ಬಿಗ್ಬಾಸ್ ಕನ್ನಡ ಸೀಸನ್ 10ರ (BiggBoss) ಫಿನಾಲೆ ಮುಗಿದಿದೆ. ಹಲವರು ಊಹಿಸದ ರೀತಿ ಡ್ರೋನ್ ಪ್ರತಾಪ್ ಫಿನಾಲೆ ವರೆಗೆ ಬಂದಿದ್ದು ಮಾತ್ರವೇ ಅಲ್ಲದೆ ಮೊದಲ ರನ್ನರ್ ಅಪ್ ಆಗಿದ್ದಾರೆ. ಕಾರ್ತಿಕ್ ಮಹೇಶ್ ವಿಜೇತರಾಗಿದ್ದಾರೆ. ವಿಜೇತರಿಗೆ 10 ಲಕ್ಷ ನಗದು, ಮಾರುತಿ ಬ್ರಿಜಾ ಕಾರು ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಅಂತೆಯೇ ರನ್ನರ್ ಅಪ್ ಡ್ರೋನ್ ಪ್ರತಾಪ್ಗೂ ಸಹ 10 ಲಕ್ಷ ನಗದು, ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಹಣ ಹಾಗೂ ಉಡುಗೊರೆಯನ್ನು ತಾವು ಏನು ಮಾಡುವುದಾಗಿ ವೇದಿಕೆ ಮೇಲೆ ಪ್ರತಾಪ್ ಘೋಷಿಸಿದ್ದಾರೆ.
ಟಾಪ್ 2 ಆಗುತ್ತಿದ್ದಂತೆ ಖುಷಿಯಿಂದ ತೇಲಾಡಿದ ಪ್ರತಾಪ್, ನಾನು ಇದನ್ನು ನಿರೀಕ್ಷೆ ಸಹ ಮಾಡಿರಲಿಲ್ಲ ಎಂದರು. ಬಳಿಕ ಸುದೀಪ್ ಬಳಿ ಮಾತನಾಡಿದ ಪ್ರತಾಪ್, ನಾನು ಮೊದಲೇ ಹೇಳಿದ್ದೆ, ನಾನು ಆಡುತ್ತಿರುವುದು ಗೆಲ್ಲಲು ಮಾತ್ರ, ಹಣಕ್ಕಾಗಿ ಅಲ್ಲ, ಮೊದಲೇ ಹೇಳಿದಂತೆ ನನಗೆ ಟ್ರೋಫಿ ಮಾತ್ರ ಸಾಕು, ಹಣವನ್ನು ನಾನು ಯಾವುದಾದರೂ ಸೇವಾಲಯಕ್ಕೆ ದಾನ ಮಾಡುತ್ತೇನೆ ಎಂದರು. ಅದಾದ ಬಳಿಕ ರನ್ನರ್ ಅಪ್ ಆದಾಗಲೂ ಸಹ ಈ ಎಲೆಕ್ಟ್ರಿಕ್ ಬೈಕ್ ಅನ್ನು ಯಾವುದಾದರೂ ಡೆಲಿವರಿ ಕೆಲಸ ಮಾಡುವವರಿಗೆ ನಾನು ನೀಡಿಬಿಡುತ್ತೇನೆ’ ಎಂದರು.
ಇದನ್ನೂ ಓದಿ:ಬಿಗ್ಬಾಸ್ ವೋಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ವಿವರಿಸಿದ ಕಿಚ್ಚ ಸುದೀಪ್
ಇದೇ ವಿಷಯವಾಗಿ ಮಾತನಾಡಿದ ಕಾರ್ತಿಕ್, ನಾನು ನನ್ನ ತಾಯಿಯನ್ನು ದೇವರೆಂದು ನಂಬಿದ್ದೇನೆ. ಅವರಿಗಾಗಿ ಒಂದು ಗುಡಿ ಅಂದರೆ ಒಂದು ಮನೆಯನ್ನು ಕಟ್ಟಿಸಬೇಕೆಂಬುದು ನನ್ನ ಕನಸು ಅದರಂತೆ ಒಂದು ಮನೆ ಕಟ್ಟಿಸುತ್ತೇನೆ ಎಂದರು. ಕಾರ್ತಿಕ್ ಮೊದಲಿನಿಂದಲೂ ಈ ಅವರ ಕನಸಿನ ಬಗ್ಗೆ ಹೇಳಿಕೊಂಡೇ ಬಂದಿದ್ದರು. ತಾವು ಗೆದ್ದರೆ ಮನೆ ಕಟ್ಟಿಸುವುದಾಗಿ ಮನೆಯಲ್ಲಿದ್ದಾಗ ಹಲವು ಬಾರಿ ಹೇಳಿಕೊಂಡಿದ್ದರು.
ಅಂದಹಾಗೆ ಡ್ರೋನ್ ಪ್ರತಾಪ್ ಈಗಾಗಲೇ ಕೆಲವು ಸಾಲಗಳಲ್ಲಿ ಇದ್ದಾರೆ. ಪ್ರತಾಪ್ಗೆ ಹಣ ನೀಡಿದ ಪುಣೆಯ ವ್ಯಕ್ತಿ ಎರಡು ದಿನದ ಹಿಂದಷ್ಟೆ ಬೆಂಗಳೂರಿಗೆ ಬಂದು ಪ್ರತಾಪ್ಗೆ ಕೆಲವು ದಿನಗಳ ಕಾಲಾವಕಾಶ ನೀಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇದಾವುದರ ಪರಿವೆ ಇಲ್ಲದೆ ಪ್ರತಾಪ್, ಗೆದ್ದಿರುವ ಹಣವನ್ನು ದಾನ ಮಾಡುವುದಾಗಿ ಹೇಳಿದ್ದಾರೆ. ವಾಸ್ತವ ಗೊತ್ತಾದ ಬಳಿಕ ಅವರು ತಮ್ಮ ನಿರ್ಧಾರ ಬದಲಿಸುತ್ತಾರೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:53 am, Mon, 29 January 24