ಬಿಗ್ ಬಾಸ್ ಮನೆಯ ಮೈಕ್ ಬೆಲೆ ಹೇಳಿದ ಸುದೀಪ್; ಈ ಪ್ರೈಸ್ನಲ್ಲಿ ಬುಲೆಟ್ ಬೈಕ್ ಬರುತ್ತೆ
ಬಿಗ್ ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು ಮೈಕ್ ಹಾಳು ಮಾಡಿದ ಸ್ಪರ್ಧಿ ಪ್ರಶಾಂತ್‌ಗೆ ಕಿಚ್ಚ ಸುದೀಪ್ ತಮಾಷೆಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೈಕ್ ಬೆಲೆ ಎರಡೂವರೆ ಲಕ್ಷ ರೂಪಾಯಿ ಎಂದು ಸುದೀಪ್ ಬಹಿರಂಗಪಡಿಸಿದ್ದು, ನಿಯಮ ಮೀರಿ ಪಿಸು ಧ್ವನಿಯಲ್ಲಿ ಮಾತನಾಡಿದ ಆಸಿಯಾ ವಿರುದ್ಧವೂ ವಾರದ ಕಥೆಯಲ್ಲಿ ಗರಂ ಆಗಿದ್ದಾರೆ.

ಮುಖ್ಯಾಂಶಗಳು
- ಎರಡೂವರೆ ಲಕ್ಷ ರೂಪಾಯಿ ಬೆಲೆಯ ಬಿಗ್ ಬಾಸ್ ಮೈಕ್
- ಮದುವೆಯಾದ ಎರಡೇ ತಿಂಗಳಿಗೆ ಸಾಲ ಮಾಡಿಕೊಂಡ ಪ್ರಶಾಂತ್
- ಪಿಸುಮಾತಿಗೆ ಬ್ರೇಕ್: ಮೈಕ್ ಇಲ್ಲದ ಶಿಕ್ಷೆ ಎಚ್ಚರಿಕೆ
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮಾಡುವ ಎಡವಟ್ಟುಗಳು ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರ ಬಿಸಿ ಚರ್ಚೆಗೆ ಕಾರಣವಾಗುತ್ತವೆ. ಈ ವಾರ ಸ್ಪರ್ಧಿ ಪ್ರಶಾಂತ್ ಅವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು ಮೈಕ್ ಹಾಳು ಮಾಡಿಕೊಂಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಸುದೀಪ್ ಅವರು ಮೈಕ್‌ನ ಅಸಲಿ ಬೆಲೆಯನ್ನು ಬಹಿರಂಗಪಡಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ವೀಕೆಂಡ್ ಸಂಚಿಕೆಯಲ್ಲಿ ಮೈಕ್ ಬೆಲೆ ಎಷ್ಟು ಎಂದು ಸುದೀಪ್ ಪ್ರಶ್ನಿಸಿದಾಗ, ಪ್ರಶಾಂತ್ 25 ಸಾವಿರ ಇರಬಹುದು ಎಂದರು. ತಾಂಡವ್ 78 ಸಾವಿರ ಎಂದರು. ಆದರೆ ಸುದೀಪ್ ಬಿಗ್ ಬಾಸ್ ಮೈಕ್ ಬೆಲೆ ಎರಡೂವರೆ ಲಕ್ಷ ರೂಪಾಯಿ (2.5 ಲಕ್ಷ) ಎಂದು ಹೇಳಿದಾಗ ಮನೆಯವರಷ್ಟೇ ಅಲ್ಲ, ವೀಕ್ಷಕರೂ ಬೆರಗಾದರು. ಇಷ್ಟು ಬೆಲೆಯಲ್ಲಿ ಒಂದು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕೇ ಬರುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಬೆಲೆ ಕೇಳಿ ಬೆಚ್ಚಿಬಿದ್ದ ಪ್ರಶಾಂತ್‌ಗೆ ಸುದೀಪ್ ತಮಾಷೆಯಾಗಿಯೇ ತರಾಟೆಗೆ ತೆಗೆದುಕೊಂಡರು. ನಿಮಗೆ ವೀಕ್ಲಿ ಪೇಮೆಂಟ್ ಬರುತ್ತದೆ ಅಲ್ವಾ, ಅದರಲ್ಲಿ ಮೈಕ್ ದುಡ್ಡು ಕಡಿತ ಮಾಡಿಕೊಳ್ಳುತ್ತೇವೆ ಎಂದು ನಗೆಬೀರುತ್ತಲೇ ಕ್ಲಾಸ್ ತೆಗೆದುಕೊಂಡರು. ಮದುವೆಯಾಗಿ ಎರಡೇ ತಿಂಗಳಲ್ಲಿ ಸಾಲ ಮಾಡಿಕೊಂಡಿದ್ದೀರಿ, ಮೊದಲ ಬಾರಿಗೆ ಬಿಗ್ ಬಾಸ್‌ಗೆ ಹಣ ಬಂದಿದೆ ಎಂದು ಸುದೀಪ್ ಕಾಲೆಳೆದಿದ್ದು ಹೈಲೈಟ್ ಆಯಿತು.
ಇದೇ ವೇಳೆ ಮನೆಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧವೂ ಸುದೀಪ್ ಗರಂ ಆದರು. ಬಿಗ್ ಬಾಸ್ ಮನೆಯಲ್ಲಿ ಪಿಸು ಧ್ವನಿಯಲ್ಲಿ ಮಾತನಾಡಬಾರದು ಎಂಬ ಕಠಿಣ ನಿಯಮವಿದೆ. ಆದರೆ ಆಸಿಯಾ ಅವರು ಪಿಸುಗುಟ್ಟಿ ಮಾತನಾಡಿ ನಿಯಮ ಮೀರಿದ್ದರು. ಕ್ಯಾಪ್ಟನ್ ಧನುಷ್ ಅವರು ಶಿಕ್ಷೆ ನೀಡಲು ಮುಂದಾದರೂ ಆಸಿಯಾ ಅದನ್ನು ಪಾಲಿಸಿರಲಿಲ್ಲ. ಈ ಗಂಭೀರ ವಿಷಯ ವೀಕೆಂಡ್ ಪಂಚಾಯಿತಿಯಲ್ಲಿ ಚರ್ಚೆಗೆ ಬಂದಿತು.
ಇದನ್ನೂ ಓದಿ: ‘ಬಿಗ್ ಬಾಸ್’ ಖ್ಯಾತಿಯ ತಾಂಡವ್ ರಾಮ್ ನಟನೆಯ ಸಿನಿಮಾದಿಂದ ಬಂತು ಹೊಸ ಹಾಡು
ನಿಯಮಗಳ ಮಹತ್ವವನ್ನು ವಿವರಿಸಿದ ಸುದೀಪ್, ಬಿಗ್ ಬಾಸ್ ಪಿಸುಗುಟ್ಟಿ ಮಾತನಾಡಬಾರದು ಎಂದಾಗ ಅದು ಎಷ್ಟು ಮುಖ್ಯವಾಗುತ್ತದೆ ಎಂದು ಪ್ರಶ್ನಿಸಿದರು. ಕ್ಯಾಪ್ಟನ್ ಪನಿಶ್ಮೆಂಟ್ ಕೊಟ್ಟಾಗ ಅದನ್ನು ತಪ್ಪದೇ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಯಾರಾದರೂ ಪಿಸುಗುಟ್ಟಿ ಮಾತನಾಡಿದರೆ, ಒಂದು ವಾರ ಪೂರ್ತಿ ಮೈಕ್ ಕೊಡುವುದಿಲ್ಲ ಎಂದು ಬಿಗಿ ರೂಲ್ಸ್ ಘೋಷಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




