ತೆಲುಗು ಬಿಗ್ಬಾಸ್ ಫಿನಾಲೆ ತಲುಪಿದ ಕನ್ನಡತಿ ತನುಜಾ
Bigg Boss Telugu Finale: ಬಿಗ್ಬಾಸ್ ತೆಲುಗು ಸೀಸನ್ 09 ಚಾಲ್ತಿಯಲ್ಲಿದ್ದು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಈ ಬಾರಿ ತೆಲುಗು ಬಿಗ್ಬಾಸ್ನಲ್ಲಿ ಕರ್ನಾಟಕದ ಸಂಜನಾ ಗಲ್ರಾನಿ ಮತ್ತು ನಟಿ ತನುಜಾ ಪುಟ್ಟಸ್ವಾಮಿ ಸ್ಪರ್ಧಿಗಳಾಗಿ ಭಾಗಿ ಆಗಿದ್ದಾರೆ. ಅಂದಹಾಗೆ ಇದೀಗ ತನುಜಾ ಪುಟ್ಟಸ್ವಾಮಿ ಅವರು ಫಿನಾಲೆ ತಲುಪಿದ್ದಾರೆ. ಸಂಜನಾ ಸಹ ಫಿನಾಲೆ ತಲುಪುತ್ತಾರಾ? ಕಾದು ನೋಡಬೇಕಿದೆ.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಚಾಲ್ತಿಯಲ್ಲಿದೆ, ಕನ್ನಡ ಬಿಗ್ಬಾಸ್ ಪ್ರಾರಂಭವಾಗಿ 70ಕ್ಕೂ ಹೆಚ್ಚು ದಿನಗಳಾಗಿವೆ. ಕನ್ನಡ ಬಿಗ್ಬಾಸ್ ಪ್ರಾರಂಭ ಆಗುವ ಕೆಲವೇ ದಿನಗಳ ಮುಂಚೆ ನೆರೆಯ ತೆಲುಗು ಬಿಗ್ಬಾಸ್ ಸಹ ಪ್ರಾರಂಭವಾಗಿದ್ದು, ಇದು ತೆಲುಗು ಬಿಗ್ಬಾಸ್ನ ಒಂಬತ್ತನೇ ಸೀಸನ್ ಆಗಿದ್ದು ಈ ಸೀಸನ್ನಲ್ಲಿ ಇಬ್ಬರು ಕನ್ನಡತಿಯರು ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದು ವಿಶೇಷ. ತನುಜಾ ಪುಟ್ಟಸ್ವಾಮಿ ಮತ್ತು ಸಂಜನಾ ಗಲ್ರಾನಿ ಅವರುಗಳು ತೆಲುಗು ಬಿಗ್ಬಾಸ್ ಸೀಸನ್ 09ರಲ್ಲಿ ಭಾಗವಹಿಸಿದ್ದರು. ಇದೀಗ ತನುಜಾ ಅವರು ಫಿನಾಲೆಗೆ ಎಂಟ್ರಿ ಕೊಟ್ಟಾಗಿದೆ.
ತೆಲುಗು ಬಿಗ್ಬಾಸ್ ಸೀಸನ್ 09 ಅಂತಿಮ ವಾರದಲ್ಲಿದ್ದು, ವಿನ್ನರ್ ಘೋಷಣೆಗೆ ಇನ್ನೊಂದು ವಾರವಷ್ಟೆ ಬಾಕಿ ಇದೆ. ಮನೆಯಲ್ಲಿ ಸಂಜನಾ ಗಲ್ರಾನಿ, ತನುಜಾ ಪುಟ್ಟಸ್ವಾಮಿ ಸೇರಿದಂತೆ ಇನ್ನೂ ಮೂರು ಮಂದಿ ಇದ್ದಾರೆ. ಅವರಲ್ಲಿ ಕಲ್ಯಾಣ್ ಎಂಬುವರು ಈಗಾಗಲೇ ಫಿನಾಲೆ ಟಿಕೆಟ್ ಪಡೆದು, ಫಿನಾಲೆಗೆ ಹೋಗಿ ಬಿಟ್ಟಿದ್ದಾರೆ. ಇನ್ನುಳಿದ ಮೂವರಲ್ಲಿ ಇಬ್ಬರು ಈ ವಾರ ಎಲಿಮಿನೇಟ್ ಆಗಲಿದ್ದಾರೆ. ಇದೀಗ ತನುಜಾಗೂ ಸಹ ಈ ವಾರ ಪಿನಾಲೆ ಟಿಕೆಟ್ ದೊರೆತಿದೆ.
