ತೆಗಳಿದವರಿಂದಲೇ ಸನ್ಮಾನ, ಅಲ್ಲು ಅರ್ಜುನ್ಗೆ ಪ್ರಶಸ್ತಿ ಘೋಷಿಸಿದ ತೆಲಂಗಾಣ ಸರ್ಕಾರ
Allu Arjun: ನಟ ಅಲ್ಲು ಅರ್ಜುನ್ಗೆ ಅವಮಾನ ಮಾಡಿದವರೇ ಈಗ ಸನ್ಮಾನ ಮಾಡಲು ಮುಂದಾಗಿದ್ದಾರೆ. ‘ಪುಷ್ಪ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಡೆದ ಘಟನೆಗಳಲ್ಲಿ ತೆಲಂಗಾಣ ಸರ್ಕಾರ, ಅಲ್ಲು ಅರ್ಜುನ್ ವಿರುದ್ಧ ದ್ವೇಷ ಸಾಧಿಸಿತ್ತು, ಸಾಕಷ್ಟು ಸಮಸ್ಯೆಗಳನ್ನು ಮಾಡಿತ್ತು. ಆದರೆ ಈಗ ತೆಲಂಗಾಣ ಸರ್ಕಾರವೇ ಅಲ್ಲು ಅರ್ಜುನ್ಗೆ ಪ್ರಶಸ್ತಿ ಘೋಷಣೆ ಮಾಡಿದೆ.

ತೆಗಳಿದವರಿಂದಲೇ ಸನ್ಮಾನ ಪಡೆದುಕೊಂಡಿದ್ದಾರೆ ನಟ ಅಲ್ಲು ಅರ್ಜುನ್ (Allu Arjun). ‘ಪುಷ್ಪ 2’ ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಸರ್ಕಾರದ ಸಚಿವರಾದಿಯಾಗಿ ಸ್ವತಃ ಸಿಎಂ ರೇವಂತ್ ರೆಡ್ಡಿ ಋಣಾತ್ಮಕವಾಗಿ ಮಾತನಾಡಿದ್ದರು. ಆಡಳಿತ ಸರ್ಕಾರದ ಕಾರ್ಯಕರ್ತರು ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ಪೊಲೀಸ್ ಬಲ ಬಳಸಿ ಅಲ್ಲು ಅರ್ಜುನ್ ಅವರನ್ನು ಒಂದು ದಿನ ಜೈಲಿಗೆ ಸಹ ಕಳಿಸಲಾಗಿತ್ತು. ಆದರೆ ಇದೀಗ ತೆಗಳಿದವರಿಂದಲೇ ಸನ್ಮಾನಿತರಾಗುತ್ತಿದ್ದಾರೆ ಅಲ್ಲು ಅರ್ಜುನ್.
ತೆಲಂಗಾಣ ಸರ್ಕಾರ 14 ವರ್ಷಗಳ ಬಳಿಕ ಗದ್ದರ್ ಪ್ರಶಸ್ತಿಯನ್ನು ಈ ವರ್ಷ ಘೋಷಣೆ ಮಾಡಿದೆ. ಎಲ್ಲರಿಗೂ ಅಚ್ಚರಿ ತರುವಂತೆ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಮಾಡಿದೆ. ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಹಲವರು ಟೀಕೆಗಳನ್ನು ಮಾಡಿದ್ದರು. ಕೆಲ ಸಚಿವರಂತೂ ಬೆದರಿಕೆಗಳನ್ನು ಸಹ ಹಾಕಿದ್ದರು. ಆದರೆ ಅಲ್ಲು ಅರ್ಜುನ್, ಎಲ್ಲವನ್ನೂ ಶಾಂತಚಿತ್ತವಾಗಿ ಎದುರಿಸಿದ್ದರು. ಇದೀಗ ತೆಲಂಗಾಣ ಸರ್ಕಾರ, ಅಲ್ಲು ಅರ್ಜುನ್ಗೆ ಪ್ರಮುಖ ಪ್ರಶಸ್ತಿ ಘೋಷಿಸುವ ಮೂಲಕ ಸಂಧಾನಕ್ಕೆ ಮುಂದಾಯ್ತೆ ಎಂಬ ಅನುಮಾನ ಮೂಡಿದೆ.
