ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿ ಸಿಗುತ್ತಿದೆ. ಅವರು ನಟಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅದೇ ರೀತಿ ಅವರು ನಿರೂಪಿಸಲಿರುವ ‘ಬಿಗ್ ಬಾಸ್’ (Bigg Boss Kannada Season 9) ಕಾರ್ಯಕ್ರಮ ಕೂಡ ಸದ್ಯದಲ್ಲೇ ಶುರು ಆಗಲಿದೆ. ಅದಕ್ಕಾಗಿ ಅಭಿಮಾನಿಗಳ ವಲಯದಲ್ಲಿ ಹೆಚ್ಚು ಕಾತರ ಸೃಷ್ಟಿ ಆಗಿದೆ. ಈವರೆಗೂ ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ 8 ಸೀಸನ್ಗಳನ್ನು ಕಿಚ್ಚ ಸುದೀಪ್ (Kichcha Sudeep) ಅವರು ಯಶಸ್ವಿಯಾಗಿ ನಿರೂಪಿಸಿದ್ದಾರೆ. ಈಗ ಮತ್ತೆ ಅವರ ನಿರೂಪಣೆಯಲ್ಲಿ ಬಿಗ್ ಬಾಸ್ ಹೊಸ ಸೀಸನ್ (BBK 9) ಪ್ರಸಾರಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಮೊದಲ ಹಂತವಾಗಿ ಪ್ರೋಮೋ ಶೂಟಿಂಗ್ ಮಾಡಲಾಗಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಅದರಲ್ಲಿನ ಸುದೀಪ್ ಅವರ ಗೆಟಪ್ ಎಲ್ಲರಿಗೂ ಇಷ್ಟ ಆಗುತ್ತಿದೆ.
ಬಿಗ್ ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಎಂಬಷ್ಟರಮಟ್ಟಿಗೆ ಒಂದು ಬಗೆಯ ನಂಟು ಬೆಳೆದಿದೆ. ಸುದೀಪ್ ಅವರ ಮಾತಿನ ಶೈಲಿಗೆ ಮನಸೋಲದವರೇ ಇಲ್ಲ. ಹಲವು ಬಗೆಯ ಮನಸ್ಥಿತಿ ಇರುವ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಎಲ್ಲರನ್ನೂ ಸಮನಾಗಿ ನೋಡುತ್ತಾ, ಸೂಕ್ತ ಪ್ರತಿಕ್ರಿಯೆಗಳನ್ನು ನೀಡುತ್ತಾ ಈ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಡುತ್ತಾರೆ. ಹಾಗಾಗಿ ಪ್ರೇಕ್ಷಕರಿಗೆ ಕಿಚ್ಚ ಸಖತ್ ಇಷ್ಟ ಆಗುತ್ತಾರೆ.
ಒಮ್ಮೆ ಬಿಗ್ ಬಾಸ್ ಶುರುವಾಯಿತು ಎಂದರೆ ಪ್ರತಿ ವೀಕೆಂಡ್ನಲ್ಲಿ ಅಭಿಮಾನಿಗಳಿಗೆ ಕಿಚ್ಚನ ದರ್ಶನ ಸಿಗುತ್ತದೆ. ಹಾಗಾಗಿ ವಾರಾಂತ್ಯದ ಎಪಿಸೋಡ್ಗಳು ಹೆಚ್ಚು ಮಜವಾಗಿ ಇರುತ್ತವೆ. ಪ್ರತಿ ಸಂಚಿಕೆಯಲ್ಲೂ ಸುದೀಪ್ ಅವರು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಬರುತ್ತಾರೆ. ಅವರ ಫ್ಯಾಷನ್ ಸೆನ್ಸ್ ಕೂಡ ಅಭಿಮಾನಿಗಳಿಗೆ ಆಕರ್ಷಕ ವಿಷಯವೇ ಸರಿ.
ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪ್ರೋಮೋ ಶೂಟಿಂಗ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೊಡ್ಮನೆ ಸೆಟ್ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿ ಇರುವ ಬಗ್ಗೆಯೂ ಇತ್ತೀಚೆಗೆ ಅಪ್ಡೇಟ್ ನೀಡಿದ್ದರು. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಭಾಗವಹಿಸಲಿದ್ದಾರೆ? ಜನ ಸಾಮಾನ್ಯರಿಗೆ ಅವಕಾಶ ಸಿಗಲಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಕಿರುತೆರೆ ಪ್ರೇಕ್ಷಕರು ಕಾದಿದ್ದಾರೆ.