಲಿ ಗೆಲ್ಲುತ್ತಾ ಸಾಗುತ್ತಿರುವ ತಮಿಳಿನ ನಟ ಸೂರ್ಯ (Suriya), ತಮ್ಮಂತೆ ಭಿನ್ನ ಸಿನಿಮಾಗಳನ್ನು ಮಾಡುತ್ತಾ ಬರುತ್ತಿರುವ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ (Pruthviraj Sukumaran) ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಪೃಥ್ವಿರಾಜ್ ಸುಕುಮಾರ್ ಒಳ್ಳೆಯ ನಟರಾಗಿರುವ ಜೊತೆಗೆ ಒಳ್ಳೆಯ ನಿರ್ದೇಶಕರೂ ಹೌದು. ಮೋಹನ್ಲಾಲ್ ನಟನೆಯ ‘ಲುಸಿಫರ್’ ಸಿನಿಮಾ ಮೂಲಕ ದೊಡ್ಡ ಹಿಟ್ ಕೊಟ್ಟಿರುವ ಸುಕುಮಾರನ್ ಆ ಬಳಿಕ ‘ಬ್ರೋ ಡ್ಯಾಡಿ’ ಸಿನಿಮಾ ಮೂಲಕ ಒಂದೊಳ್ಳೆ ಹಾಸ್ಯ ಸಿನಿಮಾ ನೀಡಿದರು. ಈಗ ‘ಲುಸಿಫರ್ 2’ ಹಾಗೂ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆಗಾಗಿ ‘ಟೈಸನ್’ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವುಗಳ ಬಳಿಕ ಸೂರ್ಯ ಗಾಗಿ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಕೇರಳ ಮೂಲದ ವಿವಾದಿತ ಉದ್ಯಮಿ, ಬಿಸ್ಕೆಟ್ ಕಿಂಗ್, ರಾಜನ್ ಪಿಳ್ಳೈ ಜೀವನವನ್ನು ಸಿನಿಮಾ ಮಾಡಲು ಪೃಥ್ವಿರಾಜ್ ಸುಕುಮಾರನ್ ಮುಂದಾಗಿದ್ದು, ಬಿಸ್ಕೆಟ್ ಕಿಂಗ್ ರಾಜನ್ ಪಾತ್ರದಲ್ಲಿ ಸೂರ್ಯ ನಟಿಸಲಿದ್ದಾರೆ.
ಬಿಸ್ಕೆಟ್ ಕಿಂಗ್ ರಾಜನ್ ಪಿಳ್ಳೈ ಜೀವನ ವೆಬ್ ಸರಣಿ ಆಗಲಿದೆ, ರಾಜನ್ ಪಿಳ್ಳೈ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಸಲಿಗೆ, ರಾಜನ್ ಪಿಳ್ಳೈ ಪಾತ್ರದಲ್ಲಿ ಸೂರ್ಯ ನಟಿಸಲಿದ್ದು, ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಲಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಪೃಥ್ವಿರಾಜ್ ಸುಕುಮಾರನ್ ಹಾಗೂ ಅವರ ಪತ್ನಿ ಸುಪ್ರಿಯಾ, ನಟ ಸೂರ್ಯ ಹಾಗೂ ಅವರ ಪತ್ನಿ, ನಟಿ ಜ್ಯೋತಿಕ ಅವರನ್ನು ಭೇಟಿಯಾಗಿ ಒಟ್ಟಿಗೆ ಸಮಯ ಕಳೆದಿದ್ದರು. ಇಬ್ಬರೂ ಸಿನಿಮಾ ಮಾಡುವುದು ಪಕ್ಕಾ ಆದಮೇಲೆ ಈ ಭೇಟಿ ನಡೆದಿತ್ತು ಎನ್ನಲಾಗುತ್ತಿದೆ.
ನಟ ಸೂರ್ಯ ಪ್ರಸ್ತುತ, ವೆಟ್ರಿಮಾರನ್ ನಿರ್ದೇಶನದ ‘ವಡಿವಾಸಲ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಶಿವಕುಮಾರ್ ಜಯ ನಿರ್ದೇಶನದ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇನ್ನು ನಟ ಪೃಥ್ವಿರಾಜ್ ಸುಕುಮಾರನ್, ‘ಲುಸಿಫರ್ 2’ ಹಾಗೂ ‘ಟೈಸನ್’ ಸಿನಿಮಾ ನಿರ್ದೇಶನ ಮಾಡುವ ಜೊತೆಗೆ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹಿಂದಿಯ ‘ಬಡೇ ಮಿಯ ಚೋಟೆ ಮಿಯಾ’, ಮಲಯಾಳಂನ ‘ಆಡುಜೀವಿತಂ’, ‘ವಿಲಾಯತ್ ಬುದ್ದ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.




