‘ನಿನ್ನ ಮುಖ ಅಸಹ್ಯ, ಮೇಲಿಂದ ಕೆಳಗೆ ಗಲೀಜು’: ವೈಷ್ಣವಿ ಬಗ್ಗೆ ಕೆಟ್ಟದಾಗಿ ಮಾತಾಡಿದ ಸೌಂದರ್ಯಾ ಶೆಟ್ಟಿ
ಅಡುಗೆ ಮನೆಯಲ್ಲಿ ಹಲ್ಲು ಉಜ್ಜುತ್ತಿದ್ದ ಸೌಂದರ್ಯಾ ಶೆಟ್ಟಿಗೆ ವೈಷ್ಣವಿ ಅವರು ಬುದ್ಧಿ ಹೇಳಿದ್ದಾರೆ. ಆದರೆ ಬುದ್ಧಿ ಹೇಳಿದ್ದನ್ನು ಕೇಳುವ ಬದಲು ಸೌಂದರ್ಯಾ ಶೆಟ್ಟಿ ಅವರು ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ‘ನಿನ್ನ ಮುಖ ಅಸಹ್ಯವಾಗಿದೆ. ನೀನು ಮೇಲಿಂದ ಕೆಳಗೆ ಗಲೀಜು’ ಎಂದೆಲ್ಲ ನಾಲಿಗೆ ಹರಿಬಿಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ಸೆಪ್ಟೆಂಬರ್ 23ರ ಸಂಚಿಕೆಯಲ್ಲಿ ವೈಷ್ಣವಿ ಮತ್ತು ಸೌಂದರ್ಯಾ ಶೆಟ್ಟಿ ನಡುವೆ ಜಗಳ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಆಗುವುದು ಸಹಜ. ಆದರೆ ಮಾತಿನ ಮೇಲೆ ನಿಗಾ ಇರಬೇಕಾಗುತ್ತದೆ. ಸೌಂದರ್ಯಾ ಶೆಟ್ಟಿ ಅವರು ಮಾತನಾಡುವ ಭರದಲ್ಲಿ ತುಂಬ ಕೆಟ್ಟದಾಗಿ ಮಾತನಾಡಿದ್ದಾರೆ. ಬಾಡಿ ಶೇಮಿಂಗ್ ಮಾಡುವ ರೀತಿಯಲ್ಲಿ ಪದಬಳಕೆ ಮಾಡಿದ್ದಾರೆ. ಇದಕ್ಕೆ ಸುದೀಪ್ ಅವರು ವಾರಾಂತ್ಯದ ಸಂಚಿಕೆಯಲ್ಲಿ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳಬಹುದು ಎಂಬ ಕುತೂಹಲ ವೀಕ್ಷಕರಿಗೆ ಇದೆ.
ಸದ್ಯಕ್ಕೆ ಸೌಂದರ್ಯಾ ಶೆಟ್ಟಿ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ. ಅದರ ನಡುವೆ ಅವರು ನಿತ್ಯಕರ್ಮ ಮುಗಿಸಲು ಜೈಲಿನಿಂದ ಹೊರಗೆ ಬಂದಿದ್ದಾರೆ. ಅಡುಗೆ ಮನೆಯಲ್ಲಿ ನಿಂತು ಹಲ್ಲು ಉಜ್ಜಿದ್ದಾರೆ. ಇದನ್ನು ನೋಡಿದ ವೈಷ್ಣವಿ ಅವರಿಗೆ ಸರಿ ಎನಿಸಿಲ್ಲ. ಕೂಡಲೇ ಸೌಂದರ್ಯಾ ಶೆಟ್ಟಿಗೆ ಅವರು ಬುದ್ಧಿ ಹೇಳಿದ್ದಾರೆ. ಆ ಕ್ಷಣದಲ್ಲಿ ಇಬ್ಬರ ನಡುವೆ ಜಗಳ ಶುರು ಆಯಿತು.
