ಸುಶಾಂತ್ ಸಿಂಗ್ ರಜಪೂತ್ ಬಯೋಪಿಕ್​ಗೆ ವಿಘ್ನ; ಅಡ್ಡಗಾಲು ಹಾಕಿದ ನಟನ ತಂದೆ

ಸುಶಾಂತ್​ ಸಿಂಗ್​ ರಜಪೂತ್​ ಜೀವನಾಧಾರಿತ ಸಿನಿಮಾ ಮಾಡಲು ಸಕಲ ತಯಾರಿ ನಡೆದಿತ್ತು. ಆದರೆ ಈಗ ಸುಶಾಂತ್​​ ತಂದೆ ತಕರಾರು ತೆಗೆದಿರುವುದರಿಂದ ಆ ಸಿನಿಮಾ ಕೆಲಸಗಳಿಗೆ ಬ್ರೇಕ್​ ಹಾಕುವುದು ಅನಿವಾರ್ಯ ಆಗಿದೆ.

ಸುಶಾಂತ್ ಸಿಂಗ್ ರಜಪೂತ್ ಬಯೋಪಿಕ್​ಗೆ ವಿಘ್ನ; ಅಡ್ಡಗಾಲು ಹಾಕಿದ ನಟನ ತಂದೆ
ಸುಶಾಂತ್​ ಸಿಂಗ್​ ರಜಪೂತ್​

Updated on: Apr 20, 2021 | 3:07 PM

2020ರ ಜೂನ್​ 14ರಂದು ನಟ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದರು. ಅಂದಿನಿಂದ ಇಂದಿನವರೆಗೂ ಅವರ ಸಾವಿನ ರಹಸ್ಯ ಬಯಲಾಗಿಲ್ಲ. ಕೆಲವರು ಅದನ್ನು ಕೊಲೆ ಎನ್ನುತ್ತಾರೆ. ಮತ್ತೆ ಕೆಲವರು ಆತ್ಮಹತ್ಯೆ ಎನ್ನುತ್ತಾರೆ. ಸಿಬಿಐ ಅಧಿಕಾರಿಗಳ ತನಿಖೆ ಇನ್ನೂ ಜಾರಿಯಲ್ಲಿದೆ. ಸುಶಾಂತ್​ ನಿಧನಕ್ಕೆ ಅಸಲಿ ಕಾರಣ ಏನು ಎಂಬುದು ಗೊತ್ತಾಗುವುದಕ್ಕಿಂತಲೂ ಮುನ್ನವೇ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಅನೇಕರು ಮುಂದೆ ಬಂದಿದ್ದರು. ಆದರೆ ಅವರಿಗೆಲ್ಲ ಸುಶಾಂತ್​ ಸಿಂಗ್​ ರಜಪೂತ್​ ತಂದೆ ಅಡ್ಡಗಾಲು ಹಾಕಿದ್ದಾರೆ.

ಸುಶಾಂತ್ ಜೀವನವನ್ನು ಆಧರಿಸಿ ಸಿನಿಮಾ ಮಾಡಿದರೆ ತಮ್ಮ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ. ಹಾಗಾಗಿ ಈ ಬಯೋಪಿಕ್ ಮಾಡಲು ಯಾರಿಗೂ ಅವಕಾಶ ನೀಡಬಾರದು. ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂದು ವಿನಂತಿಸಿ ದೆಹಲಿ ಹೈಕೋರ್ಟ್​ಗೆ ಸುಶಾಂತ್​ ತಂದೆ ಕೆ.ಕೆ. ಸಿಂಗ್​ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯವು ಆದೇಶ ಹೊರಡಿಸಿದೆ. ಸೂಕ್ತ ಅನುಮತಿ ಪಡೆಯದೇ ಸುಶಾಂತ್​ ಜೀವನದ ಬಗ್ಗೆ ಸಿನಿಮಾ ಮಾಡಿದರೆ ಅದು ಖಾಸಗಿತನದ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ನಿರ್ಮಾಪಕರಿಗೆ ನೋಟಿಸ್​ ನೀಡಲಾಗಿದೆ.

ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದ ಕೆಲವೇ ದಿನಗಳ ಬಳಿಕ ಕೆಲವರು ಅವರ ಬದುಕನ್ನು ಆಧರಿಸಿ ಸಿನಿಮಾ ಮಾಡುವುದಾಗಿ ಘೋಷಿಸಿಕೊಂಡರು. ‘ನ್ಯಾಯ್​: ದ ಜಸ್ಟೀಸ್​’, ‘ಸೂಸೈಡ್​ ಆರ್​ ಮರ್ಡರ್​: ಎ ಸ್ಟಾರ್​ ವಾಸ್​ ಲಾಸ್ಟ್​’ ಹಾಗೂ ‘ಶಶಾಂಕ್​’ ಎಂಬ ಸಿನಿಮಾಗಳ ಶೀರ್ಷಿಕೆಗಳು ನೋಂದಣಿ ಆಗಿದ್ದವು. ಸಿನಿಮಾ ಮಾಡಲು ಸಕಲ ತಯಾರಿ ನಡೆದಿತ್ತು. ಆದರೆ ಈಗ ಸುಶಾಂತ್​ ಸಿಂಗ್​ ರಜಪೂತ್​ ತಂದೆ ತಕರಾರು ತೆಗೆದಿರುವುದರಿಂದ ಆ ಸಿನಿಮಾ ಕೆಲಸಗಳಿಗೆ ಬ್ರೇಕ್​ ಹಾಕುವುದು ಅನಿವಾರ್ಯ ಆಗಿದೆ.

ಬಾಲಿವುಡ್​ನಲ್ಲಿ ಬಾಳಿ ಬದುಕಬೇಕಾಗಿದ್ದ ನಟ ಸುಶಾಂತ್​ ಅವರು 2020ರ ಜೂನ್​ 14ರಂದು ನಿಧನರಾದರು. ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಯಿತು. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಎಲ್ಲರ ಅನುಮಾನದ ದೃಷ್ಟಿ ಹರಿದಿದೆ. ಸಿಬಿಐ ವರದಿ ಸಲ್ಲಿಕೆ ಆದ ಬಳಿಕವೇ ಈ ಸಾವಿನ ಹಿಂದಿನ ಸತ್ಯ ಏನು ಎಂಬುದು ಬಹಿರಂಗ ಆಗಬೇಕಿದೆ. ಈ ಪ್ರಕರಣವನ್ನು ತನಿಖೆ ಮಾಡುತ್ತಿರುವಾಗಲೇ ಬಾಲಿವುಡ್​ನಲ್ಲಿ ಅಡಗಿದ್ದ ಡ್ರಗ್ಸ್​ ಜಾಲ ಕೂಡ ಬೆಳಕಿಗೆ ಬಂತು. ಹಿಂದಿ ಚಿತ್ರರಂಗದ ಅನೇಕರ ಮೇಲೆ ಮಾದಕ ವಸ್ತು ಸೇವನೆ ಆರೋಪ ಕೇಳಿಬಂದಿದ್ದು, ತನಿಖೆ ಜಾರಿಯಲ್ಲಿದೆ.

ಇದನ್ನೂ ಓದಿ: ಸುಶಾಂತ್​ ಸಾವಿನ ವಿಚಾರದಲ್ಲಿ ಕಂಗನಾ ರಣಾವತ್​ ಮುಖವಾಡ ಬಯಲು; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us