ಸುಶಾಂತ್ ಸಿಂಗ್ ರಜಪೂತ್ ಬಯೋಪಿಕ್ಗೆ ವಿಘ್ನ; ಅಡ್ಡಗಾಲು ಹಾಕಿದ ನಟನ ತಂದೆ
ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಸಿನಿಮಾ ಮಾಡಲು ಸಕಲ ತಯಾರಿ ನಡೆದಿತ್ತು. ಆದರೆ ಈಗ ಸುಶಾಂತ್ ತಂದೆ ತಕರಾರು ತೆಗೆದಿರುವುದರಿಂದ ಆ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕುವುದು ಅನಿವಾರ್ಯ ಆಗಿದೆ.
2020ರ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾದರು. ಅಂದಿನಿಂದ ಇಂದಿನವರೆಗೂ ಅವರ ಸಾವಿನ ರಹಸ್ಯ ಬಯಲಾಗಿಲ್ಲ. ಕೆಲವರು ಅದನ್ನು ಕೊಲೆ ಎನ್ನುತ್ತಾರೆ. ಮತ್ತೆ ಕೆಲವರು ಆತ್ಮಹತ್ಯೆ ಎನ್ನುತ್ತಾರೆ. ಸಿಬಿಐ ಅಧಿಕಾರಿಗಳ ತನಿಖೆ ಇನ್ನೂ ಜಾರಿಯಲ್ಲಿದೆ. ಸುಶಾಂತ್ ನಿಧನಕ್ಕೆ ಅಸಲಿ ಕಾರಣ ಏನು ಎಂಬುದು ಗೊತ್ತಾಗುವುದಕ್ಕಿಂತಲೂ ಮುನ್ನವೇ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಅನೇಕರು ಮುಂದೆ ಬಂದಿದ್ದರು. ಆದರೆ ಅವರಿಗೆಲ್ಲ ಸುಶಾಂತ್ ಸಿಂಗ್ ರಜಪೂತ್ ತಂದೆ ಅಡ್ಡಗಾಲು ಹಾಕಿದ್ದಾರೆ.
ಸುಶಾಂತ್ ಜೀವನವನ್ನು ಆಧರಿಸಿ ಸಿನಿಮಾ ಮಾಡಿದರೆ ತಮ್ಮ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ. ಹಾಗಾಗಿ ಈ ಬಯೋಪಿಕ್ ಮಾಡಲು ಯಾರಿಗೂ ಅವಕಾಶ ನೀಡಬಾರದು. ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ವಿನಂತಿಸಿ ದೆಹಲಿ ಹೈಕೋರ್ಟ್ಗೆ ಸುಶಾಂತ್ ತಂದೆ ಕೆ.ಕೆ. ಸಿಂಗ್ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯವು ಆದೇಶ ಹೊರಡಿಸಿದೆ. ಸೂಕ್ತ ಅನುಮತಿ ಪಡೆಯದೇ ಸುಶಾಂತ್ ಜೀವನದ ಬಗ್ಗೆ ಸಿನಿಮಾ ಮಾಡಿದರೆ ಅದು ಖಾಸಗಿತನದ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ನಿರ್ಮಾಪಕರಿಗೆ ನೋಟಿಸ್ ನೀಡಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ನಿಧನರಾದ ಕೆಲವೇ ದಿನಗಳ ಬಳಿಕ ಕೆಲವರು ಅವರ ಬದುಕನ್ನು ಆಧರಿಸಿ ಸಿನಿಮಾ ಮಾಡುವುದಾಗಿ ಘೋಷಿಸಿಕೊಂಡರು. ‘ನ್ಯಾಯ್: ದ ಜಸ್ಟೀಸ್’, ‘ಸೂಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್’ ಹಾಗೂ ‘ಶಶಾಂಕ್’ ಎಂಬ ಸಿನಿಮಾಗಳ ಶೀರ್ಷಿಕೆಗಳು ನೋಂದಣಿ ಆಗಿದ್ದವು. ಸಿನಿಮಾ ಮಾಡಲು ಸಕಲ ತಯಾರಿ ನಡೆದಿತ್ತು. ಆದರೆ ಈಗ ಸುಶಾಂತ್ ಸಿಂಗ್ ರಜಪೂತ್ ತಂದೆ ತಕರಾರು ತೆಗೆದಿರುವುದರಿಂದ ಆ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕುವುದು ಅನಿವಾರ್ಯ ಆಗಿದೆ.
ಬಾಲಿವುಡ್ನಲ್ಲಿ ಬಾಳಿ ಬದುಕಬೇಕಾಗಿದ್ದ ನಟ ಸುಶಾಂತ್ ಅವರು 2020ರ ಜೂನ್ 14ರಂದು ನಿಧನರಾದರು. ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಯಿತು. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಎಲ್ಲರ ಅನುಮಾನದ ದೃಷ್ಟಿ ಹರಿದಿದೆ. ಸಿಬಿಐ ವರದಿ ಸಲ್ಲಿಕೆ ಆದ ಬಳಿಕವೇ ಈ ಸಾವಿನ ಹಿಂದಿನ ಸತ್ಯ ಏನು ಎಂಬುದು ಬಹಿರಂಗ ಆಗಬೇಕಿದೆ. ಈ ಪ್ರಕರಣವನ್ನು ತನಿಖೆ ಮಾಡುತ್ತಿರುವಾಗಲೇ ಬಾಲಿವುಡ್ನಲ್ಲಿ ಅಡಗಿದ್ದ ಡ್ರಗ್ಸ್ ಜಾಲ ಕೂಡ ಬೆಳಕಿಗೆ ಬಂತು. ಹಿಂದಿ ಚಿತ್ರರಂಗದ ಅನೇಕರ ಮೇಲೆ ಮಾದಕ ವಸ್ತು ಸೇವನೆ ಆರೋಪ ಕೇಳಿಬಂದಿದ್ದು, ತನಿಖೆ ಜಾರಿಯಲ್ಲಿದೆ.
ಇದನ್ನೂ ಓದಿ: ಸುಶಾಂತ್ ಸಾವಿನ ವಿಚಾರದಲ್ಲಿ ಕಂಗನಾ ರಣಾವತ್ ಮುಖವಾಡ ಬಯಲು; ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಸುಶಾಂತ್ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