‘ಪುಷ್ಪ 2’ ಸಿನಿಮಾದ ಅತ್ಯುತ್ತಮ ನಟನೆಗೆ ಅಲ್ಲು ಅರ್ಜುನ್ಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಪ್ರಶಸ್ತಿ ರೇಸ್ನಲ್ಲಿ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಸಹ ಇತ್ತು. ರೇವಂತ್ ರೆಡ್ಡಿ ಹಾಗೂ ಜೂ ಎನ್ಟಿಆರ್ ಬಹಳ ಆಪ್ತರು. ಹಾಗಿದ್ದರೂ ಸಹ ಅಲ್ಲು ಅರ್ಜುನ್ಗೆ ಪ್ರಶಸ್ತಿ ನೀಡಲಾಗಿದೆ. ಆ ಮೂಲಕ ಅಲ್ಲು ಅರ್ಜುನ್ ವಿರುದ್ಧ ಸರ್ಕಾರಕ್ಕೆ ವೈಯಕ್ತಿಕ ದ್ವೇಷ ಇಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದೆ.
ಇದನ್ನೂ ಓದಿ:ಪ್ರಭಾಸ್ ಸಿನಿಮಾ ಕೈಬಿಟ್ಟು, ಅಲ್ಲು ಅರ್ಜುನ್ ಸಿನಿಮಾ ಸೇರಿಕೊಂಡ ದೀಪಿಕಾ
‘ಪುಷ್ಪ 2’ ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಭೇಟಿ ನೀಡಿದ್ದರು. ಭಾರಿ ಜನ ಅಲ್ಲು ಅರ್ಜುನ್ ಅವರನ್ನು ಕಾಣಲು ಅಲ್ಲಿ ಸೇರಿದ ಕಾರಣಕ್ಕೆ ಕಾಲ್ತುಳಿತ ಉಂಟಾಗಿ, ಒಬ್ಬ ಮಹಿಳೆ ಹಾಗೂ ಆಕೆಯ ಮಗು ಸ್ಥಳದಲ್ಲೇ ಸಾವನ್ನಪ್ಪಿದರು. ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದ, ಆ ಬಾಲಕ ಈಗಲೂ ಕೋಮಾದಲ್ಲಿಯೇ ಇದ್ದಾನೆ. ಈ ಘಟನೆ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್, ಸಂಧ್ಯಾ ಚಿತ್ರಮಂದಿರದ ಮಾಲೀಕ, ಮ್ಯಾನೇಜರ್ ಅವರುಗಳನ್ನು ಬಂಧಿಸಿದ್ದರು. ಅಲ್ಲು ಅರ್ಜುನ್, ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದರು. ಆದರೆ ಒಂದು ರಾತ್ರಿ ಅವರು ಪೊಲೀಸ್ ಠಾಣೆಯಲ್ಲಿ ಕಳೆಯಬೇಕಾಯ್ತು.
ಈ ಘಟನೆ ಆದ ಬಳಿಕ ಸಿಎಂ ರೇವಂತ್ ರೆಡ್ಡಿ, ತೆಲಂಗಾಣ ವಿಧಾನಸಭೆಯಲ್ಲಿ ಈ ವಿಷಯ ಚರ್ಚಿಸಿ ಅಲ್ಲು ಅರ್ಜುನ್ ಅನ್ನು ಟೀಕೆ ಮಾಡಿದರು. ಆ ಬಳಿಕ ತೆಲಂಗಾಣ ಸರ್ಕಾರದ ಕೆಲವು ಸಚಿವರುಗಳು ಸಹ ಅಲ್ಲು ಅರ್ಜುನ್ ಅನ್ನು ಟೀಕೆ ಮಾಡಿದರು. ‘ಪುಷ್ಪ’ ಸಿನಿಮಾದ ನೆಗೆಟಿವ್ ಕತೆಯನ್ನು ಟೀಕೆ ಮಾಡಿದ್ದರು. ಬಳಿಕ ಅಲ್ಲು ಅರ್ಜುನ್ ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ಸ್ಪಷ್ಟನೆ ನೀಡಿದರು. ಆದರೆ ಆ ಬಳಿಕ ಆಡಳಿತ ಪಕ್ಷದ ಕೆಲ ಕಾರ್ಯಕರ್ತರು ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ ನಡೆಸಿ, ಹೂಕುಂಡಗಳನ್ನು ಒಡೆದು ಹಾಕಿದ್ದರು. ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಸರ್ಕಾರದ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತಾಗಿತ್ತು. ಈಗ ಅಲ್ಲು ಅರ್ಜುನ್ಗೆ ಪ್ರಶಸ್ತಿ ಘೋಷಿಸುವ ಮೂಲಕ ಸರ್ಕಾರಕ್ಕೆ ಅಲ್ಲು ಅರ್ಜುನ್ ವಿರುದ್ಧ ದ್ವೇಷ ಇಲ್ಲ ಎಂಬುದನ್ನು ತೋರಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




