ಯಾರು ಏನೇ ಅರಚಾಡಲಿ, ನಾನು ಅಖಾಡಕ್ಕೆ ಇಳಿಯುವುದು ಆಗಲೇ: ಸುದೀಪ್
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರ ಶನಿವಾರ ಎಪಿಸೋಡ್ನಲ್ಲಿ ಸುದೀಪ್ ಸ್ಪರ್ಧಿಗಳ ಬಗ್ಗೆ ಅವರು ಆಟ ಆಡಿತ ರೀತಿ ಬಗ್ಗೆ, ಅವರು ಮನೆಯಲ್ಲಿ ತೋರುತ್ತಿರುವ ವರ್ತನೆಯ ಬಗ್ಗೆ ಮಾತನಾಡಿದರು. ಇದೆಲ್ಲದರ ಜೊತೆಗೆ ಸುದೀಪ್ ತಮ್ಮ ಬಗ್ಗೆಯೂ ಮಾತನಾಡಿದರು. ‘ನಾನು ಆ ಸಮಯದಲ್ಲಿ ಮಾತ್ರವೇ ಅಖಾಡಕ್ಕೆ ಇಳಿಯುವುದು’ ಎಂದಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಸ್ಪರ್ಧಿಗಳೆಲ್ಲ ಶಕ್ತಿಮೀರಿ ಆಟ ಆಡುತ್ತಿದ್ದಾರೆ. ಎಲ್ಲರಿಗೂ ಫೈನಲ್ ತಲುಪುವ ಆಸೆ. ಹನುಮಂತನಿಗೆ ಈಗಾಗಲೇ ಫಿನಾಲೆ ಟಿಕೆಟ್ ಸಿಕ್ಕಿದ್ದಾಗಿದೆ. ಫಿನಾಲೆ ತಲುಪುವ ಉಳಿದ ಆಟಗಾರರು ಯಾರು ಎಂಬ ಕುತೂಹಲ ಮನೆ ಮಾಡಿದೆ. ಇಂದು (ಜನವರಿ 11) ವಾರಾಂತ್ಯದ ಪಂಚಾಯ್ತಿಯಿಲ್ಲಿ ಸುದೀಪ್ ಕೆಲ ಸ್ಪರ್ಧಿಗಳ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ವಿಶೇಷವೆಂದರೆ ತಮ್ಮ ವ್ಯಕ್ತಿತ್ವದ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.
ಈ ವಾರ ಹನುಮಂತ ಅತ್ಯುತ್ತಮ ಆಟ ಆಡಿದ್ದಾರೆ. ಹನುಮಂತನ ಆಟವನ್ನು ಕೊಂಡಾಡಿದ ಸುದೀಪ್, ಅವರು ಆಟವನ್ನು ತೆಗೆದುಕೊಂಡಿರುವ ರೀತಿ, ಮನೆಯ ಇತರೆ ಸ್ಪರ್ಧಿಗಳೊಟ್ಟಿಗೆ ಸ್ಪಂದಿಸುವ ರೀತಿಯನ್ನು ಇತರರು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು. ಬೇರೆ ಸ್ಪರ್ಧಿಗಳು, ಹನುಮಂತನ ಬಗ್ಗೆ ವಿವರಿಸಿ ಎಂದಾಗ ಕೆಲವರು ಋಣಾತ್ಮಕ ರೀತಿಯಲ್ಲಿಯೇ ಹನುಮಂತನ ವ್ಯಕ್ತಿತ್ವವನ್ನು ವಿವರಿಸಿದರು. ಭವ್ಯಾ ಅಂತೂ ಹನುಮಂತು ಬಹಳ ಸ್ಮಾರ್ಟ್ (ಕಿಲಾಡಿ) ಎಂಬರ್ಥ ಬರುವಂತೆ ಹೇಳಿದರು.
