ವಿನಯ್-ಕಾರ್ತಿಕ್ ಇಬ್ಬರನ್ನೂ ಡಬ್ಬಕ್ಕೆ ಹಾಕಿದ ಸಂಗೀತಾ ಶೃಂಗೇರಿ
Bigg Boss Kannada: ಬಿಗ್ಬಾಸ್ ಮನೆಯ ಯಾವ ಸದಸ್ಯ ಯಾರ ಸ್ನೇಹ ಉಳಿಸಿಕೊಂಡರು, ಯಾರ ಸ್ನೇಹಕ್ಕೆ ಎಳ್ಳು ನೀರು ಬಿಟ್ಟರು.
ಬಿಗ್ಬಾಸ್ (BiggBoss) ಕನ್ನಡ ಸೀಸನ್ 10 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಹೊರಗೆ ಹೋದಮೇಲೆ ಏನು ಮಾಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಮನೆಯ ಕೆಲ ಸದಸ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಗೋವಾಗೆ ಟ್ರಿಪ್ ಹೋಗುವ ಪ್ಲ್ಯಾನ್ ಸಹ ಹಾಕಿಕೊಂಡಿದ್ದಾರೆ. ಮನೆಯ ಹೊರಗೆ ಹೋದಮೇಲೂ ಗೆಳೆಯರಾಗಿರುವ ಬಗ್ಗೆ ಚರ್ಚೆಗಳನ್ನು ಮಾಡಿದ್ದಾರೆ. ಆದರೆ ಭಾನುವಾರದ ಎಪಿಸೋಡ್ನಲ್ಲಿ ಬೇರೆಯದೇ ಕತೆ ನಡೆಯಿತು. ಸುದೀಪ್ ಕೊಟ್ಟ ಟ್ವಿಸ್ಟ್ನಿಂದ ಕೆಲ ದೋಸ್ತಿಗಳು ಅಲ್ಲಿಯೇ ಮುರಿದು ಬಿದ್ದವು. ಅಥವಾ ಮುರಿದಿರುವ ಗೆಳೆತನಕ್ಕೆ ಕೊನೆಯ ಮೊಳೆ ಬಿದ್ದಂತಾಯ್ತು.
ಈ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಲು ಬಯಸುವ ಗೆಳೆತನ ಯಾರದ್ದು, ಇಲ್ಲಿಯೇ ಅಂತ್ಯ ಮಾಡಲಿಚ್ಛಿಸುವ ಗೆಳೆತನ ಯಾರದ್ದು ಎಂದು ಸುದೀಪ್ ಕೇಳಿದರು. ಎಲ್ಲರಿಗೂ ಇಬ್ಬರ ಫೋಟೊಗಳನ್ನು ಆಯ್ಕೆಯ ರೂಪದಲ್ಲಿ ನೀಡಲಾಗಿತ್ತು. ಮೊದಲ ಸುತ್ತಿನಲ್ಲಿ ಎಲ್ಲರೂ ಮೆಲುವಾಗಿ, ಯಾರಿಗೂ ನೋವಾಗದ ರೀತಿ ಕಾರಣಗಳನ್ನು ನೀಡಿದರು. ಇದು ಸುದೀಪ್ಗೆ ಸಿಟ್ಟು ತರಿಸಿತು, ಕಾರಣಗಳನ್ನು ನೀಡುವಾಗ ನಿಖರವಾಗಿ ನೀಡಿ ಸಕ್ಕರೆಯಲ್ಲಿ ಅದ್ದಿದ ನಾಲಗೆಯಲ್ಲಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಆಗ ಎಲ್ಲರೂ ಕಠಿಣವಾದ ಮಾತುಗಳಲ್ಲಿ ನಿಖರ ಕಾರಣ ಕೊಟ್ಟರು.
