ನಟ ಅನಿರುದ್ಧ್ (Anirudh Jatkar) ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಿದ್ದ ಅನಿರುದ್ಧ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು. ಆದರೆ ಕೆಲವೇ ತಿಂಗಳ ಹಿಂದೆ ಅವರು ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬರಬೇಕಾಯಿತು. ವಿಶೇಷ ಏನೆಂದರೆ ಅನಿರುದ್ಧ್ ಈಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಹಾಗಂತ ಅವರು ‘ಜೊತೆ ಜೊತೆಯಲಿ’ ಟೀಮ್ ಜೊತೆ ಸೇರಿಕೊಳ್ಳುತ್ತಿಲ್ಲ. ಉದಯ ವಾಹಿನಿಯ (Udaya Tv) ಹೊಸ ಧಾರಾವಾಹಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಸೀರಿಯಲ್ಗೆ ‘ಸೂರ್ಯವಂಶ’ (Sooryavamsha) ಎಂದು ಹೆಸರು ಇಡಲಾಗಿದೆ.
‘ಸೂರ್ಯವಂಶ’ ಎಂಬ ಹೆಸರು ಕೇಳಿದರೆ ವಿಷ್ಣುವರ್ಧನ್ ನೆನಪಾಗುತ್ತಾರೆ. ಈಗ ಅವರ ಅಳಿಯ ಅನಿರುದ್ಧ್ ಅವರ ಹೊಸ ಧಾರಾವಾಹಿಗೆ ಇದೇ ಶೀರ್ಷಿಕೆ ಇಟ್ಟಿರುವುದು ವಿಶೇಷ. ಅಂದು ‘ಸೂರ್ಯವಂಶ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಎಸ್. ನಾರಾಯಣ್ ಅವರೇ ಈಗ ಧಾರಾವಾಹಿಗೂ ನಿರ್ದೇಶನ ಮಾಡುತ್ತಿದ್ದಾರೆ. ಈ ಹೊಸ ಸೀರಿಯಲ್ ಬಗ್ಗೆ ಕಿರುತೆರೆ ವೀಕ್ಷಕರಿಗೆ ಸಖತ್ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: Dr Vishnuvardhan House: ಹೇಗಿದೆ ನೋಡಿ ವಿಷ್ಣುವರ್ಧನ್ ಹೊಸ ಮನೆ; ‘ವಲ್ಮೀಕ’ ಗೃಹ ಪ್ರವೇಶದಲ್ಲಿ ಅನಿರುದ್ಧ್ ಕುಟುಂಬ
ಈ ಬಗ್ಗೆ ಅನಿರುದ್ಧ್ ಅವರು ಮಾಹಿತಿ ನೀಡಿದ್ದಾರೆ. ‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ, ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಹೊಸ ಮನೆಗೆ ಭೇಟಿ ನೀಡಿದ ಯಶ್, ರಾಧಿಕಾ ಪಂಡಿತ್, ಸುದೀಪ್; ಫೋಟೋ ವೈರಲ್
‘ಜೊತೆ ಜೊತೆಯಲಿ’ ಸೀರಿಯಲ್ನಿಂದ ಅನಿರುದ್ಧ್ ಅವರು ಹೊರಬಂದಾಗ ಅವರನ್ನು ಕಿರಿತೆರೆಯಿಂದ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಆ ರೀತಿ ಏನೂ ಆಗಿಲ್ಲ. ಅಭಿಮಾನಿಗಳನ್ನು ರಂಜಿಸಲು ಅನಿರುದ್ಧ್ ಮತ್ತೆ ಸಜ್ಜಾಗಿದ್ದಾರೆ. ಎಸ್. ನಾರಾಯಣ್ ಜೊತೆಗೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಕೌತುಕ ಮೂಡಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಅನಿರುದ್ಧ್ ಅವರು ಜಯನಗರದಲ್ಲಿ ‘ವಲ್ಮೀಕ’ ಮನೆಯ ಗೃಹಪ್ರವೇಶ ಮಾಡಿ ಸಂಭ್ರಮಿಸಿದ್ದರು. ಅದರ ಬೆನ್ನಲ್ಲೇ ಹೊಸ ಧಾರಾವಾಹಿ ಕುರಿತು ಸಿಹಿ ಸುದ್ದಿ ನೀಡಿದ್ದಾರೆ. ಈ ಸೀರಿಯಲ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:49 am, Thu, 8 December 22