ಬಿಗ್ಬಾಸ್ ಮನೆ ಈಗ ಬಿಬಿ ರೆಸಾರ್ಟ್ ಆಗಿದೆ. ಮೊದಲಿಗೆ ಭವ್ಯಾ, ಮೋಕ್ಷಿತಾ, ತ್ರಿವಿಕ್ರಮ್, ರಜತ್, ಧನು ಅವರು ರೆಸಾರ್ಟ್ನ ಸಿಬ್ಬಂದಿಯಾಗಿದ್ದರು. ಅತಿಥಿಗಳಾಗಿದ್ದ ಚೈತ್ರಾ ಕುಂದಾಪುರ, ಮಂಜು, ಗೌತಮಿ, ಐಶ್ವರ್ಯಾ, ಹನುಮಂತು ಅವರಿಗೆ ಆತಿಥ್ಯ ನೀಡಿದರು. ಈ ಸಮಯದಲ್ಲಿ ಮಂಜು, ಚೈತ್ರಾ, ಐಶ್ವರ್ಯಾ ಇನ್ನು ಕೆಲವರು ರೆಸಾರ್ಟ್ ಸಿಬ್ಬಂದಿಗೆ ಸಾಧ್ಯವಾದಷ್ಟು ಕಾಟಗಳನ್ನು ಕೊಟ್ಟರು. ಭವ್ಯಾ ಅಂತು ಬಿಗ್ಬಾಸ್ ಎದುರು ಕಣ್ಣೀರು ಹಾಕಿಕೊಂಡರು. ಅತಿಥಿಗಳು ಕೊಟ್ಟ ಕಾಟಕ್ಕೆ ಹೈರಾಣಾಗಿದ್ದ ಭವ್ಯಾ ಮತ್ತು ತಂಡಕ್ಕೆ ಬಿಗ್ಬಾಸ್ ಅವಕಾಶ ನೀಡಿದರು. ಇಂದು ಭವ್ಯಾ, ಮೋಕ್ಷಿತಾ, ತ್ರಿವಿಕ್ರಮ್, ರಜತ್ ಅವರುಗಳು ಅತಿಥಿಗಳಾದರು, ಚೈತ್ರಾ ಮತ್ತು ತಂಡ ಸಿಬ್ಬಂದಿಯಾದರು.
ರಜತ್, ತ್ರಿವಿಕ್ರಮ್ ಇನ್ನಿತರರು ಸಿಬ್ಬಂದಿ ಆಗಿದ್ದಾಗ ಉಗ್ರಂ ಮಂಜು, ಗೌತಮಿ, ಐಶ್ವರ್ಯಾ ಇನ್ನು ಕೆಲವರು ಸಖತ್ ಕಾಟ ಕೊಟ್ಟಿದ್ದರು. ಆಗಲೇ ರಜತ್, ಮುಂದಿನ ಟಾಸ್ಕ್ನಲ್ಲಿ ಅವರನ್ನು ಹಣ್ಣುಗಾಯಿ ಮಾಡುತ್ತೇನೆ ಎಂದು ಶಪತ ಮಾಡಿದ್ದರು. ಅಂತೆಯೇ ಬಿಗ್ಬಾಸ್ ನೀಡಿದ ಅವಕಾಶವನ್ನು ಬಳಸಿಕೊಂಡ ರಜತ್, ವಿಪರೀತ ಕಾಟ ಕೊಟ್ಟರು. ಎದುರಾಳಿ ತಂಡದ ಸದಸ್ಯರ ಜೊತೆಗೆ ತಮ್ಮ ತಂಡದ ಸದಸ್ಯರಿಗೂ ಸಖತ್ ಕಾಟ ಕೊಟ್ಟರು.
ರೆಸಾರ್ಟ್ಗೆ ಸೇರಿದ ವಿಲನ್ ರೀತಿ ವರ್ತಿಸಲು ಆರಂಭಿಸಿದ ರಜತ್ ಎಲ್ಲರ ಮೇಲೆ ಜಗಳ ಮಾಡುತ್ತಾ, ರೌಡಿ ಬಿಹೇವಿಯರ್ ತೋರಿದರು. ಚೈತ್ರಾ, ಗೌತಮಿ, ಉಗ್ರಂ ಮಂಜು ಇನ್ನಿತರರು ರಜತ್ ಅನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಬೇಕೆಂದೇ ಬೆಡ್ರೂಂ ಅನ್ನು ಗಲೀಜು ಮಾಡಿದರು. ದಿಂಬುಗಳನ್ನು ಕ್ಯಾಪ್ಟನ್ ರೂಮಿಗೆ ಎಸೆದರು. ಬಾತ್ರೂಂಗೆ ಹೋಗಿ ನೀರನ್ನೆಲ್ಲ ಎಲ್ಲೆಂದರಲ್ಲಿ ಚೆಲ್ಲಿದರು, ಟಿಶ್ಯು ಪೇಪರ್ ಎಸೆದಾಡಿದರು. ಒಟ್ಟಾರೆ ಸಿಬ್ಬಂದಿಗೆ ಕೊಡಬಾರದ ಕಾಟವನ್ನು ರಜತ್ ಕೊಟ್ಟರು. ಹೇಳಿದ್ದಂತೆ ಎದುರಾಳಿಗಳನ್ನು ಹಣ್ಣುಗಾಯಿ ಮಾಡಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಆದರೆ ಚೈತ್ರಾ ಕುಂದಾಪುರ ಹಾಗೂ ಇನ್ನು ಕೆಲವರು ರಜತ್ ಎಷ್ಟೆ ಕಾಟ ಕೊಟ್ಟರೂ ಸಹ ಚೈತ್ರಾ ಕುಂದಾಪುರ, ಗೌತಮಿ ಹಾಗೂ ಒಟ್ಟಾರೆ ಅವರ ತಂಡದವರು ‘ಸಾರಿ ಸರ್, ಸಾರಿ ಸರ್’ ಎನ್ನುತ್ತಾ ಸಮಾಧಾನದಿಂದಲೇ ವರ್ತಿಸಿದರು. ಅಸಲಿಗೆ ಸ್ವತಃ ರಜತ್ ಸಿಬ್ಬಂದಿ ಆಗಿದ್ದಾಗ ಅಷ್ಟು ಸಮಾಧಾನವಾಗಿ ವರ್ತಿಸಿರಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