Prithviraj Sukumaran: ‘ನನ್ನಿಂದ ತಪ್ಪಾಗಿದೆ, ಒಪ್ಪಿಕೊಳ್ತೀನಿ, ದಯವಿಟ್ಟು ಕ್ಷಮಿಸಿ’: ಬಹಿರಂಗವಾಗಿ ಕ್ಷಮೆ ಕೇಳಿದ ಪೃಥ್ವಿರಾಜ್ ಸುಕುಮಾರನ್
Kaduva | Prithviraj Sukumaran: ‘ಕಡುವ’ ಚಿತ್ರದ ಒಂದು ದೃಶ್ಯಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ. ನಿರ್ದೇಶಕ ಶಾಜಿ ಕೈಲಾಸ್ ಮತ್ತು ನಟ ಪೃಥ್ವಿರಾಜ್ ಸುಕುಮಾರನ್ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರ ಸುತ್ತ ವಿವಾದವೊಂದು ಸುತ್ತಿಕೊಂಡಿದೆ. ಅವರ ಹೊಸ ಸಿನಿಮಾದಲ್ಲಿ ಅಂಗವಿಕಲ ಮಕ್ಕಳ ಪೋಷಕರಿಗೆ ಅವಮಾನ ಆಗಿದೆ ಎಂಬ ಆರೋಪ ಎದುರಾಗಿದೆ. ಇದನ್ನು ಸ್ವತಃ ಪೃಥ್ವಿರಾಜ್ ಸುಕುಮಾರನ್ ಕೂಡ ಒಪ್ಪಿಕೊಂಡು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ತಪ್ಪು ಒಪ್ಪಿಕೊಂಡ ಅವರ ನಡೆಗೆ ಅನೇಕರು ಭೇಷ್ ಎನ್ನುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ ವೈರಲ್ ಆಗುತ್ತಿದೆ. ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಕಡುವ’ ಸಿನಿಮಾ (Kaduva) ಇತ್ತೀಚೆಗಷ್ಟೇ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿನ ಒಂದು ದೃಶ್ಯದ ಬಗ್ಗೆ ಅಂಗವಿಕಲ ಮಕ್ಕಳ (Differently Abled Children) ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಚಿತ್ರತಂಡದವರು ಕ್ಷಮೆ ಕೇಳಿದ್ದಾರೆ.
ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಗುರುತಿಸಿಕೊಂಡ ಖ್ಯಾತಿ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಇದೆ. ಹಾಗಾಗಿ ಅವರ ಮೇಲೆ ಅಭಿಮಾನಿಗಳು ಹೆಚ್ಚು ಭರವಸೆ ಇಟ್ಟುಕೊಂಡಿರುತ್ತಾರೆ. ಅಂಥ ನಟನಿಂದ ಈ ರೀತಿ ಪ್ರಮಾದ ಆಗಿರುವುದು ಎಲ್ಲರಿಗೂ ಬೇಸರ ಆಗಿದೆ. ‘ತಂದೆ-ತಾಯಿ ಮಾಡಿದ ತಪ್ಪಿನಿಂದಲೇ ಅಂಗವಿಕಲ ಮಕ್ಕಳು ಜನಿಸುತ್ತಾರೆ’ ಎಂಬರ್ಥದ ಡೈಲಾಗ್ ಅನ್ನು ಪೃಥ್ವಿರಾಜ್ ಸುಕುಮಾರ್ ಅವರು ‘ಕಡುವ’ ಸಿನಿಮಾದಲ್ಲಿ ಹೇಳಿದ್ದಾರೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಅಂಕವಿಕಲ ಮಕ್ಕಳ ಪೋಷಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಕಡುವ’ ಚಿತ್ರದ ನಿರ್ದೇಶಕ ಶಾಜಿ ಕೈಲಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ‘ಅಂಗವಿಕಲ ಮಕ್ಕಳ ಪೋಷಕರ ನೋವು ಏನು ಎಂಬುದು ನನಗೆ ಅರ್ಥ ಆಗುತ್ತದೆ. ನಮ್ಮಿಂದ ಆದ ತಪ್ಪಿಗೆ ಕ್ಷಮೆ ಕೇಳುತ್ತೇನೆ’ ಎಂದು ಪೋಸ್ಟ್ ಮಾಡಿರುವ ಅವರು ಸೂಕ್ತ ವಿವರಣೆಯನ್ನು ನೀಡಿದ್ದಾರೆ. ಅವರ ಪೋಸ್ಟ್ ಶೇರ್ ಮಾಡಿರುವ ಪೃಥ್ವಿರಾಜ್ ಸುಕುಮಾರನ್ ಅವರು ‘ಕ್ಷಮಿಸಿ.. ನನ್ನಿಂದ ತಪ್ಪಾಗಿದೆ. ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ಅವರ ಹೋಮ್ ಬ್ಯಾನರ್ ಮೂಲಕವೇ ‘ಕಡುವ’ ಸಿನಿಮಾ ನಿರ್ಮಾಣ ಆಗಿದೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಂಯುಕ್ತಾ ಮೆನನ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಜುಲೈ 7ರಂದು ಬಿಡುಗಡೆ ಆಗಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.