‘ಅಡುಗೆ ಮನೆಯಲ್ಲಿ ಬ್ರಶ್ ಮಾಡಬೇಡಿ ಪ್ಲೀಸ್.. ತುಂಬಾ ಅಸಹ್ಯ ಎನಿಸುತ್ತದೆ’ ಎಂದು ಸೌಂದರ್ಯಾಗೆ ವೈಷ್ಣವಿ ಹೇಳಿದರು. ಆ ಮಾತಿಗೆ ಪ್ರತಿಕ್ರಿಯಿಸಿದ ಸೌಂದರ್ಯಾ ಅವರು ‘ಅಸಹ್ಯ ನಿನ್ನ ಮುಖ’ ಎಂದು ನಾಲಿಗೆ ಹರಿಬಿಟ್ಟರು. ‘ನಿನ್ನ ಮುಖ ಅಸಹ್ಯವಾಗಿದೆ. ನಾನು ಎಷ್ಟು ನೀಟಾಗಿ ಹೇಳಿದೆ’ ಎಂದು ವೈಷ್ಣವಿ ತಿರುಗೇಟು ನೀಡಿದರು.
‘ಅದು ನಿನಗೆ ಸಂಬಂಧವೇ ಇಲ್ಲದ ವಿಷಯ. ಅಡುಗೆ ಮನೆಯಲ್ಲಿ ಬ್ರಶ್ ಮಾಡಬೇಡ ಅಂತ ನನಗೆ ಹೇಳಲು ನೀನು ಯಾರು?’ ಎಂದು ಸೌಂದರ್ಯಾ ಪ್ರಶ್ನಿಸಿದರು. ‘ನಾನು ಈ ಮನೆಯ ಸ್ಪರ್ಧಿ. ಅಡುಗೆ ಮನೆಯಲ್ಲಿ ಎಲ್ಲರೂ ತಿನ್ನುತ್ತಾರೆ. ಅಲ್ಲಿ ಗಲೀಜು ಆದರೆ ಊಟ ಮಾಡೋಕೆ ಆಗಲ್ಲ’ ಎಂದು ವೈಷ್ಣವಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೌಂದರ್ಯಾ ಅವರು, ‘ಮೇಲಿಂದ ಕೆಳಗೆ ನೀನೇ ಗಲೀಜು. ಬಾಯಿ ಮುಚ್ಚಿಕೊಂಡು ಹೋಗು. ಅಡುಗೆ ಮನೆ ನಿನ್ನ ಪರ್ಸನಲ್ ಪ್ರಾಪರ್ಟಿ ಅಲ್ಲ. ಸ್ಪರ್ಧಿಯ ರೀತಿ ಇರು. ಕ್ಯಾಪ್ಟನ್ ಆಗಲು ಹೋಗಬೇಡ. ಹೋಗೆ ಅಸಹ್ಯ ಮುಖದವಳೇ’ ಎಂದು ಹೇಳಿದರು.
ಇದನ್ನೂ ಓದಿ: ‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್’: ಸೌಂದರ್ಯಾಗೆ ಎಚ್ಚರಿಕೆ ನೀಡಿದ ಆಸಿಯಾ
ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳಲ್ಲಿ ಕೆಲವರಿಗೆ ಮಾತಿನ ಮೇಲೆ ನಿಗಾ ಇಲ್ಲ. ಈ ಮೊದಲು ಮಂಜ ಕೂಡ ಬಾಯಿಗೆ ಬಂದಂತೆ ಮಾತನಾಡಿ ಎಲ್ಲರ ಅಸಮಾಧಾನಕ್ಕೆ ಕಾರಣ ಆಗಿದ್ದರು. ಈಗ ಸೌಂದರ್ಯಾ ಶೆಟ್ಟಿ ಕೂಡ ಅದೇ ವರ್ತನೆ ಶುರು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




