ಬಿಗ್ ಬಾಸ್ ಕನ್ನಡ: ‘ಕರ್ನಾಟಕ ಕ್ರಶ್’ ಆಗಿ ಒಳಗೆ ಹೋಗಿದ್ದ ಸಂಗೀತ ಹೊರಗೆ ಬಂದಿದ್ದು ‘ಸಿಂಹಿಣಿ’ಯಾಗಿ
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 10ರ ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿತವಾಗಿದ್ದ ಸಂಗೀತಾ ಎರಡನೇ ರನ್ನರ್ ಅಪ್ ಆಗಿದ್ದಾರೆ. ಬರುವಾಗ ‘ಕರ್ನಾಟಕ ಕ್ರಶ್ ಆಗಿ ಬಂದ ಸಂಗೀತಾ ಸಿಂಹಿಣಿ’ಯಾಗಿ ಹೊರಗೆ ಹೋಗಿದ್ದಾರೆ ಅವರ ಜರ್ನಿ ಹೇಗಿತ್ತು?
ಬಿಗ್‌ಬಾಸ್ ಕನ್ನಡ 10ನೇ ಸೀಸನ್ ನ (BiggBoss) ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿತರಾಗಿದ್ದ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದಾರೆ. ಸಂಗೀತಾ ಗೆದ್ದಿಲ್ಲ ಎಂಬುದು ಹಲವರಿಗೆ ಆಶ್ಚರ್ಯ ತಂದಿದೆ. ಬಿಗ್‌ಬಾಸ್ ಮನೆಯಲ್ಲಿ ಅವರು ಆಡಿದ ರೀತಿ, ವರ್ತಿಸಿದ ರೀತಿ, ಅವರ ಗಾಂಭೀರ್ಯ, ಠೀವಿ ಹೊರಗಿನ ಎಷ್ಟೋ ಯುವತಿಯರಿಗೆ, ಮಹಿಳೆಯರಿಗೆ ಸ್ಪೂರ್ತಿಯಾಗಿತ್ತು. ಈ ಬಾರಿ ಸಂಗೀತಾ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು ಆದರೆ ಅದು ಸುಳ್ಳಾಗಿದೆ. ಹಾಗೆಂದು ಸಂಗೀತಾ ಸೋತಿಲ್ಲ. ಬದಲಿಗೆ ‘ಕರ್ನಾಟಕ ಕ್ರಶ್ ಆಗಿ ಒಳಗೆ ಹೋಗಿದ್ದ ಸಂಗೀತಾ, ‘ಸಿಂಹಿಣಿ’ಯಾಗಿ ಹೊರಗೆ ಬಂದಿದ್ದಾರೆ.
ಬಿಗ್‌ಬಾಸ್ ಸೀಸನ್ 10ರ ಮನೆ ಪ್ರವೇಶಿಸುವ ಮುನ್ನವೇ ನಟಿಯಾಗಿ ಹೆಸರು ಮಾಡಿದ್ದರು, ‘ಚಾರ್ಲಿ 777’ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿದ್ದರು. ಯಶಸ್ಸಿನಲ್ಲಿರುವವರು ಬಿಗ್‌ಬಾಸ್ ಮನೆಗೆ ಹೋಗುವುದೇ ಅಪರೂಪ ಆದರೆ ಸಂಗೀತಾ ದಿಟ್ಟ ನಿರ್ಧಾರ ತಳೆದು ಬಿಗ್‌ಬಾಸ್ ಮನೆಗೆ ಬಂದಿದ್ದರು. ಆದರೆ ಅವರಿಗೆ ಆರಂಭದಲ್ಲಿಯೇ ಹಿನ್ನೆಡೆ ಉಂಟಾಯ್ತು. ಅವರು ಅಸಮರ್ಥರಾಗಿ ಮನೆ ಸೇರಿದರು.
ಹೊರಗೆ ನಾಯಕಿಯಾಗಿ ಹೆಸರು ಮಾಡಿದ್ದರೂ ಸಹ ಅಸಮರ್ಥರಾಗಿ ನೀಡಿದ ಕೆಲಸ ಮಾಡಿದರು. ಜೊತೆಗೆ ಇತರೆ ಅಸಮರ್ಥರಾದವರನ್ನು ಹತ್ತಿರ ಮಾಡಿಕೊಂಡು ಪರಸ್ಪರರ ಬೆನ್ನಿಗೆ ನಿಲ್ಲುತ್ತಾ ಎಲ್ಲರೊಟ್ಟಿಗೂ ಒಂದು ಆಪ್ತ ಬಾಂಧವ್ಯ ಮೂಡಿಸಿಕೊಂಡರು. ಹೊರಗೆ ಗೆಳೆಯರಾಗಿದ್ದ ವಿನಯ್ ಜೊತೆಗೆ ಎರಡನೇ ವಾರದಲ್ಲಿಯೇ ವಿರೋಧ ಕಟ್ಟಿಕೊಂಡರು. ಗಟ್ಟಿ ವ್ಯಕ್ತಿತ್ವದ ಹುಡುಗಿ, ಕೋಪದಲ್ಲಿ ಕಿಡಿಕಾರುತ್ತ ನಿಂತಿರುವ ಹುಡುಗಿ, ದುಃಖದಲ್ಲಿ ಒಬ್ಬಂಟಿಯಾಗಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿರುವ ಹುಡುಗಿ, ಆಟದಲ್ಲಿ ಜೀವಕೊಟ್ಟು ಆಡುವ ಜಿದ್ದಿನ ಹುಡುಗಿ, ಮುಖದ ಎದುರೇ ಮಾತಾಡಿ ಜಗಳಕ್ಕೆ ನಿಲ್ಲುವ ಜಗಳಗಂಟಿ ಹುಡುಗಿ, ಸ್ನೇಹದ ಹೆಗಲಿಗೆ ಒರಗುವ ಮುಗುಳುನಗೆಯ ಹುಡುಗಿ, ತಂತ್ರಗಾರಿಕೆಯ ಜಾಣ ಹುಡುಗಿ, ತನ್ನ ಸ್ನೇಹಿತರಿಂದಾದ ಸಣ್ಣ ನೋವನ್ನೂ ಸಹಿಸಿಕೊಳ್ಳದ ಹಟಮಾರಿ ಹುಡುಗಿ ಹೀಗೆ ಹಲವು ಮುಖಗಳನ್ನು ಸಂಗೀತಾ ಬಿಗ್‌ಬಾಸ್ ಮನೆಯಲ್ಲಿ ತೋರಿಸಿದರು.
ಇದನ್ನೂ ಓದಿ:ಕಪ್ ಎತ್ತಬೇಕು ಎನ್ನುವ ಸಂಗೀತಾ ಶೃಂಗೇರಿ ಕನಸು ಭಗ್ನ; ಎರಡನೇ ರನ್ನರ್ಅಪ್ ಆದ ನಟಿ
ಸಂಗೀತಾ ಅವರ ಬಿಗ್‌ಬಾಸ್ ಜರ್ನಿ ಹಲವು ಏರಿಳಿತಗಳಿಂದ ತುಂಬಿತ್ತು. ಅಷ್ಟೊಂದು ತಿರುವುಗಳು, ಅಷ್ಟೊಂದು ಅಚ್ಚರಿಗಳು ಅವರ ಈ ಪ್ರಯಾಣದಲ್ಲಿ ತುಂಬಿಕೊಂಡಿವೆ. ಹಲವು ಸಲ ಅವರು ಈ ಪ್ರಯಾಣವನ್ನು ನಿಲ್ಲಿಸಿ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದ್ದರು. ಒಮ್ಮೆಯಂತೂ ಅವರಿಗಾದ ಗಾಯದಿಂದಾಗಿ ಅನಿವಾರ್ಯವಾಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿ ಆಸ್ಪತ್ರೆಗೆ ದಾಖಲಾಗಬೇಕಾಯ್ತು. ಒಂದು ಸಮಯದಲ್ಲಿ ಇಡೀ ಮನೆಯೇ ಅವರ ವಿರುದ್ಧ ನಿಂತಿತ್ತು. ಆದರೆ ಅದೆಲ್ಲವನ್ನೂ ಮೀರಿ, ಎದುರಿಸಿ ಬಿಗ್‌ಬಾಸ್ ಮನೆಯಲ್ಲಿ ಉಳಿದರು. ದಿಟ್ಟತನದಿಂದ ಆಟ ಮುಂದುವರೆಸಿದರು.
ಬಿಗ್‌ಬಾಸ್ ಮನೆಯಲ್ಲಿ ಹಲವು ಅವಮಾನಗಳನ್ನು ಎದುರಿಸಿದರು. ಸಗಣಿ ನೀರಿನ ಸ್ನಾನ ಮಾಡುವಂತಾಯ್ತು. ತೋಪಿನ ಎದುರು ಕೂತು ಬಣ್ಣದ ಗುಂಡಿಗೆ ಮುಖ ಕೊಡಬೇಕಾಯ್ತು. ಅಸಮರ್ಥಳಾಗಿ ಸಮರ್ಥರ ಸೇವೆ ಮಾಡಬೇಕಾಯ್ತು. ಎಲ್ಲವನ್ನೂ ಶ್ರದ್ಧೆಯಿಂದ ಮಾಡಿದರು. ಅದರ ನೋವನ್ನೆಲ್ಲ ಎದೆಯಲ್ಲಿಟ್ಟುಕೊಂಡು ಟಾಸ್ಕ್ಗಳಲ್ಲಿ ತೋರಿಸಿದರು. ಮನೆಯ ಪುರುಷರಿಗೆ ಸಮಾನವಾಗಿ ಆಟ ಆಡಿದರು. ಹಲವು ಟಾಸ್ಕ್ಗಳಲ್ಲಿ ಗೆದ್ದರು ಸಹ.
