ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (Dance Karnataka Dance) ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿದೆ. ಆದರೆ, ಕಳೆದ ವಾರದ ಎಪಿಸೋಡ್ನಲ್ಲಿ ಯಕ್ಷಗಾನಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಂದೋಲನಗಳೂ ಆದವು. ಕ್ಷಮೆ ಯಾಚಿಸಲು ಯಕ್ಷಗಾನ ಪ್ರಿಯರು ಪಟ್ಟು ಹಿಡಿದರು. ಇದಕ್ಕೆ ಜೀ ಕನ್ನಡ ವಾಹಿನಿ ಮಣಿದಿದೆ. ಕ್ಷಮೆ ಕೇಳಿ ಪೋಸ್ಟ್ ಹಾಕಿದೆ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಕಳೆದ ವಾರ ಯಕ್ಷಗಾನ ಮಾಡಲಾಗಿತ್ತು. ಈ ವೇಳೆ ಯಕ್ಷಗಾನಕ್ಕೆ ಅವಮಾನ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದವು. ಈಗ ಇದಕ್ಕೆ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದೆ.
‘ಜೀ ಕನ್ನಡ ವಾಹಿನಿಯು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೂಲಕ ಅನೇಕ ಕಲಾ ಪ್ರಕಾರಗಳನ್ನು ಗೌರವಿಸುತ್ತ, ನಾಡಿನ ಜನತೆಗೆ ಪರಿಚಯಿಸುತ್ತಲೇ ಬಂದಿದೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ’ ಎಂದು ಪೋಸ್ಟ್ ಆರಂಭಿಸಲಾಗಿದೆ.
‘ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲವೆಂದು ವಾಹಿನಿ ಸ್ಪಷ್ಟಿಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ. ನಮ್ಮ ಅತ್ಯುತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ನಾವು ಸ್ವೀಕರಿಸುತ್ತೇವೆ. ಇಲ್ಲಿವರೆಗೂ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರಿಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ’ ಎಂದು ಪೋಸ್ಟ್ ಪೂರ್ಣಗೊಳಿಸಲಾಗಿದೆ.
ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಲಗೇಜ್ ಆಟೋದಲ್ಲಿ ಅನುಶ್ರೀ-ಅರ್ಜುನ್ ಜನ್ಯ ರೈಡ್
ಈ ಕ್ಷಮೆಯಿಂದ ಯಕ್ಷಗಾನ ಪ್ರಿಯರ ಕೋಪ ಕಡಿಮೆ ಆಗಿಲ್ಲ. ‘ಅವಮಾನ ಮಾಡಿದ ಎಲ್ಲರೂ ಕ್ಷಮೆ ಕೇಳಬೇಕು. ಅದನ್ನು ಯಾವ ಕಾರಣಕ್ಕೂ ಮರು ಪ್ರಸಾರ ಮಾಡಬಾರದು. ಅದರ ವಿಡಿಯೋ zee 5 ಆ್ಯಪ್ನಿಂದ ಅಳಿಸಬೇಕು. ಇನ್ನಿತರ zee ಸೋಶಿಯಲ್ ಮೀಡಿಯಾ ಪೇಜ್ಗಳಿಂದ ಡಿಲಿಟ್ ಮಾಡಬೇಕು’ ಎಂದು ಕೆಲವರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ‘ಅವಮಾನ ಆಗಿದ್ದು ಡಿಕೆಡಿ ವೇದಿಕೆಯಲ್ಲಿ. ಅದೇ ವೇದಿಕೆಯಲ್ಲಿ ಕ್ಷಮೆ ಕೇಳಿ’ ಎಂದು ಆಗ್ರಹಿಸಿದ್ದಾರೆ.
Published On - 10:37 pm, Mon, 25 July 22