ಆ ಸಮಯದಲ್ಲಿ ಮಾತನಾಡಿದ ಸುದೀಪ್, ‘ಹನುಮಂತು ಕೆಲವು ವಿಷಯ ಮುಚ್ಚಿಡುತ್ತಾರೆ ಹೇಳುವುದನ್ನು ಹೇಳುವುದಿಲ್ಲ ಎನ್ನುತ್ತೀರಿ. ನಾನೂ ಸಹ ಅವರಂತೆ. ನಾನೂ ಸಹ ಕೆಲವರಿಗೆ ಹೇಳುವುದಿಲ್ಲ. ಭಯಪಟ್ಟು ಅಲ್ಲ, ನಾನು ಹೇಳಿದರೂ ಅವರು ಅರ್ಥ ಮಾಡಿಕೊಳ್ಳಲ್ಲ, ವಿತಂಡ ವಾದ ನನಗೆ ಇಷ್ಟ ಇಲ್ಲ. ಈಗ ಹೇಳಿ ನಾನೂ ಕಿಲಾಡಿಯಾ?’ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ:ಮತ್ತೆ ಸುದೀಪ್ ಎದುರು ಕಣ್ಣೀರು ಹಾಕಿದ ಭವ್ಯಾ ಗೌಡ
ಮುಂದುವರೆದು ಮಾತನಾಡಿದ ಸುದೀಪ್, ‘ನನ್ನ ಕೆಲಸ ನಾನು ನೋಡಿಕೊಂಡು ಇರುತ್ತೇನೆ. ಶುಕ್ರವಾರ ಬಿಡುಗಡೆ ಆಗುವ ನನ್ನ ಸಿನಿಮಾ ಹಿಟ್ ಆದರೆ ನನಗೆ ಸಾಕು. ಯಾರ್ಯಾರೋ ಏನೇನೋ ಅರಚಾಡುತ್ತಿರತ್ತಾರೆ. ಸುದೀಪ್ ಅವರ ಬಗ್ಗೆ ಮಾತನಾಡಬೇಕು, ಇದರ ಬಗ್ಗೆ ರಿಯಾಕ್ಷನ್ ಕೊಡಬೇಕು ಅನ್ನುತ್ತಿರುತ್ತಾರೆ. ಆದರೆ ನಾನು ನಮ್ಮ ಮನೆಯಲ್ಲಿ ಆರಾಮವಾಗಿ ಟೀ ಕುಡಿದುಕೊಂಡು ಇರುತ್ತೀನಿ. ಸಮಾಜಕ್ಕೆ, ಸೊಸೈಟಿಗೆ ಏನಾದರೂ ಸಮಸ್ಯೆ ಆಗುತ್ತಿದೆ ಅಂದಾಗ, ನನ್ನ ಆಪ್ತರ ವಿಚಾರ ಬಂದಾಗ ನಾನು ವೇದಿಕೆಗೆ ಇಳಿಯುತ್ತೇನೆ’ ಎಂದಿದ್ದಾರೆ ಸುದೀಪ್.
ಅದು ನಿಜವೂ ಹೌದು. ಸುದೀಪ್ ವಿವಾದಾತ್ಮಕ ವಿಷಯಗಳ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸಿದಾಗಲೂ ಸಹ ಸಾಧ್ಯವಾದಷ್ಟು ನೇರವಾಗಿ ಮಾತನಾಡುತ್ತಾರೆ. ಆದರೆ ತಮ್ಮದಲ್ಲದ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅದು ತಮಗೆ ಸಂಬಂಧಿಸಿದಲ್ಲ ಎಂದು ಸುಮ್ಮನಾಗುತ್ತಾರೆ. ಇತ್ತೀಚೆಗೆ ‘ಮ್ಯಾಕ್ಸ್’ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಸುದೀಪ್ ಕತ್ತರಿಸಿದ ಕೇಕ್ ವಿಷಯವಾಗಿಯೂ ವಿವಾದ ಆಗಿತ್ತು. ಆಗಲೂ ಸುದೀಪ್ ಏನೂ ಮಾತನಾಡಿರಲಿಲ್ಲ ಆದರೆ ಅದಕ್ಕೆ ಸಂಬಂಧಿಸಿದವರು, ಅದಕ್ಕೆ ಕಾರಣ ಆದವರು ಆ ಬಗ್ಗೆ ಸ್ಪಷ್ಟನೆ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