ಎರಡನೇ ವಾರದಲ್ಲಿ ಸಂಗೀತಾ ಇದ್ದ ರಣಶಕ್ತಿ ತಂಡ, ವಿನಯ್ ಅವರಿದ್ದ ಮಾಣಿಕ್ಯ ತಂಡದ ವಿರುದ್ಧ ಸೋತಿತ್ತು. ಆ ಸಮಯದಲ್ಲಿ ವಿನಯ್ ಮತ್ತು ಸಂಗೀತಾ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಬಿರುಕು ಹಲವು ವಾರಗಳ ಕಾಲ ಉರಿಯುತ್ತಲೇ ಹೋಗಿತ್ತು. ಈ ಸೀಸನ್ ಅತಿ ಹೆಚ್ಚು ಸದ್ದು ಮಾಡಿದ ಕೆಲವು ಗಳಿಗೆಳಲ್ಲಿ ಹಳ್ಳಿ ಟಾಸ್ಕ್ ಪ್ರಮುಖವಾದುದು. ಈ ಟಾಸ್ಕ್ ಸಂದರ್ಭದಲ್ಲಿ ಸಂದರ್ಭದಲ್ಲಿ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ವಿನಯ್, ‘ನಾವೇನು ಬಳೆ ತೊಟ್ಕೊಂಡು ಕೂತಿಲ್ಲ’ ಎಂದು ಮಾತಾಡಿದ್ದರು. ಇದರಿಂದ ಸಿಟ್ಟಿಗೆದ್ದ ಸಂಗೀತಾ ಅವರ ಮಾತನ್ನು ಪ್ರತಿಭಟಿಸಿದ್ದಲ್ಲದೇ ಉಳಿದ ಟಾಸ್ಕ್‌ಗಳನ್ನು ಕೈ ತುಂಬ ಬಳೆ ತೊಟ್ಟುಕೊಂಡೇ ಆಡಿದ್ದರು. ಹಾಗೂ ವಿನಯ್ ಅವರಿಗೆ ‘ಬಳೆ ತೊಟ್ಕೊಂಡಿದೀನಿ ಬಳೆ’ ಎಂದು ಕೈಯೆತ್ತಿ ತೋರಿಸಿದ್ದರು ಕೂಡ. ಬಳೆಯ ಕುರಿತ ತಪ್ಪು ಮಾತುಗಳಿಗೆ ಸಂಗೀತಾ ನೀಡಿದ ಉತ್ತರ ಮನೆಯೊಳಗಷ್ಟೇ ಅಲ್ಲ, ಮನೆಯ ಹೊರಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ವಿನಯ್ ಆಡಿದ ಮಾತಿನ ಬಗ್ಗೆ, ಅದಕ್ಕೆ ಸಂಗೀತಾ ಕೊಟ್ಟ ಉತ್ತರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಇದು ಸಂಗೀತಾ ಅವರ ಗಟ್ಟಿ ಮತ್ತು ದಿಟ್ಟ ವ್ಯಕ್ತಿತ್ವವನ್ನು ತೆರೆದಿಟ್ಟಿತ್ತು.
ಗಂಧರ್ವ-ರಾಕ್ಷಸ ಟಾಸ್ಕ್ ನಲ್ಲಿ ಸೇಡಿನ ರೀತಿ ಬದಲಾಗಿ ಮನೆಯ ವಾತಾವರಣವೂ ಪೂರ್ತಿ ಬದಲಾಗಿಬಿಟ್ಟಿತ್ತು. ಆ ಟಾಸ್ಕ್ನಲ್ಲಿ ಸಂಗೀತಾ ಮತ್ತು ಪ್ರತಾಪ್ ಇಬ್ಬರಿಗೂ ಕಣ್ಣಿಗೆ ಹಾನಿಯಾಗಿ ಆಸ್ಪತ್ರೆಗೆ ಸೇರುವಂತಾಗಿತ್ತು. ಇದರಿಂದ ಹಲವು ದಿನಗಳ ಕಾಲ ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಕಣ್ಣಿಗೆ ಕನ್ನಡಕ ಧರಿಸಿಕೊಂಡೇ ಮತ್ತೆ ಬಂದ ಸಂಗೀತಾ, ಹಿಂದಿಗಿಂತಲೂ ಅದ್ಭುತವಾಗಿ ಆಡಲು ಪ್ರಾರಂಭಿಸಿದರು. ಹೆಚ್ಚು ಗಟ್ಟಿ ವ್ಯಕ್ತಿತ್ವ ಪ್ರದರ್ಶಿಸಲು ಪ್ರಾರಂಭಿಸಿದರು.