ಡ್ರೋನ್ ಪ್ರತಾಪ್ಗೆ ಸಂಗೀತಾ ಹಾಗೂ ನಮ್ರತಾರ ಫೋಟೊ ನೀಡಲಾಗಿತ್ತು. ಅದರಲ್ಲಿ ಅವರು ಸಂಗೀತಾರ ಗೆಳೆತನವನ್ನು ಉಳಿಸಿಕೊಳ್ಳುವುದಾಗಿ ಹೇಳಿದರು. ನಮ್ರತಾರ ಫೋಟೊ ಹರಿದು ಡಬ್ಬಕ್ಕೆ ಹಾಕಿದರು. ಬಳಿಕ ಬಂದ ತನಿಷಾ ವರ್ತೂರು ಗೆಳೆತನವನ್ನು ಆರಿಸಿಕೊಂಡರು, ಕಾರ್ತಿಕ್ ಗೆಳೆಯ ಎಂದು ಹೇಳಿಕೊಂಡು ಮೋಸ ಮಾಡಿದ್ದಾನೆಂದು ಹೇಳಿದರು. ವಿನಯ್, ಕಾರ್ತಿಕ್ ಹಾಗೂ ನಮ್ರತಾ ನಡುವೆ ನಮ್ರತಾ ಗೆಳೆತನ ಆಯ್ಕೆ ಮಾಡಿಕೊಂಡರು, ಕಾರ್ತಿಕ್ ನನ್ನನ್ನು ಈ ಮನೆಯಲ್ಲಿ ಗೆಳೆಯನಾಗಿ ನೋಡಿಲ್ಲ ಬದಲಿಗೆ ವಿರೋಧಿಯಾಗಿ, ಎದುರಾಳಿಯಾಗಿ ನೋಡಿದ್ದಾನೆಂದು ಕಾರ್ತಿಕ್ ಚಿತ್ರ ಹರಿದರು.
ಇದನ್ನೂ ಓದಿ:ಸಂತು-ಪಂತು ಈ ವಾರ ಹೊರಗೆ ಹೋಗಿದ್ದು ಯಾರು? ಟ್ವಿಸ್ಟ್ ಕೊಟ್ಟರು ಸುದೀಪ್
ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಚಿತ್ರ ಹರಿದು ತುಕಾಲಿ ಗೆಳೆತನ ಉಳಿಸಿಕೊಳ್ಳುವುದಾಗಿ ಹೇಳಿದರು. ತುಕಾಲಿ, ಸಂಗೀತಾ ಚಿತ್ರ ಹರಿದು, ವರ್ತೂರು ಗೆಳೆತನ ಉಳಿಸಿಕೊಂಡರು. ನಮ್ರತಾ, ಸಂಗೀತಾ, ಒಂಟಿಯಾಗಿರಲು ಇಷ್ಟಪಡುವವರು, ಅವರೊಟ್ಟಿಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದಲೇ ಮಾತನಾಡುತ್ತೀನಿ, ಅವರೊಟ್ಟಿಗೆ ಸ್ನೇಹ ಕಷ್ಟ, ನಾನು ವಿನಯ್ ಗೆಳೆತನ ಉಳಿಸಿಕೊಳ್ಳುತ್ತೇನೆ ಎಂದರು. ಸಂಗೀತಾ, ತಾವು ವಿನಯ್ ಹಾಗೂ ಕಾರ್ತಿಕ್ ಇಬ್ಬರ ಗೆಳೆತನವನ್ನೂ ಇಲ್ಲಿಯೇ ಬಿಡುವುದಾಗಿ ಹೇಳಿದರು. ವಿನಯ್ ನನಗೆ ಇಲ್ಲಿ ಬಹಳ ನೋವು ಕೊಟ್ಟಿದ್ದಾರೆ. ಅವರಿಂದ ನಾನು ಹೆಚ್ಚು ಅವಮಾನ, ನೋವು ಅನುಭವಿಸಿದ್ದೇನೆ. ಇನ್ನು ಕಾರ್ತಿಕ್ ಹಾಗೂ ನಾನು ಬೇಗ ಗೆಳೆಯರಾದೆವು ಆದರೆ ಅವರು ನನ್ನನ್ನು ಬೇಕೆಂದೇ ನೋಯಿಸಲು ಆರಂಭಿಸಿದರು. ಹಾಗಾಗಿ ಇಬ್ಬರ ಗೆಳೆತನವೂ ಬೇಡ ಎಂದು ಇಬ್ಬರ ಚಿತ್ರಗಳನ್ನೂ ಹರಿದು ಡಬ್ಬಕ್ಕೆ ಎಸೆದರು. ಅದಾದ ಬಳಿಕ ಕಾರ್ತಿಕ್, ತಾವು ಸಂಗೀತಾ ಗೆಳೆತನ ಇಲ್ಲಿಯೇ ಬಿಡುವುದಾಗಿ ಹೇಳಿದರು.
ಕೊನೆಗೆ ಸುದೀಪ್, ನಿಮ್ಮಿಂದ ಚಿತ್ರಗಳನ್ನು ಹರಿಸುವುದು ಖುಷಿಯ ವಿಚಾರವಲ್ಲ. ನಾನು ಚಿತ್ರಗಳನ್ನು ಹರಿಯಲು ಹೇಳಲಿಲ್ಲ ಕೂಡ. ನೀವು ನಿಖರವಾಗಿ, ಸ್ಪಷ್ಟವಾಗಿ ಇರಲಿ ಎಂಬುದನ್ನೇ ನಮ್ಮ ಉದ್ದೇಶ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