ಈ ವಾರದ ಟಾಸ್ಕ್ಗಳು ಫಿನಾಲೆ ಟಿಕೆಟ್ಗಾಗಿಯೇ ನಡೆದವು. ಎಲ್ಲ ಆಟದಲ್ಲಿಯೂ ಹೆಚ್ಚಾಗಿ ಆಡಿದ ತನುಜಾ ಅವರು ಕೊನೆಯದಾಗಿ ಟಾಸ್ಕ್ ಗೆದ್ದು ಫಿನಾಲೆಗೆ ಹೋಗಿದ್ದಾರೆ. ಮಾತ್ರವಲ್ಲದೆ ಟಾಸ್ಕ್ನಲ್ಲಿ ಸೋತ ಭರಣಿ ಸಹ ತಮ್ಮ ಬಳಿ ಇದ್ದ ಪಾಯಿಂಟ್ಸ್ಗಳನ್ನು ತನುಜಾಗೆ ನೀಡುವ ಮೂಲಕ ಅವರ ಫಿನಾಲೆ ಪಯಣವನ್ನು ಸುಲಭ ಮಾಡಿದ್ದಾರೆ. ಅಲ್ಲಿಗೆ ಮನೆಯಲ್ಲಿರುವವರ ಪೈಕಿ ತನುಜಾ ಮತ್ತು ಕಲ್ಯಾಣ್ ಇಬ್ಬರೂ ಫಿನಾಲೆ ತಲುಪಿದಂತಾಗಿದೆ.
ಇದನ್ನೂ ಓದಿ:Bigg Boss: ಬಿಗ್ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
ಸಂಜನಾ ಫಿನಾಲೆ ತಲುಪುತ್ತಾರೆಯೇ ಇಲ್ಲವೇ ಎಂಬ ಅನುಮಾನ ಮೂಡಿದೆ. ಸಂಜನಾಗೆ ಪೈಪೋಟಿಯಾಗಿ ಇಮಾನ್ಯುಯೆಲ್ ಇದ್ದಾರೆ. ಅವರು ಸಹ ಬಹಳ ಚೆನ್ನಾಗಿ ಆಟ ಆಡುತ್ತಿದ್ದಾರೆ. ಇನ್ನು ಅವರ ಜೊತೆಗೆ ಭರಣಿ ಮತ್ತು ಸುಮನ್ ಸಹ ಇದ್ದು, ಈ ಇಬ್ಬರೂ ಸಹ ಈ ವಾರ ಎಲಿಮಿನೇಟ್ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅಲ್ಲಿಗೆ, ಸಂಜನಾ ಹಾಗೂ ಇಮಾನ್ಯುಯೆಲ್ ನಡುವೆ ಸ್ಪರ್ಧೆ ಏರ್ಪಡಲಿದೆ.
ತನುಜಾ ಪುಟ್ಟಸ್ವಾಮಿ ಕನ್ನಡದ ನಟಿಯಾಗಿದ್ದು, ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತನುಜಾಗೆ ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಬಿಗ್ಬಾಸ್ನಲ್ಲಿ ಚೆನ್ನಾಗಿ ಆಡುತ್ತಾ ಬರುತ್ತಿರುವ ಅವರಿಗೆ ತೆಲುಗು ಪ್ರೇಕ್ಷಕರು ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ತನುಜಾ ಗೆಲ್ಲುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Sat, 13 December 25