ಮೊದಲ ವಾರದಲ್ಲಿ ಅಸಮರ್ಥರ ಗುಂಪಿನಲ್ಲಿದ್ದ ಸಂಗೀತಾ, ತನಿಷಾ ಮತ್ತು ಕಾರ್ತಿಕ್ ಈ ಮೂವರೂ ಸಾಕಷ್ಟು ಆಪ್ತರಾದರು. ತ್ರಿಕೋನ ಸ್ನೇಹ ಹಲವು ವಾರಗಳ ಕಾಲ ಅಬಾಧಿತವಾಗಿ ಉಳಿದಿತ್ತು. ಈ ಸ್ನೇಹಸಂಬಂಧದಲ್ಲಿಯೂ ಸಂಗೀತಾ ಅವರ ವ್ಯಕ್ತಿತ್ವದ ಆಯಾಮಗಳು ಬಿಚ್ಚಿಕೊಂಡವು.
ಬಿಗ್‌ಬಾಸ್ ಮನೆಗೆ ಬಂದಾಗ ಕಾರ್ತಿಕ್, ತನಿಷಾ ಜೊತೆಗೆ ಆಪ್ತ ಸ್ನೇಹ ಹೊಂದಿದ್ದ ಸಂಗೀತಾ, ಆ ನಂತರದಲ್ಲಿ ತನಿಷಾ ಹಾಗೂ ಕಾರ್ತಿಕ್ರ ಸ್ನೇಹವನ್ನು ಕಳೆದುಕೊಂಡು ಒಂಟಿ ಆದರು. ಆದರೆ ಗಂಧರ್ವ ಹಾಗೂ ರಾಕ್ಷಸ ಟಾಸ್ಕ್ನ ನಂತರ ಡ್ರೋನ್ ಪ್ರತಾಪ್ ಅವರೊಟ್ಟಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡರು. ‘ಪ್ರತಾಪ್ ಕಂಡರೆ ನನಗೆ ನನ್ನ ಅಣ್ಣನೇ ನೆನಪಾಗುತ್ತಾನೆ. ಸದಾ ಮನಸೊಳಗೆ ಮುಚ್ಚಿಟ್ಟುಕೊಂಡು ಕೊನೆಗೆ ಒಮ್ಮೆಲೇ ಸ್ಫೋಟಗೊಳ್ಳುತ್ತಾನೆ. ಬಿಗ್‌ಬಾಸ್ ಮನೆಯೊಳಗೆ ನನ್ನ ಜರ್ನಿಗೂ ಪ್ರತಾಪ್ ಜರ್ನಿಗೂ ಸಾಕಷ್ಟು ಸಾಮ್ಯತೆಗಳಿವೆ’ ಎಂದಿದ್ದರು. ಹಲವರು ಪ್ರತಾಪ್ಗೆ ವಿರುದ್ಧ ನಿಂತಿದ್ದರೂ ಸಹ ಸಂಗೀತಾ ಬೆಂಬಲ ನೀಡಿದರು. ಟಿಕೆಟ್ ಟು ಫಿನಾಲೆ ಪಡೆದು ನೇರವಾಗಿ ಫಿನಾಲೆಗೆ ಬಂದಿದ್ದ ಸಂಗೀತಾ, ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದೇ ಹಲವರು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯ್ತು. ಎರಡನೇ ರನ್ನರ್ ಅಪ್ ಆದರು ಸಂಗೀತಾ. ಆದರೆ ಬರುವಾಗ ‘ಕರ್ನಾಟಕ ಕ್ರಶ್’ ಆಗಿ ಬಂದಿದ್ದ ಸಂಗೀತಾ ‘ಸಿಂಹಿಣಿ’ ಆಗಿ ಹೊರಗೆ ಹೋದರು. ಅವರ ವ್ಯಕ್ತಿತ್ವದಿಂದ ಹಲವು ಮಹಿಳೆಯರಿಗೆ ಸ್ಪೂರ್ತಿ ತುಂಬಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:40 am, Mon, 29 January 24